ಆಚಾರ್ಯ ಸಂಸ್ಥೆಯಲ್ಲಿ 'ಅಲೆ' ಎಂಬ ಕಲೆಯ ಬಲೆ!
ಬೆಂಗಳೂರು, ಸೆ. 25 : ಆಚಾರ್ಯ ಇನ್‌ಸ್ಟಿಟ್ಯೂಟ್ 'ಅಲೆ' ಎಂಬ ಕಲೆ ಮತ್ತು ಸಾಂಸ್ಕೃತಿಕ ಕ್ಲಬ್ ಅನ್ನು ಕರ್ನಾಟಕದ ವಿಶಿಷ್ಟ ಕಲೆ ಡೊಳ್ಳು ಕುಣಿತ, ಜನಾಂಗೀಯ ನಿಂದನೆ ಕುರಿತು ಜಾಗೃತಿ ಮೂಡಿಸುವ ನಾಟಕ ಹಾಗು ಫ್ಯೂಷನ್ ಡಾನ್ಸ್ ಪ್ರದರ್ಶಿಸುವ ಮುಖಾಂತರ ವಿಶಿಷ್ಟವಾಗಿ ಸೆ.21ರಂದು ಶನಿವಾರ ಉದ್ಘಾಟಿಸಿತು.
ಹೆಸರಘಟ್ಟದಲ್ಲಿರುವ ಆಚಾರ್ಯ ಇನ್‌ಸ್ಟಿಟ್ಯೂಟ್‌ನಲ್ಲಿ ಈ ಕ್ಲಬ್ ಉದ್ಘಾಟನೆಯ ತಯಾರಿ ಕೂಡ ವಾರದುದ್ದಕ್ಕೂ ವಿಭಿನ್ನವಾಗಿ ನಡೆದಿತ್ತು. ಈ ಸಮಾರಂಭದ ಕುರಿತು ಸಸ್ಪೆನ್ಸ್ ಹುಟ್ಟುಹಾಕಲಾಗಿತ್ತು. ಫೇಸ್ ಬುಕ್ ನಲ್ಲಿಯೂ ವಿಭಿನ್ನವಾಗಿ ಪ್ರಚಾರ ನೀಡಲಾಗಿತ್ತು. ಇದೇನಪ್ಪ ಇದು ಎಂದು ವಿದ್ಯಾರ್ಥಿಗಳೆಲ್ಲ ತಲೆ ಕೆಡಿಸಿಕೊಂಡಿದ್ದರು ಎಂದು ಸಂಘಟಕರು ಹೇಳುತ್ತಾರೆ.
ಸರಿಯಾಗಿ 12.30ಕ್ಕೆ ಕ್ಯಾಂಪಸ್‌ನ ನಾಲ್ಕೂ ಮೂಲೆಗಳಿಂದ ವಿದ್ಯಾರ್ಥಿಗಳು ಡ್ರಮ್ ಬಾರಿಸಲು ಆರಂಭಿಸಿದರು. ಉಳಿದವರು ಅವರ ಹಿಂದಿಂದೆ, ಕಿಂದರಿಜೋಗಿಯನ್ನು ಹಿಂಬಾಲಿಸುವ ಇಲಿಗಳಂತೆ ವಿದ್ಯಾರ್ಥಿಗಳು ಹಿಂಬಾಲಿಸುತ್ತ ಪ್ರಮುಖ ಸ್ಟೇಜನ್ನು ತಲುಪಿದರು. 25 ನಿಮಿಷಗಳಲ್ಲಿ ವಿದ್ಯಾರ್ಥಿಗಳೇ ಹುಲಿ ಕುಣಿತ, ಮೂಕಾಭಿನಯ, ನಾಟಕ, ಬೀಟ್ ಬಾಕ್ಸ್, ನರ್ತನವನ್ನು ಅತ್ಯಂತ ಉತ್ಸಾಹದಿಂದ ಮಾಡಿದರು. ಪಟಾಕಿಯನ್ನು ಸಿಡಿಸುವ ಕಾರ್ಯಕ್ರಮ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು.

