Fancy Number : ವಾಹನಗಳಿಗೆ ಫ್ಯಾನ್ಸಿ ನಂಬರ್‌ಗಳ ಹರಾಜಿಗೆ ಅರ್ಜಿ ಆಹ್ವಾನ: ಆಗಸ್ಟ್ 31ರಂದು ಹರಾಜು
ಬೆಂಗಳೂರು, ಆಗಸ್ಟ್ 25: ಫ್ಯಾನ್ಸಿ ನಂಬರ್‌ಗಳ ಹರಾಜಿನ ಮೂಲಕ ಅಧಿಕ ಆದಾಯ ಗಳಿಸುತ್ತಿರುವ ರಾಜ್ಯ ಸಾರಿಗೆ ಇಲಾಖೆಯು 'ಕೆಎ 04 ಎನ್‌ಡಿ' ಸರಣಿಗೆ ಅರ್ಜಿ ಆಹ್ವಾನಿಸಿದೆ. ಆಗಸ್ಟ್ 31ರಂದು ಹರಾಜು ಆರಂಭವಾಗಲಿದೆ. ಈ ಬಾರಿ ಕೂಡ ಸಾರಿಗೆ ಇಲಾಖೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ನಿರೀಕ್ಷೆ ಇದೆ.
ಆ.17ರಂದು ಕಳೆದ ಬಾರಿ ನಡೆದ ಫ್ಯಾನ್ಸಿ ನಂಬರ್ ಹರಾಜಿನಲ್ಲಿ ಸಾರಿಗೆ ಇಲಾಖೆ 59.81 ಲಕ್ಷ ರೂಪಾಯಿ ಆದಾಯ ಗಳಿಸಿತ್ತು. 'ಕೆಎ 05 ಎನ್‌ಜೆ 0001' ಸಂಖ್ಯೆ ಬರೋಬ್ಬರಿ 20.75 ಲಕ್ಷ ರೂಪಾಯಿಗೆ ಹರಾಜಾಗಿತ್ತು. ಕೆಎ 05 ಎನ್‌ಜೆ 0007, ಕೆಎ 05 ಎನ್‌ಜೆ 0009, ಕೆಎ 05 ಎನ್‌ಜೆ 0555 ಮತ್ತು ಕೆಎ 05 ಎನ್‌ಜೆ 5555 ಸಂಖ್ಯೆಗಳಿಗೆ ವಾಹನ ಮಾಲೀಕರು 3.2 ಲಕ್ಷ ರೂಪಾಯಿ ಪಾವತಿಸಿದ್ದರು.

ಕೆಎ 05 ಎನ್‌ಜೆ 9999 ಸಂಖ್ಯೆಯು 3.05 ಲಕ್ಷ ರೂಪಾಯಿಗೆ ಹರಾಜಾಗಿತ್ತು. ಕೆಎ 05 ಎನ್‌ಜೆ 7777 ಸಂಖ್ಯೆ 2.35 ಲಕ್ಷ ರೂ., ಕೆಎ 05 ಎನ್‌ಜೆ 0999 ಸಂಖ್ಯೆಗೆ ರೂ. 2.25 ಲಕ್ಷ, ಕೆಎ 05 ಎನ್‌ಜೆ 0666 ಸಂಖ್ಯೆ 1.75 ಲಕ್ಷ ರೂಪಾಯಿ ಮತ್ತು ಕೆಎ 05 ಎನ್‌ಜೆ 6666 ಸಂಖ್ಯೆ 1.70 ಲಕ್ಷ ರೂಪಾಯಿಗೆ ಹರಾಜಾಗಿತ್ತು.
ಆಗಸ್ಟ್ 31ರೊಳಗೆ ಅರ್ಜಿ ಸಲ್ಲಿಸಿ
ಸಾರಿಗೆ ಇಲಾಖೆಯು ಕರ್ನಾಟಕ ಮೋಟಾರು ವಾಹನ ನಿಯಮಗಳು, 1989 ರ ನಿಯಮ 46 (ಎಎ) 1 ರಿಂದ 999 ರ ನಡುವಿನ ಲಘು ಮೋಟಾರು ವಾಹನಗಳಿಗೆ ಫ್ಯಾನ್ಸಿ ನೋಂದಣಿ ಸಂಖ್ಯೆಗಳನ್ನು ಹಂಚಿಕೆ ಮಾಡಲು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ.
ಈ ಬಾರಿ 'ಕೆಎ 04 ಎನ್‌ಡಿ' ಸರಣಿಯ ಹರಾಜು ಪ್ರಕ್ರಿಯೆಯು ಆ.31ರಂದು ಮಧ್ಯಾಹ್ನ 12 ಗಂಟೆಗೆ ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ನಡೆಯಲಿದೆ. ಆಸಕ್ತರು ಕಾರ್ಯದರ್ಶಿ, ರಾಜ್ಯ ಸಾರಿಗೆ ಪ್ರಾಧಿಕಾರ, ಬೆಂಗಳೂರು. ಈ ಹೆಸರಿನಲ್ಲಿ 75,000 ರೂ. ಡಿಮ್ಯಾಂಡ್ ಡ್ರಾಫ್ಟ್‌ನೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಜೊತೆ ಡಿಡಿ ಯನ್ನು ಆಗಸ್ಟ್ 31ರ ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬೇಕು.
ಅರ್ಜಿದಾರರಿಗೆ ಟೋಕನ್ ನೀಡಲಾಗುವುದು. ಯಶಸ್ವಿ ಬಿಡ್‌ದಾರರು ಎರಡು ಕೆಲಸದ ದಿನಗಳಲ್ಲಿ ಒಟ್ಟು ಬಿಡ್ ಮೊತ್ತವನ್ನು ಡಿಡಿ ರೂಪದಲ್ಲಿ ಪಾವತಿಸಬೇಕು ಮತ್ತು 90 ದಿನಗಳಲ್ಲಿ ವಾಹನವನ್ನು ನೋಂದಾಯಿಸಿಕೊಳ್ಳಬೇಕು, ವಿಫಲವಾದರೆ ಬಿಡ್ಡಿಂಗ್ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.












Click it and Unblock the Notifications