ದೀಪಾವಳಿ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಟಾಕಿ ಮಳಿಗೆ ತೆರೆಯಲು ಅರ್ಜಿ ಆಹ್ವಾನ
ಬೆಂಗಳೂರು, ಅಕ್ಟೋಬರ್ 29: 2021ರ ದೀಪಾವಳಿ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಟಾಕಿ ಮಳಿಗೆ ತೆರೆದು ಮಾರಾಟಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅನಧಿಕೃತ ಪಟಾಕಿ ಮಳಿಗೆಗಳಿಂದ ಸಂಭವಿಸಬಹುದಾದ ಬೆಂಕಿ ಅವಘಡ ಹಾಗೂ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆ ಫುಲ್ ಅಲರ್ಟ್ ಆಗಿದ್ದು, ಹಬ್ಬದಂದು ಪಟಾಕಿ ಮಳಿಗೆಗಳನ್ನು ತೆರೆಯಲು ಸೂಕ್ತ ವ್ಯವಸ್ಥೆ ಮಾಡಲು ಮುಂದಾಗಿದೆ. ಆ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ಮೈದಾನಗಳಲ್ಲಿ ಚಿಲ್ಲರೆ ಪಟಾಕಿ ಅಂಗಡಿ ತೆರೆಯಲು ಸಾರ್ವಜನಿಕರಿಂದ ನಗರ ಪೊಲೀಸ್ ಇಲಾಖೆಯಿಂದ ಅರ್ಜಿ ಆಹ್ವಾನಿಸಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು ನಗರದಲ್ಲಿ ಪಟಾಕಿ ಮಳಿಗೆ ತೆರೆಯಲು ಅರ್ಜಿ ಆಹ್ವಾನಿಸಿದ್ದು, ಸೇವಾ ಸಿಂಧು, ಬೆಂಗಳೂರು ಒನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಅ.30 ಕೊನೆಯ ದಿನವಾಗಿದ್ದು, ಅ.31ಕ್ಕೆ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ತನ್ನ ಪ್ರಕಟಣೆಯಲ್ಲಿ ಸೂಚಿಸಿದೆ.
ಅ.30ರ ಸಂಜೆ 5.30ರ ವರೆಗೆ ಅರ್ಜಿ ಸಲ್ಲಿಸಬಹುದು
ಸೇವಾಸಿಂಧು ವೆಬ್ ಪೋರ್ಟಲ್ ಅಥವಾ ಬೆಂಗಳೂರು ಒನ್ ಕೇಂದ್ರದಲ್ಲಿ ಅ.29ರ ಬೆಳಗ್ಗೆ 8 ಗಂಟೆಯಿಂದ ಅ.30ರ ಸಂಜೆ 5.30ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಶುಲ್ಕ 5 ಸಾವಿರ ರೂ. ಹಾಗೂ ಆನ್‌ಲೈನ್‌ನಲ್ಲಿ ಪಾವತಿ ಕಡ್ಡಾಯಗೊಳಿಸಲಾಗಿದೆ. ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ಹೆಸರಿನಲ್ಲಿ 25 ಸಾವಿರ ರೂ. ಮೌಲ್ಯದ ಡಿಡಿ ಹಾಗೂ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಹೆಸರಿನಲ್ಲಿ 5 ಸಾವಿರ ರೂ. ಡಿಡಿಯನ್ನು ಅರ್ಜಿ ಜತೆಗೆ ಅಪ್‌ಲೋಡ್ ಮಾಡಬೇಕು. ಜತೆಗೆ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ, ಆಧಾರ್ ಅಥವಾ ಮತದಾರರ ಚೀಟಿ, ಜಿಎಸ್‌ಟಿ ನಂಬರ್ ಅಪ್‌ಲೋಡ್ ಅಗತ್ಯವಿದೆ.