'ಅಲೆ' ಹೊಸ ಅಲೆ ಎಬ್ಬಿಸಲಿದೆ
ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಈ ಕ್ಲಬ್ ಅನ್ನು ಆರಂಭಿಸಲಾಗಿದೆ. ನಾಟಕ, ಹಾಡು, ನರ್ತನ, ವರ್ಣಚಿತ್ರ, ಸಾಹಿತ್ಯ ಚಟುವಟಿಕೆ ಮುಂತಾದವುಗಳಿಗೆ ಒತ್ತು ನೀಡಲಾಗುವುದು ಎಂದು ಅಲೆ ಟೀಮ್ ಹೇಳಿದೆ. ಇದು ಕಲಾತ್ಮಕವಾಗಿ ಮತ್ತು ಸಾಂಸ್ಕೃತಿಕವಾಗಿ ಹೊಸ ಅಲೆ ಎಬ್ಬಿಸುತ್ತದೆ ಎಂಬುದು ಅವರ ವಿಶ್ವಾಸ.

ಪ್ರತಿಭಾ ಪ್ರದರ್ಶನದ ವೇದಿಕೆ
"ನಾವು ಹಲವಾರು ವರ್ಷಗಳಿಂದ ಕಲಾತ್ಮಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳನ್ನು ಮಾಡುತ್ತಲೇ ಬಂದಿದ್ದೇವೆ. ಆದರೆ, ಈ ಬಾರಿ ಇನ್ನೂ ವಿಭಿನ್ನವಾಗಿ ಮತ್ತು ದೊಡ್ಡದಾಗಿ ಮಾಡಬೇಕೆನ್ನುವ ಉದ್ದೇಶದಿಂದ 'ಅಲೆ' ಹುಟ್ಟುಹಾಕಲಾಗಿದೆ. ಇದು ಪ್ರತಿಭಾ ಪ್ರದರ್ಶನದ ವೇದಿಕೆ ಮಾತ್ರವಲ್ಲ, ಯುವ ಪ್ರತಿಭೆಗಳಿಗೆ ಹೊಸದನ್ನು ಕಲಿಯುವ ವೇದಿಕೆಯೂ ಆಗಲಿದೆ" ಅಂತಾರಿ ಅಲೆ ತಂಡದ ವಿದ್ಯಾರ್ಥಿಗಳು.

ಕ್ಲಬ್ ಸಂಘಟಕ ದಿಲೀಪ್ ಮಾತು
"ವಿದ್ಯಾರ್ಥಿಗಳಲ್ಲಿ ಕಲೆಯ ಬಗ್ಗೆ ಆಸಕ್ತಿ ಕೆರಳಿಸುವುದು, ಅವರನ್ನು ಒಗ್ಗೂಡಿಸುವುದು ಮತ್ತು ಅಲೆ ಕ್ಲಬ್ ಸೇರಲು ಪ್ರೇರೇಪಿಸುವುದು ನಿಜಕ್ಕೂ ಸವಾಲಿನದಾಗಿತ್ತು. ಸಾಕಷ್ಟು ವಿದ್ಯಾರ್ಥಿಗಳು ಕ್ಲಬ್ ಸೇರುತ್ತಾರೆ ಎಂಬ ಭರವಸೆ ಇದೆ. ಇದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಇರಾದೆಯೂ ಇದೆ" ಎಂದು ಹೇಳುತ್ತಾರೆ ಕ್ಲಬ್‌ನ ಸಂಘಟಕ, ಕಲಾವಿದ ಮತ್ತು ಎಂ.ಕಾಂ. ಕೊನೆಯ ವರ್ಷದ ವಿದ್ಯಾರ್ಥಿ ದಿಲೀಪ್.

ಕ್ಲಬ್ ಕಾರ್ಯದರ್ಶಿ ಸಂತೋಷ್ ಏನಂತಾರೆ?
ಆಚಾರ್ಯ ಇನ್‌ಸ್ಟಿಟ್ಯೂಟ್‌ನ ಕಾರ್ಪೊರೇಟ್ ಮತ್ತು ಮೀಡಿಯಾ ರಿಲೇಶನ್ ಮ್ಯಾನೇಜರ್, 'ಅಲ್' ಕ್ಲಬ್‌ನ ಕಾರ್ಯದರ್ಶಿಯಾಗಿರುವ ಸಂತೋಷ್ ಅನಂತಪುರ ಅವರು, ಕ್ಲಬ್ ವಿದ್ಯಾರ್ಥಿಗಳಲ್ಲಿ ಉತ್ಸಾಹ ಉಕ್ಕಿಸುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸೃಜನಶೀಲತೆಗೆ ಅಭಿವ್ಯಕ್ತಿಯಾಗಲಿದೆ ಮತ್ತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಲೇಜನ್ನು ಪ್ರತಿನಿಧಿಸಲಿದೆ ಎಂದು ನುಡಿದರು.












Click it and Unblock the Notifications