ಬೆಂಗಳೂರು:ಪಿಜಿ ಯುವತಿಯರ ನಗ್ನ ದೃಶ್ಯ ಸೆರೆ: ಸೆಕ್ಸ್‌ಗೆ ಪೀಡಿಸುತ್ತಿದ್ದ ಕಾಮುಕನ ಬಂಧನ
ಬೆಂಗಳೂರು, ಡಿಸೆಂಬರ್ 09: ಬೆಂಗಳೂರಿನಲ್ಲಿ ಪಿಜಿಯಲ್ಲಿ ವಾಸಿಸುತ್ತಿದ್ದ ಮಹಿಳೆಯರ ನಗ್ನ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಲೈಂಗಿಕತೆಗೆ ಪೀಡಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೊಮ್ಮನಹಳ್ಳಿಯಲ್ಲಿ ವಾಸಿಸುತ್ತಿದ್ದ ಪಾಂಡಿಚೇರಿ ಮೂಲದ ಆರೋಪಿ ನಿರಂಜನ್ ನನ್ನು ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ನಿರಂಜನ್ ತಾನು ವಾಸಿಸುತ್ತಿದ್ದ ಪಿಜಿಯ ಪಕ್ಕದಲ್ಲೇ ಇದ್ದ ಮಹಿಳಾ ಪಿಜಿಯಲ್ಲಿ ಯುವತಿಯರು ಸ್ನಾನಕ್ಕೆ ಹೋದಾಗ ಕದ್ದು ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್ ಮಾಡುತ್ತಿದ್ದ. ಬಳಿಕ ಆ ಮಹಿಳೆಯರ ನಂಬರಿಗೆ ತಾನು ತೆಗೆದ ನಗ್ನ ದೃಶ್ಯಗಳನ್ನು ಅನಾಮಧೇಯರ ಹೆಸರಲ್ಲಿ ವಿಡಿಯೋ ಕಳುಹಿಸಿ ಸೆಕ್ಸಗೆ ಒತ್ತಾಯಿಸುತ್ತಿದ್ದ. ಹೇಳಿದಂತೆ ಕೇಳದಿದ್ದರೆ ಆ ವಿಡಿಯೋಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೆದರಿಸಿದ್ದ ಎಂದು ಸಂತ್ರಸ್ತೆಯೊಬ್ಬರು ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ಎಚ್ಚೆತ್ತ ಪೊಲೀಸರು ಕಾಮುಕ ನಿರಂಜನ್ ಜೊತೆಗೆ ಚಾಟ್ ಮಾಡಿದ್ದಾರೆ. ನಿನ್ನ ಬೇಡಿಕೆಗೆ ಒಪ್ಪಿರುವುದಾಗಿ ಯುವತಿಯರ ಮೊಬೈಲ್ ಮೂಲಕ ಸಂದೇಶ ಕಳುಹಿಸಿದ್ದಾರೆ. ನಿಜವಾಗಿಯು ಯುವತಿಯರೇ ಸೆಕ್ಸ್‌ಗೆ ಒಪ್ಪಿದ್ದಾರೆಂದು ತಿಳಿದ ಆರೋಪಿ ಹೋಟೆಲ್‌ಗೆ ತೆರಳಿದ್ದಾನೆ. ಈ ವೇಳೆ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಿಜಿ ಮಾಲೀಕನ ಸಲುಗೆ ದುರ್ಬಳಕೆ
