Ranya Rao: ಚಿನ್ನ ಕಳ್ಳಸಾಗಣೆ ಪ್ರಕರಣ; 1 ವರ್ಷದ ಬಳಿಕ ನಟಿ ರನ್ಯಾ ರಾವ್‌ಗೆ ಸಿಕ್ತು ಜಾಮೀನು

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕಿಬಿದ್ದು, ಕಳೆದ ಒಂದು ವರ್ಷದಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ಕನ್ನಡ ನಟಿ ರನ್ಯಾ ರಾವ್‌ಗೆ (Ranya Rao) ಕೊನೆಗೂ ಜಾಮೀನು ದೊರೆತಿದೆ. ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು, ಒಂದು ವರ್ಷದ ಕಠಿಣ ಸೆರೆವಾಸದ ಬಳಿಕ ನಟಿ ಜೈಲಿನಿಂದ ಹೊರಬರಲಿದ್ದಾರೆ.

ಪ್ರಕರಣದ ಹಿನ್ನೆಲೆ

ಕಳೆದ ವರ್ಷ, ಅಂದರೆ 2025ರ ಮಾರ್ಚ್ 3ರಂದು, ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ 14.8 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದಾಗ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳ ಕೈಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದು ಅವರನ್ನು ಬಂಧಿಸಲಾಗಿತ್ತು. ಈ ಬೃಹತ್ ಕಳ್ಳಸಾಗಣೆ ಪ್ರಕರಣವು ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.

Ranya Rao

ಬಂಧನದ ನಂತರ ನಟಿ ರನ್ಯಾ ರಾವ್ ಜಾಮೀನಿಗಾಗಿ ತುಂಬ ಪ್ರಯತ್ನ ಮಾಡಿದ್ದರು. ಆದರೆ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠವು ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅಲ್ಲದೆ, ಅವರ ವಿರುದ್ಧ 'ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ' (COFEPOSA) ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಈ ಕಠಿಣ ಕಾಯ್ದೆಯಡಿ ಬಂಧಿತರಾದವರು ಕಡ್ಡಾಯವಾಗಿ ಒಂದು ವರ್ಷ ಜೈಲುವಾಸ ಅನುಭವಿಸಬೇಕಾದ ಹಿನ್ನೆಲೆಯಲ್ಲಿ, ಕಳೆದ ಒಂದು ವರ್ಷದಿಂದ ರನ್ಯಾ ರಾವ್‌ಗೆ ಎಲ್ಲಿಯೂ ಜಾಮೀನು ಸಿಕ್ಕಿರಲಿಲ್ಲ.

ಡಿಆರ್‌ಐ ಮೂಲಗಳ ಪ್ರಕಾರ, ನಟಿ ರಣ್ಯಾ ರಾವ್ ಜೊತೆಗೆ ಈ ಕೃತ್ಯದಲ್ಲಿ ಶಾಮೀಲಾಗಿದ್ದ ಅವರ ಇಬ್ಬರು ಸಹಚರರು ಕೂಡ ಈ ವಾರ 'ಕೋಫೆಪೋಸಾ' ಬಂಧನದಿಂದ ಮುಕ್ತರಾಗಲಿದ್ದಾರೆ. 34 ವರ್ಷದ ರನ್ಯಾ ರಾವ್ ಅವರೊಂದಿಗೆ, 36 ವರ್ಷದ ತೆಲುಗು ನಟ ತರುಣ್ ಹಾಗೂ 26 ವರ್ಷದ ಸಾಹಿಲ್ ಜೈನ್ ಎಂಬುವವರೂ ಜೈಲಿನಿಂದ ಹೊರಬರಲಿದ್ದಾರೆ.

ಒಟ್ಟಾರೆಯಾಗಿ 100 ಕೆಜಿಗೂ ಅಧಿಕ ಚಿನ್ನವನ್ನು ಅಕ್ರಮವಾಗಿ ಸಾಗಿಸಿದ ಬೃಹತ್ ಜಾಲದಲ್ಲಿ ಇವರು ಶಾಮೀಲಾಗಿದ್ದಾರೆ ಎಂಬ ಆರೋಪಗಳಿದ್ದವು. ಇದೀಗ ಕೋಫೆಪೋಸಾ ಕಾಯ್ದೆಯಡಿ ವಿಧಿಸಲಾಗಿದ್ದ ಒಂದು ವರ್ಷದ ಕಡ್ಡಾಯ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ. ಜಾಮೀನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಕಸ್ಟಮ್ಸ್ ನಿಯಮಗಳನ್ನು ಉಲ್ಲಂಘಿಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ದೇಶಕ್ಕೆ ತರುವ ಇಂತಹ ಅಕ್ರಮ ಜಾಲಗಳ ವಿರುದ್ಧ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಕೇವಲ ನಟಿಯಷ್ಟೇ ಅಲ್ಲದೆ, ಹವಾಲಾ ಡೀಲರ್‌ಗಳು ಹಾಗೂ ಇತರ ಕೆಲವು ಪ್ರಭಾವಿ ವ್ಯಕ್ತಿಗಳು ಕೂಡ ಭಾಗಿಯಾಗಿರುವ ಶಂಕೆ ಇದ್ದು, ಡಿಆರ್‌ಐ ತನಿಖೆಯನ್ನು ಮುಂದುವರಿಸಿದೆ. ಜೈಲಿನಿಂದ ಹೊರಬಂದರೂ ಸಹ, ಕಳ್ಳಸಾಗಣೆ ಪ್ರಕರಣದ ಮುಂದಿನ ಕಾನೂನು ಹೋರಾಟಗಳನ್ನು ಮತ್ತು ವಿಚಾರಣೆಗಳನ್ನು ರನ್ಯಾ ರಾವ್ ಎದುರಿಸಬೇಕಾಗುತ್ತದೆ. ಒಟ್ಟಿನಲ್ಲಿ, ಸತತ ಒಂದು ವರ್ಷದ ಜೈಲುವಾಸದ ನಂತರ ನಟಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+