Bengaluru Rain: ನಾಳೆ ಬೆಂಗಳೂರಿಗೆ ಆರೆಂಜ್ ಅಲರ್ಟ್, ಶಾಲಾ-ಕಾಲೇಜುಗಳಿಗೂ ರಜೆ!
ಉದ್ಯಾನನಗರಿ ಬೆಂಗಳೂರಿನಲ್ಲಿ ಸೈಕ್ಲೋನ್ ವಾತಾವರಣವಿದ್ದು, ಇಂದು ದಿನವಿಡೀ ಮಳೆಯಲ್ಲೇ ನೆನೆದಿದೆ. ಹವಾಮಾನ ಇಲಾಖೆಯ ಪ್ರಕಾರ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೆಂಗಳೂರಿನ ಎಲ್ಲ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ನಾಳೆ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಇಂದು ದಿನವಿಡೀ ಮಳೆ ಸುರಿಯುತ್ತಲೇ ಇದ್ದು, ಜನ ಸಂಚಾರ, ವಾಹನ ಸಂಚಾರದ ಸಮಸ್ಯೆ ತಲೆದೂರಿದೆ. ಹವಾಮಾನ ಇಲಾಖೆ ಕೂಡ ಮುಂದಿನ ಎರಡು ಮೂರು ದಿನಗಳ ಕಾಲ ರಾಜಧಾನಿಯಲ್ಲಿ ಭಾರಿ ಮಳೆಯಾಗುವ ಸೂಚನೆ ನೀಡಿರುವುದರಿಂದ ಜಿಲ್ಲಾಧಿಕಾರಿ ಜಗದೀಶ್ ಅವರು ಅಕ್ಟೋಬರ್ 16ರಂದು (ನಾಳೆ) ಬೆಂಗಳೂರಿನ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

ಬಹುತೇಕ ಶಾಲೆಗಳು ದಸರಾ ರಜೆ ನೀಡಿವೆ. ಕೆಲ ಖಾಸಗಿ ಶಾಲೆಗಳು ಹಾಗೂ ಕಾಲೇಜುಗಳು ಎಂದಿನಂತೆ ನಡೆಯುತ್ತಿದ್ದವು. ಭದ್ರತಾ ದೃಷ್ಟಿಯಿಂದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದ್ದು, ಇಂದು ಸಂಜೆಯೊಳಗೆ ಆದೇಶ ಹೊರಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಿನ್ನೆ ಜಿಟಿಜಿಟಿಯಾಗಿ ಶುರುವಾದ ಮಳೆಯು ಇಂದು ನಸುಕಿನ ಜಾವದಿಂದಲೇ ಅಬ್ಬರಿಸಲು ಶುರುಮಾಡಿತ್ತು. ಮಳೆ ನಿಲ್ಲಬಹುದು ಎಂದುಕೊಂಡಿದ್ದ ಬೆಂಗಳೂರಿನ ಜನರಿಗೆ ವರುಣ ಶಾಕ್ ಕೊಟ್ಟಿದ್ದಾನೆ. ಒಂದೇ ಸಮನೆ ಮಳೆ ಸುರಿಯುತ್ತಿರುವುದಿಂದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಕೆಲವರು ಅನಿವಾರ್ಯವಾಗಿ ಹೊರಬಂದು ಮಳೆಯಲ್ಲಿ ಸಿಲುಕಿಕೊಂಡಿದ್ದಾರೆ. ಮತ್ತೊಂದೆಡೆ ಬೆಂಗಳೂರಿನ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆಯ ಕಾರಣ ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗಿ, ವಾಹನ ಸಂಚಾರ ಮಂದಗತಿಯಲ್ಲಿ ಸಾಗಿದೆ.
