ಏ.24ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಬಿಎಂಪಿ ಬಜೆಟ್ ಮಂಡನೆ
ಬೆಂಗಳೂರು, ಏಪ್ರಿಲ್ 15 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆ ಮಾಡಲಿದೆ. ಏಪ್ರಿಲ್ 24ರಂದು 2020ನೇ ಸಾಲಿನ ಬಜೆಟ್ ಮಂಡಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಬಿಬಿಎಂಪಿ 2020-21ನೇ ಸಾಲಿನ ಬಜೆಟ್ ಮಂಡನೆ ಕುರಿತು ಬುಧವಾರ ಸಭೆ ನಡೆಯಿತು. ಮೇಯರ್ ಗೌತಮ್ ಕುಮಾರ್ ಜೈನ್, ಉಪ ಮೇಯರ್ ರಾಮಮೋಹನ ರಾಜು, ಆಯುಕ್ತ ಬಿ. ಎಚ್. ಅನಿಲ್ ಕುಮಾರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಎಲ್. ಶ್ರೀನಿವಾಸ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಈ ವರ್ಷದ ಬಜೆಟ್‌ಅನ್ನು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಮಂಡನೆ ಮಾಡಬೇಕೆಂದು ತೀರ್ಮಾನಿಸಲಾಯಿತು. ಏಪ್ರಿಲ್ 24ರಂದು 2020ನೇ ಸಾಲಿನ ಬಜೆಟ್ ಮಂಡನೆ ಮಾಡಲಾಗುತ್ತದೆ.

ಮಾರ್ಚ್ 30 ಅಥವ 31ರಂದು ಬಿಬಿಎಂಪಿಯ ಬಜೆಟ್ ಮಂಡನೆಯಾಗಬೇಕಿತ್ತು. ಆದರೆ, ಲಾಕ್ ಡೌನ್ ಹಿನ್ನಲೆಯಲ್ಲಿ ಅದು ಸಾಧ್ಯವಾಗಿಲ್ಲ. ಈಗ ಲಾಕ್ ಡೌನ್ ಮೇ 3ರ ತನಕ ವಿಸ್ತರಣೆಗೊಂಡಿದೆ. ಬಜೆಟ್ ಮಂಡನೆ ಮಾಡದಿರಲು ಸಾಧ್ಯವಿಲ್ಲ. ಆದ್ದರಿಂದ, ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡಿಸಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಸಂಪುಟ ಸಭೆ ನಡೆಸಿದ್ದರು. ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಲಹೆ ನೀಡಿದ್ದರು. ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಡಿಯೋ ಕಾನ್ಫರೆನ್ಸ್ ಮೂಲಕ 2020ನೇ ಸಾಲಿನ ಬಜೆಟ್ ಮಂಡನೆ ಮಾಡಲಿದೆ.
ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಿದ್ದವು. ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಪಡೆದಿದೆ. ಬಿಜೆಪಿ ಅಧಿಕಾರ ಪಡೆದ ಬಳಿಕ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಇದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್‌ಗಳಿವೆ. ಬೆಂಗಳೂರು ನಗರದ ಅಭಿವೃದ್ಧಿ ಜೊತೆಗೆ ಕೊರೊನಾ ತಡೆಯುವ ನಿಟ್ಟಿನಲ್ಲಿಯೂ ಬಜೆಟ್ ಗಮನಹರಿಸುವ ಸಾಧ್ಯತೆ ಇದೆ.












Click it and Unblock the Notifications