Avarebele mela 2023; ವಿವಿಧ ಖಾದ್ಯ ಸವಿಯಲು ಬನ್ನಿ
ಬೆಂಗಳೂರು, ಜನವರಿ 05; ಉದ್ಯಾನ ನಗರಿ ಬೆಂಗಳೂರಿನ ಚುಮು-ಚುಮು ಚಳಿಗೆ ಅವರೆ ಮೇಳ ಬಂದಿದೆ. ಗುರುವಾರ 2023ನೇ ಸಾಲಿನ ಅವರೆ ಮೇಳಕ್ಕೆ ಚಾಲನೆ ಸಿಗಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023ನೇ ಸಾಲಿನ ಅವರೆ ಮೇಳ ಉದ್ಘಾಟನೆ ಮಾಡಲಿದ್ದಾರೆ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನವರಿ 5 ರಿಂದ 9ರ ತನಕ ಅವರೆ ಮೇಳ ನಡೆಯಲಿದೆ.
100ಕ್ಕೂ ಹೆಚ್ಚು ಬಗೆಯ ಭಕ್ಷ್ಯಗಳು ಈ ಬಾರಿಯ ಅವರೆ ಮೇಳದಲ್ಲಿ ಸಿಗಲಿವೆ. ಅವರೆ ಬೇಳೆ ಚಿಕ್ಕಿ, ಅವರೆ ಬೇಳೆ ಹಲ್ವಾ, ಫ್ರೈಡ್ ರೈಸ್ ಸೇರಿದಂತೆ ಅನೇಕ ಬಗೆಯ ಖಾದ್ಯಗಳನ್ನು ಸವಿಯಲು ನೂರಾರು ಜನರು ಆಗಮಿಸುವ ನಿರೀಕ್ಷೆ ಇದೆ.

ಈ ವರ್ಷ ದಿ. ಪುನೀತ್ ರಾಜ್ ಕುಮಾರ್ ಗೌರವಾರ್ಥ ಅಪ್ಪು ಸ್ಪೆಷಲ್ ಎಂಬ ಸಿಹಿತಿಂಡಿಯನ್ನು ಪರಿಚಯಿಸಲಾಗುತ್ತದೆ. ಮೇಳದಲ್ಲಿ ರೈತರು ಪಾಲ್ಗೊಂಡು ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೇ ನೇರವಾಗಿ ಗ್ರಾಕರಿಗೆ ಅವರೆ ಬೇಳೆ ಮಾರಾಟ ಮಾಡಬಹುದಾಗಿದೆ.

ತಿನಿಸುಗಳ ವಿವರ; 5 ದಿನಗಳ ಕಾಲ ನಡೆಯುವ ಅವರೆ ಮೇಳದಲ್ಲಿ ಬಿಳಿ ಹೋಳಿಗೆ, ಅವರೆ ಕಾಳು ಉಪ್ಪಿಟ್ಟು, ಖಾಲಿ ದೋಸೆ, ಹನಿ ಜಿಲೇಬಿ, ಹಿತಕದ ಅವರೆ ಬೇಳೆ ರೋಲ್, ಅವರೆಕಾಳು ಚಿತ್ರನ್ನ, ಅವರೆ ಬೇಳೆ ಮಂಚೂರಿ, ಪುದೀನಾ ಹಿತಕದ ಅವರೆ ಬೇಳೆ, ಅವಲಕ್ಕಿ ಮಿಕ್ಸ್, ಗೋಡಂಬಿ ಮಿಕ್ಸ್, ಅವರೆ ಬೇಳೆ ಜಾಮೂನು ಮುಂತಾದ ಖಾದ್ಯಗಳು ದೊರೆಯಲಿವೆ.
ಬಸವನಗುಡಿಯ ಕಡಲೆಕಾಯಿ ಪರಿಷೆ ಬಳಿಕ ಅವರೆ ಮೇಳ ಪ್ರತಿ ವರ್ಷ ನಡೆಯುತ್ತದೆ. ವಾಸವಿ ಕಾಂಡಿಮೆಂಟ್ಸ್ ವಿವಿ ಪುರದ ಸಜ್ಜನ್‌ರಾವ್ ಸರ್ಕ್‌ಲ್‌ನಲ್ಲಿ ಅವರೆ ಮೇಳವನ್ನು 2000ನೇ ಇಸವಿಯಿಂದ ಆಯೋಜನೆ ಮಾಡುತ್ತಿತ್ತು.
ಬೆಂಗಳೂರು ನಗರದಲ್ಲಿ ಕರಗ, ಕಡಲೆಕಾಯಿ ಪರಿಷೆಯಂತೆ ಅವರೆ ಮೇಳಕ್ಕೂ ತನ್ನದೇ ಆದ ಸ್ಥಾನವಿದೆ. ವಿವಿ ಪುರಂನಲ್ಲಿ ನಡೆಯುತ್ತಿದ್ದ ಮೇಳಕ್ಕೆ ನಗರದ ವಿವಿಧ ಭಾಗಗಳಿಂದ ಹಲವಾರು ಜನರು ಆಗಮಿಸುತ್ತಾರೆ.
ಪ್ರತಿ ವರ್ಷ ಸಂಭ್ರಮದಿಂದ ಅವರೆ ಮೇಳ ನಡೆಯುತ್ತದೆ. ಚಳಿಗಾಲದಲ್ಲಿ ಸಾವಿರಾರು ಜನರು ಆಗಮಿಸಿ, ಅವರೆಬೇಳೆಯಿಂದ ಮಾಡಿದ ವಿವಿಧ ಖಾದ್ಯಗಳನ್ನು ಸವಿಯುತ್ತಾರೆ. ಕಳೆದ ಬಾರಿ ಕೋವಿಡ್ ಕಾರಣದಿಂದ ಸರಳವಾಗಿ ಮೇಳ ನಡೆದಿತ್ತು.
ರಾಮನಗರ ಜಿಲ್ಲೆಯ ಮಾಗಡಿ ಭಾಗದ ರೈತರು ಅವರೆಬೇಳೆ ಮಾರಾಟ ಮಾಡಲು ಮೇಳಕ್ಕೆ ಆಗಮಿಸುತ್ತಾರೆ. ವಿವಿ ಪುರಂನಲ್ಲಿ ನಡೆಯುತ್ತಿದ್ದ ಉತ್ಸವ ಈ ಬಾರಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿದೆ.
ಪ್ರತಿ ವರ್ಷ ನಡೆಯುವ ಅವರೆ ಮೇಳದಿಂದ ನೂರಾರು ರೈತರಿಗೆ ಅನುಕೂಲವಾಗುತ್ತದೆ. ನೇರವಾಗಿ ಅವರು ಅವರೆಬೇಳೆಯನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಒಂದೇ ಸೂರಿನಲ್ಲಿ ಅವರೆಕಾಳು, ಅವರೆಕಾಳಿನ ವಿವಿಧ ಖಾದ್ಯಗಳು ಜನರಿಗೆ ಸಿಗಲಿವೆ.












Click it and Unblock the Notifications