ನಗರ ಪೊಲೀಸ್ ಆಯುಕ್ತರ ಕಚೇರಿಗೆ ತಲುಪಿಸಬೇಕು
ಅರ್ಜಿದಾರ ತನ್ನ ಅಥವಾ ತಮ್ಮ ಕುಟುಂಬದ ಇತರ ಸದಸ್ಯರ ಹೆಸರಿನಲ್ಲಿ 2ನೇ ಅರ್ಜಿ ಸಲ್ಲಿಸಿಲ್ಲ ಎಂದು 20 ರೂ. ಮುಖಬೆಲೆಯ ಸ್ಟಾಂಪ್ ಪೇಪರ್ ಮೇಲೆ ಅಫಿಡೆವಿಟ್ ಮಾಡಿಸಬೇಕು. ಸಾಮಾನ್ಯ ವರ್ಗ, ಸೊಸೈಟಿ/ ಸಂಘ, ವಿಕಲ ಚೇತನರು, ಎಸ್‌ಸಿ/ ಎಸ್‌ಟಿ ಅಥವಾ ಹಿಂದುಳಿದ ವರ್ಗದವರು ಆಗಿದ್ದರೆ ಅರ್ಜಿ ಜತೆಗೆ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

ಅ.30ರ ಸಂಜೆ 5.30ರ ಒಳಗಾಗಿ ಅರ್ಜಿ ಜತೆಗೆ ಸಲ್ಲಿಸಿದ್ದ ದಾಖಲೆ ಮತ್ತು ಡಿಡಿಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತಲುಪಿಸಬೇಕು. ಇಲ್ಲವಾದರೆ ಅರ್ಜಿ ತಿರಸ್ಕರಿಸಲಾಗುತ್ತದೆ ಅಥವಾ ಅರ್ಜಿ ಶುಲ್ಕ 5 ಸಾವಿರ ರೂ. ಮರುಪಾವತಿಸುವುದಿಲ್ಲ.
ಲಾಟರಿ ಮೂಲಕ ಆಯ್ಕೆ
ಒಂದು ಮೈದಾನಕ್ಕೆ ಒಬ್ಬ ವ್ಯಕ್ತಿ ಒಂದೇ ಅರ್ಜಿ ಸಲ್ಲಿಸಬೇಕು. ಬಿಬಿಎಂಪಿ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನಿಗದಿ ಮಾಡಿರುವ ಮೈದಾನದಲ್ಲಿ ಮಾತ್ರ ಪಟಾಕಿ ಮಳಿಗೆ ತೆರೆಯಲು ಅವಕಾಶ ಇರುತ್ತದೆ. ಪಟಾಕಿ ಮಳಿಗೆಗೆ ತಾತ್ಕಾಲಿಕ ಪರವಾನಗಿ ನೀಡಲು ಅ.31ರ ಮಧ್ಯಾಹ್ನ 3 ಗಂಟೆಗೆ ಮೈಸೂರು ರಸ್ತೆ ಸಿಎಆರ್ ಕೇಂದ್ರ ಸ್ಥಾನ ಆವರಣದಲ್ಲಿ ಲಾಟರಿ ನಡೆಸಲಾಗುತ್ತದೆ.
ಲಾಟರಿ ಮೂಲಕ ಆಯ್ಕೆಯಾದ ಫಲಾನುಭವಿಗಳಿಗೆ ಪಟಾಕಿ ಮಳಿಗೆ ತೆರೆಯಲು ಪರವಾನಗಿ ನೀಡಲಾಗುತ್ತದೆ. ನ.2ರಂದು ಆನ್‌ಲೈನ್‌ನಲ್ಲಿ ಪರವಾನಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇನ್ನು ಹಬ್ಬದ ನೆಪದಲ್ಲಿ ಪರಿಸರಕ್ಕೆ ಹಾನಿ ಮಾಡಬಾರದು. ಆದಷ್ಟು ಕಡಿಮೆ ಪಟಾಕಿ ಬಳಸುವ ಮೂಲಕ ಹಬ್ಬ ಆಚರಿಸುವುದು ಒಳಿತು. ಇನ್ನು ಪಟಾಕಿ ಸಿಡಿಸುವಾಗ ಮಕ್ಕಳು ಸೇರಿದಂತೆ ಎಲ್ಲರೂ ಅಗತ್ಯ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಸುರಕ್ಷಿತ.