ಇನ್ಮೇಲೆ ಕನ್ನಡ ಗೊತ್ತಿಲ್ಲ ಅನ್ನಂಗಿಲ್ಲ, ಆಟೋ ಕನ್ನಡಿಗನ ಪ್ರಯತ್ನಕ್ಕೆ ಎಲ್ರೂ ಫಿದಾ!
ಬಹುಭಾಷಿಕರ ನಗರವಾಗಿರುವ ಬೆಂಗಳೂರಿನಲ್ಲಿ ಭಾಷಾ ವಿಚಾರವಾಗಿ ಕನ್ನಡಿಗರು ಹಾಗೂ ಪರಭಾಷಿಕರ ನಡುವೆ ಆಗಾಗ ಗಲಾಟೆಗಳಾಗುವುದು ಹೆಚ್ಚಾಗುತ್ತಲೇ ಇವೆ. ಕೆಲವರು ತಮ್ಮ ಭಾಷೆಗಳಲ್ಲಿ ಮಾತನಾಡಿಸಿದಾಗ ಇಲ್ಲಿಯವರು ಸಿಡಿಯುವುದು, ಕನ್ನಡ ಕಲಿಯಲ್ಲ ಅಂತ ಬೇರೆಯವರು ಧಿಮಾಕು ತೋರೋದು ಹೆಚ್ಚು. ಆದರೆ, ಅಂತವರೂ ಇನ್ಮುಂದೆ ಸುಲಭವಾಗಿ ಕನ್ನಡ ಕಲಿಯಬಹುದಾದ ಹೊಸ ಪ್ರಯತ್ನವೊಂದು ಗಮನ ಸೆಳೆದಿದೆ.
ಈ ಕನ್ನಡ ಗೊತ್ತಿಲ್ಲ ಅನ್ನೋ ಪದ ಹೆಚ್ಚಾಗಿ ಕೇಳಿ ಬರೋದೆ ಆಟೋ ಹಾಗೂ ಕ್ಯಾಬ್‌ಗಳಲ್ಲಿ. ಇನ್ನು ಆಟೋ ಕ್ಯಾಬ್ ಹತ್ತೋ ಬೇರೆ ಭಾಷಿಕರು ತಮ್ಮ ತಮ್ಮ ಭಾಷೆಗಳಲ್ಲೇ ಮಾತನಾಡೋದ್ರಿಂದ ಅವರಿಗೆ ಕಷ್ಟ ಆಗಬಾರದು ಅಂತ ಡ್ರೈವರ್ ಅಣ್ಣಂದಿರು ಅವರ ಭಾಷೆಲೆ ಮಾತನಾಡಿಸುತ್ತಿದ್ರು. ಕೆಲವರು ಧಿಮಾಕು ತೋರಿಸಿದಾಗ ಅವರ ಸ್ಟೈಲಲ್ಲೇ ಉತ್ರಾನೂ ಕೊಡ್ತಿದ್ರು. ಆದ್ರೂ ಕನ್ನಡ ಕಲಿಯೋ ವಾತಾವಾರಣ ಅಂತೂ ಇರಲಿಲ್ಲ.

ಇದಕ್ಕೆ ಹೇಗಾದ್ರೂ ಮಾಡಿ ಒಂದೊಳ್ಳೆ ಉಪಾಯ ಮಾಡಬೇಕು ಅಂತ ಬೆಂಗಳೂರಿನ ಆಟೋ ಡ್ರೈವರ್ ಈಗ ಆಟೋ ಕನ್ನಡಿಗನಾಗಿ ಹೊರಹೊಮ್ಮಿದ್ದಾರೆ. ಕೆಲವರಿಗೆ ಕನ್ನಡ ಕಲೀಬೇಕು ಅನ್ನೋ ಆಸಕ್ತಿ ಇದ್ದರೂ ಅವರಿಗೆ ಸೂಕ್ತ ಮಾರ್ಗದರ್ಶನ ಸಿಗದ ಕಾರಣ ತಮ್ಮ ಭಾಷೆಯನ್ನೇ ಬಳಸುತ್ತಾರೆ. ಇದನ್ನು ಗಮನಿಸಿರುವ ಆಟೋ ಚಾಲಕ, ಪ್ರಯಾಣಿಕರಿಗೆಂದೇ ಒಂದು ಕನ್ನಡ ಭಾಷಾ ಕಲಿಕೆಯ ಪೋಸ್ಟರ್ ರೆಡಿ ಮಾಡಿದ್ದಾರೆ.
