Aero India 2025: ಬೆಂಗಳೂರು ಏರ್‌ಶೋ ಕುರಿತು ದಿನಾಂಕ, ಮಾಹಿತಿ, ಸಂಪೂರ್ಣ ವಿವರ ಇಲ್ಲಿದೆ
ಬೆಂಗಳೂರು, ಜನವರಿ 03: ಬೆಂಗಳೂರು ಏರ್‌ಶೋ 2025ಕ್ಕೆ ಕಾತುರದಿಂದ ಕಾಯುತ್ತಿರುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಇಲ್ಲಿಯವರೆಗೆ 14 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಬೆಂಗಳೂರು ಏರ್ ಶೋ 15 ಆವೃತ್ತಿ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ.
ಬೆಂಗಳೂರಿನಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಏರ್‌ಶೋಗೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 10 ರಿಂದ 14ರವರೆಗೆ ಏರ್ ಶೋ ನಿಗದಿಯಾಗಿದ್ದು, ಬೆಂಗಳೂರಿನ ಯಲಹಂಕದ ಏರ್ ಫೋರ್ಸ್ ಸ್ಟೇಷನ್ ಪ್ರದೇಶದಲ್ಲಿ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನವಾಗಿರುವ ಏರೋ ಇಂಡಿಯಾ ಪ್ರದರ್ಶನವಾಗಲಿದೆ.

'ದಿ ರನ್‌ವೇ ಟು ಎ ಬಿಲಿಯನ್ ಅಪಾರ್ಚುನಿಟೀಸ್' ಎಂಬ ವಿಷಯದ ಈ ಕಾರ್ಯಕ್ರಮ ಜಾಗತಿಕ ಮತ್ತು ಭಾರತೀಯ ಏರೋಸ್ಪೇಸ್ ಉದ್ಯಮಗಳಲ್ಲಿನ ಪ್ರಗತಿಯ ವಿವರ, ಏರೋಸ್ಪೇಸ್ ಪಾಲುದಾರಿಕೆಗಳನ್ನು ಉತ್ತೇಜಿಸುವುದು, ಸ್ವದೇಶೀಕರಣವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.
ರಕ್ಷಣಾ ಸಚಿವಾಲಯವು ಆಯೋಜಿಸಿರುವ ಈ ಕಾರ್ಯಕ್ರಮವು ವಾಯುಯಾನ, ರಕ್ಷಣಾ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಅತ್ಯಾಧುನಿಕ ಆವಿಷ್ಕಾರಗಳನ್ನು ಪ್ರದರ್ಶಿಸಲು ಒಂದು ವಿಶಿಷ್ಟ ವೇದಿಕೆಯನ್ನು ಒದಗಿಸುತ್ತದೆ. ಜೊತೆಗೆ ಜಗತ್ತಿನಾದ್ಯಂತದ ಉದ್ಯಮಿಗಳನ್ನು ಹಾಗೂ ಈ ಬಗ್ಗೆ ಆಸಕ್ತಿ ಹೊಂದಿರುವವನ್ನು ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಪರಿಶೋಧನೆಯತ್ತ ಆಕರ್ಷಿಸುತ್ತದೆ.
ಬೆಂಗಳೂರು ಏರ್‌ಶೋನ ಮೊದಲ ಮೂರು ದಿನ ಅಂದರೆ ಫೆಬ್ರವರಿ 10 ರಿಂದ 12ವರೆಗೆ ಉದ್ಯಮಿಗಳು, ವೃತ್ತಿಪರರು ಹಾಗೂ ಹೂಡಿಕೆದಾರಿಗಾಗಿ ಕಾಯ್ದಿರಿಸಲಾಗಿದೆ. ಇನ್ನು ಕೊನೆಯ ಎರಡು ದಿನಗಳು ಅಂದರೆ ಫೆಬ್ರವರಿ 13 ಮತ್ತು 14 ರಂದು ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ಕೊನೆಯ ಎರಡು ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿರುತ್ತದೆ. ಇನ್ನು ಏರ್ ಶೋ ವೀಕ್ಷಿಸಲು ಬರುವವರಿಗೆ ಜಕ್ಕೂರ್ ಕ್ಯಾಂಪಸ್‌ಗಳಲ್ಲಿ ಹಾಗೂ ಜಿಕೆವಿಕೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಾರ್ ಪಾಸ್‌ಗಳು ಕೂಡ ಲಭ್ಯವಿರುತ್ತವೆ. ಇನ್ನು ಮುಖ್ಯವಾಗಿ ಏರ್ ಶೋ ವೀಕ್ಷಿಸಲು ಬರುವರು ಡ್ರೋನ್‌ಗಳನ್ನು ತರುವಂತಿಲ್ಲ. ಅವಶ್ಯಕವಿದ್ದರೆ DSLR ಅಥವಾ ಕ್ಯಾಮೆರಾಗಳನ್ನು ತರಬಹುದು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದು, ಈ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಸಾರಿಗೆ ಬಸ್‌ಗಳನ್ನು ಹೆಚ್ಚಾಗಿ ಬಳಸಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ.












Click it and Unblock the Notifications