Aero India 2025: ಮಾಂಸ ಮಾರಾಟ ನಿಷೇಧಕ್ಕೆ, ಹೋಟೆಲ್‌ಗಳ ಆಕ್ಷೇಪ
ಬೆಂಗಳೂರು, ಜನವರಿ 20: ಉದ್ಯಾನ ನಗರಿ ಬೆಂಗಳೂರಿನಲ್ಲಿ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ನಡೆಯಲಿದೆ. ಏರೋ ಇಂಡಿಯಾ-2025ಕ್ಕೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 10 ರಿಂದ 14 ರವರೆಗೆ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿದೆ. ಈ ಹಿನ್ನಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯದಲ್ಲಿ ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದೆ. ಇದಕ್ಕೆ ಹೋಟೆಲ್‌ಗಳು ಆಕ್ಷೇಪ ಎತ್ತಿದ್ದು, ಈ ಕುರಿತು ಬಿಬಿಎಂಪಿಗೆ ಪತ್ರವನ್ನು ಬರೆದಿವೆ.
ಏರ್ ಶೋ-2025ರ ಹಿನ್ನಲೆಯಲ್ಲಿ ಜಂಟಿ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬ್ಯಾಟರಾಯನಪುರ ವಲಯ ಜನವರಿ 23 ರಿಂದ ಫೆಬ್ರವರಿ 17ರ ತನಕ ಎಲ್ಲಾ ಮಾಂಸಾಹಾರ ಮಾರಾಟ ಉದ್ದಿಮೆಗಳನ್ನು ಮುಚ್ಚಲು ಸೂಚನೆ ನೀಡಿದ್ದಾರೆ. ಈ ಆದೇಶಕ್ಕೆ ಬೆಂಗಳೂರು ಹೋಟೆಲುಗಳ ಸಂಘ (ರಿ.) ಆಕ್ಷೇಪವನ್ನು ವ್ಯಕ್ತಪಡಿಸಿದೆ.

ಬಿಬಿಎಂಪಿಗೆ ಪತ್ರ: ಬೆಂಗಳೂರು ಹೋಟೆಲುಗಳ ಸಂಘ (ರಿ.) ಈ ಕುರಿತು ಬಿಬಿಎಂಪಿಗೆ ಪತ್ರವನ್ನು ಬರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘ Air Show 2025ರ ಸಂದರ್ಭದಲ್ಲಿ ಮಾಂಸಾಹಾರ ನಿಷೇಧ ನಿರ್ಧಾರ ಸಮಂಜಸವಲ್ಲ ಎಂದು ಹೇಳಿದೆ.
ಫೆಬ್ರವರಿ 10 ರಿಂದ 14ರವರೆಗೆ ಏರ್‌ಶೋ 2025 ಪ್ರದರ್ಶನ ನಡೆಯಲಿದ್ದು ಜನವರಿ 23 ರಿಂದ ಫೆಬ್ರವರಿ 17ರವರೆಗೆ ಒಟ್ಟು 26 ದಿನಗಳ ಕಾಲ ಮಾಂಸಹಾರ ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ.
ಈ ಪ್ರದೇಶದಲ್ಲಿ ಸುಮಾರು 5000ಕ್ಕಿಂತಲೂ ಹೆಚ್ಚು ಸ್ಟಾರ್ ಹೊಟೇಲ್‌ಗಳು, ಪಬ್, ಬಾರ್ & ರೆಸ್ಟೋರೆಂಟ್‌ಗಳು, ಮಧ್ಯಮವರ್ಗ ಹಾಗೂ ಜನಸಾಮಾನ್ಯರಿಗೆ ಅಗತ್ಯವಾಗಿರುವ ಬಿರಿಯಾನಿ, ಮನೆ ಹೊಟೇಲುಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವುಗಳ ವ್ಯಾಪಾರ ಸಂಪೂರ್ಣ ಸ್ಥಗಿತಗೊಳಿಸಿದರೆ ಹೆಚ್ಚಿನ ತೊಂದರೆಯುಂಟಾಗಲಿದೆ ಎಂದು ಸಂಘ ಹೇಳಿದೆ.
ಹೊಟೇಲುಗಳಲ್ಲಿ ಉಳಿದ ತ್ಯಾಜ್ಯಗಳನ್ನು Garbage Bagಗೆ ಹಾಕಿ ಕಸತ್ಯಾಜ್ಯ ಸಂಗ್ರಹಣಾ ಗಾಡಿಯ ಮೂಲಕ ದಿನನಿತ್ಯ ವಿಲೇವಾರಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ಹೊಟೇಲಿನ ಆಜುಬಾಜಿನಲ್ಲಿ ಹಕ್ಕಿಗಳಿಗೆ ಆಹಾರ ಸಂಗ್ರಹವಾಗುವುದಿಲ್ಲ.