ದೊಮ್ಮಲೂರು ಬಳಿ ಒಳವರ್ತುಲ ರಸ್ತೆಯಲ್ಲಿ ನೀರು ನಿಂತಿರುವುದರಿಂದ 17ನೇ ಮುಖ್ಯರಸ್ತೆ, ಇಂದಿರಾನಗರ ಕಡೆಗೆ ನಿಧಾನಗತಿಯ ಸಂಚಾರವಿದೆ. ರಾಮಮೂರ್ತಿನಗರ, ಹೊರಮಾವು ಅಂಡರ್ ಪಾಸ್, ಎಎಸ್‌ಆರ್ ಕಲ್ಯಾಣ ಮಂಟಪ ಕಡೆಗಳಲ್ಲಿ ಮಳೆಯಿಂದ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರ ನಿಧಾನಗತಿ ಇದ್ದು ಸಾರ್ವಜನಿಕರು ಸಹಕರಿಸಲು ಕೋರಿದೆ.

ವಿಂಡ್ಸರ್ ಮ್ಯಾನರ್ ಅಂಡರ್‌ಪಾಸ್ ಬಳಿ ನೀರು ನಿಂತಿರುವುದರಿಂದ ಪ್ಯಾಲೇಸ್ ಗುಟ್ಟಹಳ್ಳಿ ಕಡೆಗೆ ನಿಧಾನಗತಿಯ ಸಂಚಾರ ಈಗಲೂ ಇದೆ. ಹಳೆ ವಿಮಾನ ನಿಲ್ದಾಣ ರಸ್ತೆಯ ರಾಜೇಶ್ವರಿ ಜಂಕ್ಷನ್ ಹತ್ತಿರ ನೀರು ಭಾರಿ ಪ್ರಮಾಣದಲ್ಲಿ ನಿಂತುಕೊಂಡು ಅವಾಂತರ ಸೃಷ್ಟಿಸಿದೆ. ITPL ಮುಖ್ಯರಸ್ತೆಯಲ್ಲಿ ನೀರು ನಿಂತಿರುವುದರಿಂದ ಹೂಡಿ ಕಡೆಗೆ ನಿಧಾನಗತಿಯ ಸಂಚಾರವಿದೆ ಎಂದು ವರದಿಯಾಗಿದೆ. ಆಂಜನೇಯ ದೇವಸ್ಥಾನ, ಜೀವನಭೀಮಾನಗರದಲ್ಲಿ ನೀರು ನಿಂತಿರುವುದರಿಂದ ಡಬಲ್ ರೋಡ್ ಕಡೆಗೆ, ಹುಣಸಮಾರನಹಳ್ಳಿ ಬಳಿ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿದೆ.
ಹೆಣ್ಣೂರು-ಬಾಗಲೂರು ರಸ್ತೆ ಹೆಣ್ಣೂರು ಜಂಕ್ಷನ್ ಕಡೆಗೆ, ಎಚ್ಎಎಲ್ ರಸ್ತೆಯ ಇಸ್ರೋ ಜಂಕ್ಷನ್ ಯಿಂದ ರಾಜೇಶ್ವರಿ ಜಂಕ್ಷನ್ ಕಡೆಗೆ, ಐಟಿಪಿಎಲ್ ರಸ್ತೆ ಹೂಡಿ ಜಂಕ್ಷನ್-ಶಾಂತಿಕೇತನ ಕಡೆಗೆ, ಹಳೆ ಮದ್ರಾಸ್ ರಸ್ತೆ ಬೆನ್ನಿಗನಹಳ್ಳಿ ಬಳಿ, ಟಿ.ಸಿ.ಪಾಳ್ಯ-ಹಳೆ ಮದ್ರಾಸ್ ರಸ್ತೆ ಕಡೆಗೆ, ಕೊಡತಿ-ಸರ್ಜಾಪುರ ರಸ್ತೆಗಳಲ್ಲಿ ಮಳೆಯಿಂದ ನೀರು ನಿಂತು ಸಂಚಾರ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ಈ ರಸ್ತೆಗಳಲ್ಲಿನ ಸಂಚರಿಸುವಾಗ ಜೋಪಾನ ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications