ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಆಟೋ ಚಾಲಕರಿಂದ ದೊಡ್ಡ ಶಾಕ್
ರಾಜ್ಯದಾದ್ಯಂತ ಸರ್ಕಾರಿ ಬಸ್ ಟಿಕೆಟ್ ದರ ಏರಿಕೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರವು ಎಲ್ಲ ನಾಲ್ಕೂ ನಿಗಮಗಳ ವ್ಯಾಪ್ತಿಯಲ್ಲಿ ಬಸ್ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಳ ಮಾಡಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಯಲ್ಲಿದೆ. ಪ್ರಯಾಣಿಕರು ಈ ಆಘಾತದಲ್ಲಿರುವಾಗಲೇ ಆಟೋ ಚಾಲಕರು ಮತ್ತೊಂದು ದೊಡ್ಡ ಶಾಕ್ ನೀಡಲು ಮುಂದಾಗಿದ್ದಾರೆ.
ಆಟೋ ಚಾಲಕರು ಕೂಡ ಮೊದಲಿನಿಂದಲೂ ದರ ಏರಿಸಲು ನಿರ್ಧಾರ ಕೈಗೊಂಡಿದ್ದರು. ಆದರೆ ಅದು ಯಶಸ್ವಿಯಾಗಿರಲಿಲ್ಲ. ಇದೀಗ ಬಸ್ ದರ ಏರಿಕೆ ಬಿಸಿಯಲ್ಲೇ ಆಟೋ ಚಾಲಕರು ಕೂಡ ದರ ಹೆಚ್ಚಳ ಮಾಡಲು ನಿರ್ಣಯ ತೆಗೆದುಕೊಂಡಿದ್ದು, ಈ ಸಂಬಂಧ ಕೆಲ ಆಟೋ ಚಾಲಕರ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ಮಾಡಿವೆ ಎಂದು ತಿಳಿದುಬಂದಿದೆ.

ಕಳೆದ ವರ್ಷದಿಂದಲೂ ಆಟೋ ಪ್ರಯಾಣ ದರ ಏರಿಸಬೇಕು ಎಂದು ಚಾಲಕರು ಪಟ್ಟು ಹಿಡಿದಿದ್ದರು. ಆದರೆ ಇದಕ್ಕೆ ಸರ್ಕಾರ ಅವಕಾಶ ನೀಡಿರಲಿಲ್ಲ. ಇದೀಗ ಬಸ್ ದರ ಏರಿಕೆ ಬೆನ್ನಲ್ಲೇ ಆಟೋ ಪ್ರಯಾಣ ದರ ಏರಿಕೆ ಪ್ರಸ್ತಾವನೆಯನ್ನು ಚಾಲಕರು ಮುಂದಿಟ್ಟಿದ್ದಾರೆ.
ಇನ್ನು ಆಟೋ ಚಾಲಕರು ಪ್ರತಿ ಕಿಲೋಮೀಟರ್‌ಗೆ 5 ರೂಪಾಯಿ ದರ ಏರಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಪ್ರತಿ ಎರಡು ಕಿಲೋಮೀಟರ್‌ಗೆ 10 ರೂಪಾಯಿ ಪ್ರಯಾಣ ದರ ನಿಗದಿ ಮಾಡುವಂತೆಯೂ ಬೇಡಿಕೆ ಇಟ್ಟಿದ್ದಾರೆ. ಸದ್ಯ ಆಟೋ ಪ್ರಯಾಣ ದರವು ಕನಿಷ್ಠ 30 ರೂಪಾಯಿ ಇದ್ದು, ಇದನ್ನು 40 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೇ ಡಿಸೆಂಬರ್‌ನಲ್ಲಿ ಆಟೋ ಚಾಲಕರ ಸಂಘಟನೆಗಳು ದರ ಏರಿಕೆ ಸಂಬಂಧ ಸಭೆ ಕರೆದಿದ್ದವು. ಆದರೆ ಸಭೆ ನಿಗದಿಯಂತೆ ನಡೆಯಲಿಲ್ಲ. ಇದೀಗ ಮತ್ತೆ ಸಭೆ ನಡೆಸಲು ನಿರ್ಧರಿಸಿದ್ದು, ಇದರಲ್ಲಿ ಆಟೋ ಪ್ರಯಾಣ ದರ ಏರಿಸುವ ಸಂಬಂಧ ಬಲವಾದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇಲ್ಲೇ ಪ್ರಯಾಣ ದರ ಎಷ್ಟು ನಿಗದಿ ಮಾಡಬೇಕು ಎಂಬುದರ ತೀರ್ಮಾನವೂ ಆಗಲಿದೆ.

ದರ ಏರಿಕೆ ಸಂಬಂಧ 2024ರ ಡಿಸೆಂಬರ್ 23 ರಂದು ಅಸೋಸಿಯೇಷನ್ಗಳ ಸಭೆ ಕರೆಯಲಾಗಿತ್ತು. ಆದರೆ, ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಯಿತು. ಈಗ ಮತ್ತೆ ಇದೇ ತಿಂಗಳು ಮೂರನೇ ವಾರದಲ್ಲಿ ಸಭೆ ನಡೆಯಲಿದ್ದು, ಪ್ರಯಾಣ ದರ ಏರಿಕೆ ಬಗ್ಗೆ ತೀರ್ಮಾನ ಆಗಲಿದೆ.
ಆದರೆ, ಆಟೋ ಸಂಘಟನೆಗಳಲ್ಲೇ ದರ ಏರಿಕೆ ಬಗ್ಗೆ ಒಮ್ಮತ್ತವಿಲ್ಲ. ಬೈಕ್ ಟ್ಯಾಕ್ಸಿ ಬ್ಯಾನ್ ಆಗುವವರೆಗೂ ಆಟೋ ಪ್ರಯಣಾ ದರ ಏರಿಕೆ ಬೇಡ ಎನ್ನುತ್ತಿದ್ದಾರೆ. ಎಲ್ಲ ಚಾಲಕ ಸಂಘಟನೆಗಳಿಂದ ಒಂದೇ ಅಭಿಪ್ರಾಯ ನೀಡಿದ ಬಳಿಕ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ದರ ಏರಿಕೆ ಮಾಡಲಿದ್ದಾರೆ. ಸದ್ಯ ಬಸ್ ಪ್ರಯಾಣ ದರ ಏರಿಕೆಯಿಂದ ಕಂಗೆಟ್ಟಿರುವ ಜನಕ್ಕೆ ಆಟೋ ದರ ಕೂಡ ಏರಿದರೆ ಜೇಬು ಸುಡುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಆಟೋ ಅವಲಂಬಿತರಿಗೆ ಇನ್ನು ಮುಂದೆ ಪ್ರಯಾಣ ಕೂಡ ದುಬಾರಿಯಾಗಲಿದೆ.












Click it and Unblock the Notifications