ಮುಂಬೈಯನ್ನು ಹಿಂದಿಕ್ಕಲಿದೆ ಬೆಂಗಳೂರು ವಿಮಾನ ನಿಲ್ದಾಣ
ಬೆಂಗಳೂರು, ನವೆಂಬರ್ 29: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸದ್ಯದರಲ್ಲಿಯೇ ಮುಂಬೈ ವಿಮಾನ ನಿಲ್ದಾಣವನ್ನು ಹಿಂದಿಕ್ಕಿ, ಅತಿ ಹೆಚ್ಚು ಜನದಟ್ಟಣೆ ಹೊಂದಿದ ೨ನೇ ವಿಮಾನ ನಿಲ್ದಾಣ ಎಂಬ ಗರಿಮೆಗೆ ಪಾತ್ರವಾಗಲಿದೆ.
ಒಂದು ರನ್ ವೇ ನಲ್ಲಿಯೇ ಅತಿ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತಿರುವ ಏಕೈಕ ವಿಮಾನ ನಿಲ್ದಾಣವೆಂದರೆ ಅದು ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್.
ಎರಡನೇ ರನ ವೇ ಸಹ ಡಿಸೆಂಬರ್ 05 ರಿಂದ ಕಾರ್ಯನಿರ್ವಹಿಸಲಿದೆ. ನಂತರ ಇನ್ನೂ ಹೆಚ್ಚು ವಿಮಾನಗಳು ಸಂಚರಿಸಲಿವೆ.
ಈ ಮೂಲಕ ಕರ್ನಾಟಕದ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ಮುಂದಿನ ಚಳಿಗಾಲದ ಹೊತ್ತಿಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣವನ್ನು ಮೂರನೇ ಸ್ಥಾನಕ್ಕೆ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಲಿದೆ.

ದೆಹಲಿಗೆ ಮೊದಲ ಸ್ಥಾನ
ಇಲ್ಲಿ ಪ್ರತಿನಿತ್ಯ ಸಾವಿರಾರು ಜನರು ವಿಮಾನವನ್ನು ಬಳಸುತ್ತಿದ್ದಾರೆ. ವಿಶ್ವದ ಬಹುತೇಕ ಪ್ರಮುಖ ನಗರಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸುವತ್ತ ದಾಪುಗಾಲು ಇಟ್ಟಿದೆ. ಬೆಂಗಳೂರಿಗೆ ವಿದೇಶಗಳಿಂದ ಸಾಕಷ್ಟು ಜನರು ಆಗಮಿಸುತ್ತಿದ್ದಾರೆ, ಬೇರೆ ಕಡೆಗಳಿಂದ ಇಲ್ಲಿಗೆ ಬಹುತೇಕ ವಿಮಾನಗಳು ಬಂದು ಹೋಗುತ್ತವೆ.
ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 2009 ರಲ್ಲಿ ಮುಂಬೈ ವಿಮಾನ ನಿಲ್ದಾಣವನ್ನು ಹಿಂದಿಕ್ಕಿ ಭಾರತದ ಅತ್ಯಧಿಕ ಜನ ದಟ್ಟಣೆ ಹೊಂದಿದ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿತ್ತು.

ದೊಡ್ಡ ರನ್ ವೇ ಹೊಂದಿದೆ
ಮುಂಬೈನ ವಿಮಾನ ನಿಲ್ದಾಣದಲ್ಲಿ 2 ಕ್ರಾಸ್ ರನ್ ಗಳನ್ನು ಹೊಂದಿದ್ದು, ಪ್ರತಿದಿನ 960 ವಿಮಾನಗಳನ್ನು ನಿಯಂತ್ರಿಸುತ್ತಿದೆ. ಕೆಲವು ಬಾರಿ ಇದು 1 ಸಾವಿರ ವಿಮಾನಗಳನ್ನು ನಿಯಂತ್ರಿಸುವುದುಂಟು.
ಪ್ರಸ್ತುತವಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ವಿಲ್ದಾಣವು ಪ್ರತಿನಿತ್ಯ ಒಟ್ಟು 731 ವಿಮಾನಗಳನ್ನು ನಿರ್ವಹಿಸುತ್ತದೆ. ಇದಕ್ಕಿಂತ ಹೆಚ್ಚಿನ ವಿಮಾನ ನಿಲ್ದಾಣಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಏಕೆಂದರೆ ಇಲ್ಲಿ ಕೇವಲ ಒಂದೇ ರನ್ ವೇ ಹೊಂದಿದ್ದು, ಆದರೂ ಸಹ ಈ ಪ್ರಮಾಣದ ವಿಮಾನಗಳನ್ನು ನಿಯಂತ್ರಿಸುತ್ತಿದ್ದು ಪ್ರಪಂಚದಲ್ಲಿಯೇ ಅತ್ಯಂತ ಬ್ಯುಸಿಯೆಸ್ಟ್ ರನ್ ವೇ ಎಂಬ ಹೆಮ್ಮೆಗೆ ಪಾತ್ರವಾಗಿದೆ.

