ಇದೆಲ್ಲ ಇಲ್ಲದಿದ್ದರೆ ಬೆಂಗಳೂರನ್ನು ಬೆಂಗಳೂರು ಅಂತಾರಾ?
ಬೆಂಗಳೂರು, ಏ. 13 : ಮಳೆ ಬಿದ್ದರೂ ಸರಾಗವಾಗಿ ಚರಂಡಿಯಲ್ಲಿ ಹರಿದುಹೋಗುವ ನೀರು, ಟ್ರಾಫಿಕ್ ಪೊಲೀಸ್ ಇಲ್ಲದಿದ್ದರೂ ಆಗದ ಟ್ರಾಫಿಕ್ ಜಾಮುಗಳು, ಕಸ ತುಂಬಿಲ್ಲದ ಝಗಮಗಿಸುವ ಫುಟ್ ಪಾತುಗಳು, ಸ್ವಚ್ಛಸ್ವಚ್ಛವಾಗಿರುವ ಕಸದ ತೊಟ್ಟಿಗಳು, ನೇರವಾಗಿ ಚಲಿಸುವ ಆಟೋ ರಿಕ್ಷಾಗಳು, ಹೊಗೆಯುಗುಳದ ಬಿಎಂಟಿಸಿ ಬಸ್ಸುಗಳು....
ಹೀಗಿದ್ದರೆ ಬೆಂಗಳೂರು ಎಂದೂ ಬೆಂಗಳೂರು ಎಂದು ಅನಿಸಿಕೊಳ್ಳುವುದೇ ಇಲ್ಲ. ರಸ್ತೆಯಲ್ಲಿ ಹೊಂಡಗಳು ಬಿದ್ದಿರಲೇಬೇಕು, ಮಳೆ ಬಂದರೆ ಅವರು ಮಿನಿ ಸ್ವಿಮ್ಮಿಂಗ್ ಪೂಲುಗಳಾಗಲೇಬೇಕು, ಗಾಳಿಬೀಸಿ ಗಿಡ ಬುಡಮೇಲಾಗಿರಬೇಕು, ಬಿಎಂಟಿಸಿ ಬಸ್ಸು ಕಾಂಪೌಂಡಿಗೆ ಗುದ್ದಿರಬೇಕು, ಹತ್ತು ಸೆಂ.ಮೀ. ಮಳೆ ಆಗಿರುವಹಾಗೆ ಚರಂಡಿಗಳು ತುಂಬಿ ಹರಿಯುತ್ತಿರಬೇಕು, ಎಲ್ಲೆಲ್ಲೂ ಟ್ರಾಫಿಕ್ ಜಾಮ್ ಆಗಿರಬೇಕು...

ಇದು ಬೆಂಗಳೂರು. ಧಿಮಾಕಿನಿಂದ ಟೂ ವ್ಹೀಲರ್ ಓಡಿಸುವ ಕಾಲೇಜು ಹುಡುಗ ಹುಡುಗಿಯರಿಗೆ ಇಲ್ಲಿ ಯಾವ ಟ್ರಾಫಿಕ್ ನಿಯಮಗಳು ಅನ್ವಯವಾಗುವುದಿಲ್ಲವೋ, ಹಾಗೆಯೆ, ಬೆಂಗಳೂರಿನ ಮಳೆಗೆ, ಹದಗೆಟ್ಟು ಹೋಗಿರುವ ವ್ಯವಸ್ಥೆಗೆ, ತುಂಬಿ ಹರಿಯುವ ಚರಂಡಿಗಳಿಗೆ, ಅಪಘಾತಗಳಿಗೆ, ರಸ್ತೆಬದಿಯಲ್ಲಿ ಕಸ ಬಿಸಾಕುವ ನೈಟಿ ನಾರಿಯರಿಗೆ ಯಾವ ನಿಮಯಗಳೂ ಅನ್ವಯವಾಗುವುದಿಲ್ಲ.