ಇದರಲ್ಲಿ ಒಬ್ಬ ಪ್ರಯಾಣಿಕರು ಆಟೋ ಪ್ರಯಾಣದ ವೇಳೆ ಏನೆಲ್ಲ ಮಾತನಾಡುತ್ತಾರೆ ಎಂಬುದನ್ನು ಪಟ್ಟಿ ಮಾಡಿ, ಅದನ್ನು ಅವರಿಗೆ ಅರ್ಥವಾಗುವಂತೆ ಕನ್ನಡದ ವಾಕ್ಯಗಳನ್ನು ಇಂಗ್ಲೀಷ್‌ನಲ್ಲೇ ಸುಲಭವಾಗಿ ಅರ್ಥವಾಗುವಂತೆ ಮುದ್ರಿಸಿದ್ದಾರೆ. ಉದಾಹರಣೆಗೆ ಪ್ರಯಾಣಿಕರು ಆಟೋ ಹತ್ತುವಾಗ, ಚಾಲಕರನ್ನು ಮಾತನಾಡಿಸುವುದು, ಚಿಲ್ಲರೆ ಕೊಡುವುದು, ಹಣ ಪಾವತಿ, ಯಾವ ಸ್ಥಳ ತಲುಪಬೇಕು? ಎಂಬುದನ್ನು ಕನ್ನಡದಲ್ಲಿ ಹೇಗೆ ಕೇಳಬಹುದು ಎಂದು ಅದನ್ನು ಇಂಗ್ಲೀಷ್‌ಗೆ ಟೈಪಿಂಗ್ ಭಾಷೆಯಂತೆ ಸಿದ್ಧಪಡಿಸಿದ್ದಾರೆ.

ಈಗ ನಾವು ಹೇಗಿದ್ದೀಯ ಅನ್ನೋದನ್ನ hegiddiya ಎಂದು ಇಂಗ್ಲೀಷ್‌ನಲ್ಲಿ ಚಾಟ್ ಮಾಡುವಂತೆಯೇ ಸುಲಭವಾಗಿ ಪಟ್ಟಿ ಮಾಡಿ ಅಂಟಿಸಿದ್ದಾರೆ. ಉದಾಹರಣೆಗೆ ನಮಸ್ಕಾರ ಸರ್, ನಾನು ಕನ್ನಡ ಕಲೀತಾ ಇದ್ದೀನಿ, ಸ್ವಲ್ಪ ಬೇಗ ಹೋಗಿ, ಸ್ವಲ್ಪ ನಿಧಾನವಾಗಿ ಹೋಗಿ, ಸ್ವಲ್ಪ ಮುಂದೆ ಹೋಗಿ ಬಲಕ್ಕೆ ತಗೊಳ್ಳಿ...ಇಲ್ಲೇ ನಿಲ್ಸಿ, ಎಷ್ಟು ಆಯ್ತು?, ಯುಪಿಐ ಇದ್ಯಾ ಇಲ್ಲಾ ಕ್ಯಾಶಾ? ನಿಮ್ ಹತ್ರ ನೂರು ರೂಪಾಯಿಗೆ ಚಿಲ್ಲರೆ ಇದ್ಯಾ? ಎಂಬುದನ್ನು ಇಂಗ್ಲೀಷ್‌ನಲ್ಲೇ ಟೈಪ್ ಮಾಡಿ, ಇಂಗ್ಲಿಷ್ ವಾಕ್ಯಗಳನ್ನು ಕನ್ನಡದಲ್ಲಿ ಉಚ್ಚರಿಸುವುದು ಹೇಗೆ? ಎನ್ನುವುದನ್ನು ಹೇಳಿಕೊಡಲು ಮುಂದಾಗಿದ್ದಾರೆ.
