ಬಿಬಿಎಂಪಿಯೊಂದಿಗೆ ಸೇರಿ ಗೆಳತಿ ಮನೆ ರಸ್ತೆ ಸ್ವಚ್ಛಮಾಡಿ
ಬೆಂಗಳೂರು, ಆ, 19 : ನಿಮ್ಮ ಗರ್ಲ್ ಫ್ರೆಂಢ್ ಮನೆಯ ಸಮೀಪದ ರಸ್ತೆ ಸರಿಯಿಲ್ಲವೇ? ಪ್ರೀತಿ ಪಾತ್ರರಿರುವ ಸ್ಥಳಕ್ಕೆ ತೆರಳುವ ದಾರಿಯಲ್ಲಿ ಕಸ ಕಡ್ಡಿಗಳು ತುಂಬಿಕೊಂಡಿವೆಯೇ? ಪ್ರತಿ ಸಾರಿ ರಸ್ತೆಯಲ್ಲಿ ಓಡಾಡುವಾಗ ಸರ್ಕಾರಕ್ಕೆ, ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದೀರಾ? ಹಾಗಾದರೆ ಚಿಂತೆ ಬಿಡಿ ಈಗ ನಿಮ್ಮ ಸಹಭಾಗಿತ್ವದಲ್ಲೇ ಉದ್ಯಾನ ನಗರಿಯನ್ನು ಸ್ವಚ್ಛ, ಹಸಿರು, ಸುಂದರ ಮತ್ತು ಸುರಕ್ಷಿತವಾಗಿಸಬಹುದು.
ಹೌದು... ವೈಯಕ್ತಿಕ ಮತ್ತು ಸಹಕಾರಿಗಳ ಸಹಭಾಗಿತ್ವದಲ್ಲಿ ಬೆಂಗಳೂರನ್ನು ಮತ್ತಷ್ಟು ಸುಂದರವಾಗಿಸಲು ಹೊಸದೊಂದು ಚಳವಳಿ ಸದ್ದಿಲ್ಲದೇ ಆರಂಭವಾಗಿದೆ. 'ನಮ್ಮ ಬೆಂಗಳೂರು, ನಮ್ಮ ಕೊಡುಗೆ' ಅಭಿಯಾನದಡಿ 'ಮೈಲು ದತ್ತು ತೆಗೆದುಕೊಳ್ಳುವ ವಿನೂತನ ಕಾರ್ಯಕ್ರಮ ಜಾರಿಯಾಗಿದೆ.

ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಮೈಲು ದತ್ತು ಕಾರ್ಯಕ್ರಮ ರೂಪಿಸಲಾಗಿದೆ. ನಾಗರಿಕರು ಅಥವಾ ಕಾರ್ಪೋರೇಟ್ ಕಂಪನಿಗಳು ನಗರದ ಯಾವುದೇ ಭಾಗದ ರಸ್ತೆಯ ಒಂದು ಮೈಲು ವ್ಯಾಪ್ತಿ ಜಾಗವನ್ನು ದತ್ತು ತೆಗೆದುಕೊಂಡು ಸಂಪೂರ್ಣ ನಿರ್ವಹಣೆ ಮಾಡಬಹುದು.
ಮಹಾನಗರದ ಪ್ರಮುಖ ಎಫ್‌ಎಂ 93.5 ಹೇಳುವಂತೆ, ಹಲವಾರು ನಾಗರಿಕರು ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಕೈಜೋಡಿಸಲು ಮುಂದಾಗಿದ್ದಾರೆ. ಎಫ್‌ಎಂಗೆ ಕರೆ ಮಾಡಿದ ಯುವಕರೊಬ್ಬರು, ನಾನು ನನ್ನ ಗೆಳತಿಯ ಮನೆಗೆ ತೆರಳುವ ರಸ್ತೆಯ ಒಂದು ಮೈಲು ಜಾಗವನ್ನು ದತ್ತು ತೆಗೆದುಕೊಳ್ಳಲು ಸಿದ್ಧನಿದ್ದೇನೆ ಎಂದಿದ್ದಾರಂತೆ. ಅಮೆರಿಕದಲ್ಲಿ ಈಗಾಗಲೇ ಜನಪ್ರಿಯವಾಗಿರುವ 'ಮೈಲು ದತ್ತು' ಕಾರ್ಯಕ್ರಮಕ್ಕೆ ಬೆಂಗಳೂರಿಗರ ಸ್ಪಂದನೆ ಯಾವ ರೀತಿ ಇರಲಿದೆ ಎಂಬುದನ್ನು ಕಾದು ನೋಡಬೇಕು.












Click it and Unblock the Notifications