ಇದಲ್ಲದೆ ವಾಯುನೆಲೆಯ ಒಳಗಡೆ ಅತಿಥಿಗಳಿಗೂ ಮಾಂಸಾಹಾರ ಪದಾರ್ಥಗಳು ಸರಬರಾಜಾಗುತ್ತಿರುತ್ತದೆ. ಬಹಳಷ್ಟು ಮದುವೆ ಕಾರ್ಯಕ್ರಮ, Business Meeting ಗಳು ಹಾಗೂ ಇನ್ನಿತರ ಸಮಾರಂಭಗಳು ಈಗಾಗಲೇ ನಿಯೋಜಿತವಾಗಿರುತ್ತದೆ. ಈ ಅನಗತ್ಯ ಮಾರ್ಗಸೂಚಿಯಿಂದ ಆತಿಥ್ಯ ಕ್ಷೇತ್ರಕ್ಕೆ ಬಹಳಷ್ಟು ನಷ್ಠವಾಗಲಿದೆ ಎಂದು ಸಂಘ ಹೇಳಿದೆ.
ಹೀಗಿದ್ದರೂ ಏರ್ ಶೋ ಪರಿಸರದಲ್ಲಿ ಇರುವಂತಹ ಮಾಂಸದ ಅಂಗಡಿಗಳನ್ನು ಮಾತ್ರ ಅಗತ್ಯವಿದ್ದರೆ ಒಂದು ವಾರದ ಮಟ್ಟಿಗೆ ಮುಚ್ಚಿಸುವುದು ಸೂಕ್ತ. ಯಾವುದೇ ಕಾರಣಕ್ಕೂ ಹೊಟೇಲು ಉದ್ಯಮಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಘ ಮನವಿ ಮಾಡಿದೆ.
ಬಿಬಿಎಂಪಿ ಆದೇಶ ಏನಿತ್ತು?; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 17/1/2025ರಂದು ಪ್ರಕಟಣೆಯೊಂದನ್ನು ಹೊರಡಿಸಿತ್ತು. ಈ ಪ್ರಕಟಣೆ ಬಿಬಿಎಂಪಿ ಯಲಹಂಕ ವಲಯ ವ್ಯಾಪ್ತಿಯ ಮಾಂಸ ಮಾರಾಟದ ಉದ್ದಿಮೆಗಳನ್ನು ದಿನಾಂಕ 10.02.2025 ರಿಂದ 14.02.2025ರ ವರೆಗೆ ಏರ್‌ಶೋ ಪ್ರದರ್ಶನದ ಪ್ರಯುಕ್ತ ಮುಚ್ಚುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿತ್ತು.
ಯಲಹಂಕ ಏರ್ ಪೋರ್ಸ್ ಸ್ಟೇಷನ್‌ನಲ್ಲಿ ದಿನಾಂಕ10.02.2025 ರಿಂದ 14.02.2025 ರವರೆಗೆ ಅಂತರಾಷ್ಟ್ರೀಯ ಏರ್‌ಶೋ ನಡೆಯುವುದರಿಂದ ಏರ್ ಶೋ ಸುಗಮವಾಗಿ ನಡೆಸಲು ಯಲಹಂಕ ವಲಯದ ಏರ್‌ಪೋರ್ಸ್ ಸ್ಟೇಷನಿಂದ 13 ಕಿ. ಮೀ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸ ಮಾರಾಟದ ಉದ್ದಿಮೆಗಳನ್ನು ಮುಚ್ಚುವುದು ಹಾಗೂ ಹೋಟೆಲ್ ಮತ್ತು ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
ಆದುದರಿಂದ ದಿನಾಂಕ 23.01.2025 ರಿಂದ 17.02.2025 ರವರೆಗೆ ಎಲ್ಲಾ ಮಾಂಸಾಹಾರ ಮಾರಾಟ ಉದ್ದಿಮೆಗಳನ್ನು ಮುಚ್ಚಲು ಸೂಚಿಸಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ 1937ರ ರೂಲ್ 91 ರಂತೆ ಮತ್ತು ಇತರ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದರು.












Click it and Unblock the Notifications