ಇನ್ನು ಆಟೋ ಹತ್ತುವ ಮುನ್ನ ಆನ್‌ಲೈನ್ ಮೂಲಕ ಆಟೋ ಬುಕ್ ಮಾಡುವಾಗ ಮಾತನಾಡುವ ಸರ್...ಎಲ್ಲಿದ್ದೀರ?, ಆ ಏರಿಯಾಗೆ ಬರ್ತೀರಾ? ನಮಗೆ ತುಂಬಾ ಅರ್ಜೆಂಟ್ ಇದೆ, ದಯವಿಟ್ಟು ಬೇಗ ಬರ್ತೀರಾ?, ಬುಕಿಂಗ್ ಕ್ಯಾನ್ಸಲ್ ಮಾಡಬೇಡಿ ಎನ್ನುವ ವಾಕ್ಯಗಳನ್ನು ಕೂಡ ಈ ಆಟೋ ಕನ್ನಡಿಗ ಅನ್ಯಭಾಷಿಕರಿಗೆ ಪಾಠ ಹೇಳಿಕೊಡಲು ಈ ಹೊಸ ಉಪಾಯ ಕಂಡುಕೊಂಡಿದ್ದಾರೆ.
Kannada Auto Drivers educating northies with this great initiative 🫡
— Pranooth Gowda (@pranooth_mp) October 21, 2024
Thank you for this idea auto drivers 💛❤️#Karnataka #Kannada pic.twitter.com/wAD3AEy05F
ಇದಕ್ಕಾಗಿ ಆಟೋ ಕನ್ನಡಿಗ ಹೆಸರಿನಲ್ಲೇ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಯುಟ್ಯೂಬ್ ಪೇಜ್‌ಗಳನ್ನು ಕೂಡ ಕ್ರಿಯೇಟ್ ಮಾಡಿದ್ದು, ಇದರಲ್ಲಿಯೂ ಕನ್ನಡ ಬಾರದವರು ಸುಲಭವಾಗಿ ಭಾಷೆ ಕಲಿಯಬಹುದು ಎನ್ನಲಾಗಿದೆ.
ಇದಲ್ಲದೆ ಒಂದು ಸ್ಕ್ಯಾನರ್ ಕೂಡ ಈ ಪೋಸ್ಟರ್‌ನಲ್ಲಿದ್ದು, ಪ್ರಯಾಣಿಕರು ಅದನ್ನು ಸ್ಕ್ಯಾನ್ ಮಾಡಿದರೆ ಸಾಕು, ಅಲ್ಲಿಯೂ ಕನ್ನಡ ವಾಕ್ಯಗಳ ಉಚ್ಚಾರಣೆ ಕಳಿತುಕೊಳ್ಳಬಹುದು ಎಂದು ಆಟೋ ಚಾಲಕ ತಿಳಿಸಿದ್ದಾರೆ. ಇದು ಪರಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನ ಎಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಸದ್ಯ ಈ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ವಿಡಿಯೋ ಶೇರ್ ಮಾಡಿಕೊಂಡಿರುವ ಆಟೋ ಚಾಲಕ, ಬೇರೆ ಭಾಷೆಯವರಿಗೆ ಕನ್ನಡ ಕಲಿಸಲು ಈ ಪ್ರಯತ್ನ ಮಾಡಿದ್ದೇನೆ. ಇದನ್ನು ಸಾಧ್ಯವಾದರೆ ಎಲ್ಲ ಆಟೋಗಳ ಒಳಗೂ ಅಂಟಿಸಲು ಉದ್ದೇಶಿಸಿದ್ದೇನೆ. ನನ್ನ ಈ ಪ್ರಯತ್ನಕ್ಕೆ ಎಲ್ಲ ಆಟೋ ಕ್ಯಾಬ್ ಚಾಲಕರು ಸಾಥ್ ಕೊಡಿ ಎಂದು ಮನವಿ ಮಾಡಿದ್ದಾರೆ. ಪರಭಾಷಿಕರಿಗೆ ಕನ್ನಡ ಕಲಿಯುವುದು ಸುಲಭವಾಗಬೇಕು. ಇತ್ತೀಚೆಗೆ ಚಾಲಕರೊಂದಿಗೆ ಬೇರೆ ಭಾಷಿಕರ ಗಲಾಟೆಗಳು ನಡೆದಿವೆ. ಇದನ್ನು ತಡೆಯಲು ಇದೊಂದೇ ಮಾರ್ಗ. ನನಗೆ ಜೊತೆಯಾಗಿ ಎಂದು ಕರೆ ನೀಡಿದ್ದಾರೆ.












Click it and Unblock the Notifications