ಬೆಂಗಳೂರು ಅಂದ್ರೆ ಏನು ಎಂಬುದನ್ನು ಈ ಟ್ವೀಟ್ ಸುಂದರವಾಗಿ ವರ್ಣಿಸಿದೆ. ಬೆಂಗಳೂರು = ಸೋಮವಾರ + ಟ್ರಾಫಿಕ್ + ಮಳೆ + ನಿಂತ ನೀರು + 4 ಬಸ್ ಬ್ರೇಕ್ ಡೌನ್ + ಅಗ್ನಿ ದುರಂತಕ್ಕೆ ಟ್ರಕ್ ಬಲಿ + ಐಪಿಎಲ್ ಮ್ಯಾಚ್. ಹೌದು ಸ್ವಾಮಿ ಇದು ಬೆಂಗಳೂರು. ಇದನ್ನು ಸೋಕಾಲ್ಡ್ ಬುದ್ಧಿಜೀವಿಗಳು ಅಲ್ಲಗಳೆಯಲಿ ನೋಡೋಣ?
Bengaluru = Monday + Traffic + Rains + Water Logging + 4 Bus Breakdowns + Fire Accident in truck + IPL Match #Mondayblues
— Traffline Bengaluru (@TrafflineBLORE) April 13, 2015 ಇನ್ನು ಐಪಿಎಲ್ ಮ್ಯಾಚ್ ಇದ್ದರಂತೂ, ಮ್ಯಾಚ್ ಇದ್ದಾಗ ಮಳೆ ಬಂದರಂತೂ, ಮಳೆ ಬಂದರೆ ಟ್ರಾಫಿಕ್ ಜಾಮ್ ಆದರಂತೂ, ಆ ಜಾಮಿನಲ್ಲಿ ದ್ವಿಚಕ್ರಿಗಳು, ನಾಲ್ಕು ಚಕ್ರಿಗಳು ಸಿಕ್ಕಿಕೊಂಡರಂತೂ, ಅದೇ ಸಮಯದಲ್ಲಿ ಕರೆಂಟ್ ಕೈಕೊಟ್ಟರಂತೂ, ಅದೇ ಸಮಯದಲ್ಲಿ ಹಿಂದಿನಿಂದ ಬಂದು ಯಾರಿಗಾದರೂ ಗುದ್ದಿದರಂತೂ, ಮತ್ತು ಅದೇ ಸುಸಂದರ್ಭದಲ್ಲಿ ಪೊಲೀಸ್ ಕಣ್ಮರೆಯಾದರಂತೂ... ಭಗವಂತ!
ಹಾ ಮರೆತೇಬಿಟ್ಟಿದ್ದೆ, ವೀಕೆಂಡ್ ಹೊಸ ಸಂಸ್ಕೃತಿ ಇಲ್ಲಿ ಶುರುವಾಗಿಬಿಟ್ಟಿದೆ. ಜಪ್ಪಯ್ಯ ಅಂದ್ರೂ ಹೆಂಡತಿ ಅಂದು ಅಡುಗೆ ಮಾಡಲ್ಲ, ಗಂಡ ನಾನೇ ಮಾಡ್ತೀನಿ ಕಣೇ ಅಂದ್ರೂ ಹೆಂಡತಿ ಬಿಡಲ್ಲ. ಒಟ್ಟಿನಲ್ಲಿ ಸ್ಟೈಲಾಗಿ ಕಾರೆತ್ತಿಕೊಂಡು ಹೋಗಿ ಹೋಟೆಲಿನಲ್ಲಿ ತಿಂದು ಮಾಲುಗಳಲ್ಲಿ ಅಡ್ಡಾಡಿ, ಟ್ರಾಫಿಕ್ ಜಾಮಿನ ರುಚಿ ಸವಿಯದಿದ್ದರೆ ವೀಕೆಂಡು ವೀಕೆಂಡಾಗಿರಲ್ಲ, ಬೆಂಗಳೂರು ಬೆಂಗಳೂರಾಗಿರಲ್ಲ.
Fire in the truck below Electronic City elevated flyover,Opposite Infosys, towards Electronic City Phase 2. pic.twitter.com/qr9Tfd9L5H
— Traffline Bengaluru (@TrafflineBLORE) April 13, 2015 











Click it and Unblock the Notifications