ಕೊರೊನಾ ಸಕ್ರಿಯ ಪ್ರಕರಣ: ಆಂಧ್ರ, ತಮಿಳುನಾಡು, ತೆಲಂಗಾಣ ಹಿಂದಿಕ್ಕಿದ ಬೆಂಗಳೂರು
ಬೆಂಗಳೂರು, ಮೇ 1: ಕೊರೊನಾ ಸಕ್ರಿಯ ಪ್ರಕರಣಗಳಲ್ಲಿ ಆಂಧ್ರ, ತಮಿಳುನಾಡು, ತೆಲಂಗಾಣವನ್ನು ಬೆಂಗಳೂರು ಹಿಂದಿಕ್ಕಿದೆ.
ಸಮಾಧಾನಕರ ವಿಚಾರವೆಂದರೆ ಕೇರಳ ರಾಜ್ಯವನ್ನು ಬೆಂಗಳೂರು ಹಿಂದಿಕ್ಕಿಲ್ಲ. ಕೇರಳದಲ್ಲಿ ಬೆಂಗಳೂರಿನಲ್ಲಿರುವ ಸಕ್ರಿಯಗಳಿಂತಲೂ ಹೆಚ್ಚಾಗಿದೆ.
ಈ ಬೆಳವಣಿಗೆಯನ್ನು ಗಮನಿಸಿದರೆ, ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಭೀಕರತೆ ಎಷ್ಟಿದೆ ಎಂಬುದನ್ನು ಅರ್ಥೈಸಬಹುದಾಗಿದೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ ಬರೋಬ್ಬರಿ 48,296 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ನಿಯಂತ್ರಣದಲ್ಲಿದೆ ಎಂದು ಭಾವಿಸಿ ನಿರಾಳವಾಗಿದ್ದ ರಾಜ್ಯ ಸರ್ಕಾರ ಹಾಗೂ ಜನರಿಗೆ ಮಹಾಮಾರಿ ಕೊರೊನಾ ಏಪ್ರಿಲ್ ಒಂದೇ ತಿಂಗಳಿನಲ್ಲಿ ಭಾರೀ ಆಘಾತವನ್ನು ನೀಡಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಒಂದೇ ದಿನ ಬರೋಬ್ಬರಿ 26,756 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣದಲ್ಲಿ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳನ್ನೇ ಸಿಲಿಕಾನ್ ಸಿಟಿ ಹಿಂದಿಕ್ಕಿದೆ.
ಬೆಂಗಳೂರಿನಲ್ಲಿ ಒಟ್ಟಾರೆಯಾಗಿ 2,59,058 ಸಕ್ರಿಯ ಪ್ರಕರಣಗಳಿದ್ದು, ಆಂಧ್ರಪ್ರದೇಶದಲ್ಲಿ 1,22,980, ತಮಿಳುನಾಡು 1,15,128, ತೆಲಂಗಾಣದಲ್ಲಿ 77,727 ರಷ್ಟಿದೆ. ಇನ್ನು ಕರ್ನಾಟಕ ರಾಜ್ಯದಲ್ಲಿ 3,82,690ದಷ್ಟು ಸಕ್ರಿಯ ಪ್ರಕರಣಗಳಿದ್ದು, ಕೇರಳದಲ್ಲಿ ಅತೀ ಹೆಚ್ಚು 3,03,732 ಸಕ್ರಿಯ ಪ್ರಕರಣಗಳಿವೆ.
ಕಳೆದ ವರ್ಷ ಅಕ್ಟೋಬರ್ 7 ರಂದು 1,04,348 ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ವೇಳೆ 10,974 ಪ್ರಕರಣಗಳು ಪತ್ತೆಯಾಗಿದ್ದವು. ಶುಕ್ರವಾರ 1,89,793 ಪರೀಕ್ಷೆಗಳನ್ನು ನಡೆಸಲಾಗಿದ್ದು 48,296 ಪ್ರಕರಣಗಳು ಪತ್ತೆಯಾಗಿವೆ. ಶೇ.81ರಷ್ಟು ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.
ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಇದರ ಪರಿಣಾಮ ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ.75.26ರಿಂದ 73.85ಕ್ಕೆ ಇಳಿಕೆಯಾಗಿದೆ.
ಈ ಹಿಂದೆ ಜನವರಿ 30 ರಂದು ರಾಜ್ಯದ ಚೇತರಿಕೆ ಪ್ರಮಾಣ ಶೇ.98.06ರಷ್ಟಿತ್ತು. ಏಪ್ರಿಲ್ 4 ರ ಬಳಿಕ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಾ ಬಂದಿದೆ. ಶುಕ್ರವಾರದ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.5.95ರಷ್ಟಿದೆ ಎಂದು ತಿಳಿದುಬಂದಿದೆ.












Click it and Unblock the Notifications