ಅತ್ಉತ್ತಮ ವಿಮಾನ ನಿಲ್ದಾಣ
ಡಿಸೆಂಬರ್ 05 ರಿಂದ ಎರಡನೇ ರನ್ ವೇ ಪ್ರಾರಂಭವಾಗಲಿದ್ದು, ಆಗ ವಿಮಾನಗಳ ನಿರ್ವಹಣೆ ಪ್ರಮಾಣ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಮುಂದಿನ ವರ್ಷದ ಹೊತ್ತಿಗೆ ಕೆಂಪೇಗೌಡ ವಿಮಾನ ನಿಲ್ದಾಣ ಮುಂಬೈಯನ್ನು ಮೀರಿಸಿ ಮುಂದೆ ಸಾಗಲಿದೆ. ಎಂದು ಹಿರಿಯ ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ದೆಹಲಿ ವಿಮಾನ ನಿಲ್ದಾಣವೂ ಸಹ 2021 ರ ಬೇಸಿಗೆ ಹೊತ್ತಿಗೆ ನಾಲ್ಕನೇ ರನ್ ವೇ ಯನ್ನು ಪ್ರಾರಂಭಿಸಲಿದೆ. ಪ್ರಸ್ತುತವಾಗಿ 3 ರನ್ ವೇ ಗಳನ್ನು ಹೊಂದಿದೆ. ಆದರೂ ಪ್ರತಿನಿತ್ಯ 1,515 ವಿಮಾನಗಳನ್ನು ನಿರ್ವಹಿಸುತ್ತಿದೆ.

ವಿಮಾನಗಳ ನಿರ್ವಹಣೆಯಲ್ಲಿ ಮುಂಚೂಣಿ
ಭಾರತದ ಅತ್ಯಂತ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣಗಳನ್ನು ಕ್ರಮವಾಗಿ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಹಾಗೂ ಕೋಲ್ಕತ್ತಾ ವಿಮಾನ ನಿಲ್ದಾಣಗಳೆಂದು ಗುರುತಿಸಬಹುದು.
ಅನೇಕ ದಶಕಗಳಿಂದ ಮುಂಬೈ ನಗರ ವಾಯುಯಾನದ ಹಬ್ ಆಗಿ ಗುರುತಿಸಿಕೊಂಡಿತ್ತು, ವಾಣಿಜ್ಯ ನಗರಿ ಖ್ಯಾತಿಯ ನವಿ ಮುಂಬೈ ವಿಮಾನ ನಿಲ್ದಾಣ ಪ್ರಾರಂಭವಾದರೆ ಮತ್ತೆ ಹೆಚ್ಚು ವಿಮಾನಗಳ ಸಂಪರ್ಕಕ್ಕೆ ಸಹಕಾರಿಯಾಗಲಿದೆ. ಉತ್ತರ ಪ್ರದೇಶದಲ್ಲಿಯೂ ಇನ್ನೊಂದು ವಿಮಾನ ನಿಲ್ದಾಣ ಪ್ರಾರಂಭವಾಗಲು ಇನ್ನೂ 3 ರಿಂದ 4 ವರ್ಷಗಳು ಬೇಕಾಗುತ್ತವೆ.












Click it and Unblock the Notifications