ಪಾಂಡಿಚೇರಿ ಮೂಲದ ನಿರಂಜನ್ 4 ವರ್ಷಗಳಿಂದ ಬೊಮ್ಮನಹಳ್ಳಿಯ ಪಿಜಿಯಲ್ಲೇ ನೆಲೆಸಿದ್ದ. ಪಿಜಿ ಮಾಲೀಕನೊಂದಿಗೆ ಆತ್ಮೀಯತೆ ಹೊಂದಿದ್ದ. ಆ ಮಾಲೀಕರ ಮಹಿಳಾ ಪಿಜಿಗೂ ಮಾಲೀಕನಾಗಿದ್ದ. 10ನೇ ತರಗತಿವರೆಗೆ ಓದಿಕೊಂಡಿದ್ದ ಆರೋಪಿಗೆ ಪ್ರತಿ ತಿಂಗಳು ತಾಯಿ ಹಣ ಕಳುಹಿಸುತ್ತಿದ್ದರು. ಅದೇ ಹಣದಲ್ಲೇ ಮೋಜು ಮಸ್ತಿ ಮಾಡುತ್ತಿದ್ದ. ಪಿಜಿಗೆ ಸಂಬಂಧಿಸಿದ ಏನಾದರು ಕೆಲಸಗಳಿದ್ದರೆ ತಾನೇ ಮುಂದೇ ನಿಂತು ಮಾಡಿಸುತ್ತಿದ್ದ. ಹೀಗಾಗಿಯೇ ಆತ ಮಹಿಳೆಯರ ಪಿಜಿಯಲ್ಲಿ ಸಲೀಸಾಗಿ ಓಡಾಡುತ್ತಿದ್ದ. ಇದೇ ಸಮಯದಲ್ಲೇ ಆತ ಮಹಿಳಾ ಪಿಜಿಯಲ್ಲಿ ಯುವತಿಯ ಚಲನವಲನಗಳ ಮೇಲೇ ಕಣ್ಣಿಟ್ಟಿದ್ದ.
ಮಾಲೀಕರು ನೀಡಿದ ಈ ಸಲುಗೆಯಿಂದಲೇ ಆರೋಪಿ ಲೇಡಿಸ್ ಪಿಜಿಗೆ ತೆರಳಿ ಯುವತಿಯರು ಸ್ನಾನ ಮಾಡುವಾಗ ಸೆರೆ ಹಿಡಿದಿದ್ದಾನೆ. ಅದಕ್ಕೆಂದೆ ತನ್ನ ಪಿಜಿ ಮೇಲೆ ಕೂತು ಪಕ್ಕದ ಪಿಜಿಯ ಮೇಲೆ ಯುವತಿಯರು ಒಣ ಹಾಕಿದ್ದ ಟವಲ್ ಅನ್ನು ತೆಗೆದುಕೊಂಡು ಹೋಗುವುದನ್ನೆ ಕಾಯುತ್ತಿದ್ದ. ಟವೆಲ್ ತೆಗೆದುಕೊಂಡು ಹೋಗುತ್ತಿದ್ದಂತೆ ಪಕ್ಕ ಪಿಜಿಗೆ ಜಿಗಿದು ಸ್ನಾನ ಗೃಹದ ಕಿಟಕಿ ಮೇಲೆ ಕುಳಿತು ತನ್ನ ಮೊಬೈಲನ್ನು ತೂಗು ಬಿಟ್ಟು ನಗ್ನ ದೃಶ್ಯ ಸೆರೆ ಹಿಡಿಯುತ್ತಿದ್ದ.
ನಂತರ ಅದೇ ಪಿಜಿಯಲ್ಲಿ ರಿಜಿಸ್ಟರ್ ನಲ್ಲಿ ಆ ಯುವತಿಯರ ಮೊಬೈಲ್ ನಂಬರ್ ತೆಗೆದುಕೊಳ್ಳುತ್ತಿದ್ದ. ಬಳಿಕ ತಾನು ಡೌನ್‌ಲೋಡ್ ಮಾಡಿಕೊಂಡ ಆಪ್ ಮೂಲಕ ತನ್ನ ನಂಬರ್ ಅನ್ನು ವಿದೇಶಿ ನಂಬರ್ ಆಗಿ ಪರಿವರ್ತಿಸಿ ಅನಾಮಧೇನಯಂತೆ ಯುವತಿಯರನ್ನು ಸಂಪರ್ಕಿಸುತ್ತಿದ್ದ. ಇದೇ ರೀತಿ ಕೆಲವು ಭಾರಿ ಯುವತಿಯರನ್ನು ದುರ್ಬಳಕೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications