Bengaluru: ಫೇಸ್‌ಬುಕ್ ಲೈವ್‌ನಲ್ಲೇ ಪತ್ನಿಯನ್ನು ಭೀಕರವಾಗಿ ಕೊಂದಿದ್ದ ಆರೋಪಿ ಸಾವು
ಬೆಂಗಳೂರು, ಆಗಸ್ಟ್ 06: ಪತ್ನಿಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಸಾವನ್ನಪ್ಪಿದ ಘಟನೆ ಕೋಲಾರದಲ್ಲಿ ನಡೆದಿದೆ. ಫೇಸ್ ಬಕ್‌ನಲ್ಲಿ ಲೈವ್ ಮಾಡಿ ಅತ್ತೆ ಮುಂದೆಯೇ ಹೆಂಡತಿಯನ್ನು ಚಾಕುವಿನಿಂದ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯು ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಹೋಗಿ ಮನೆಯ ಮೇಲಿನಿಂದ ಜಿಗಿದು ಸಾವನ್ನಪ್ಪಿದ್ದಾನೆ. ತಬರೇಜ್ ಪಾಷಾ ಸಾವನ್ನಪ್ಪಿದ್ದ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿ ತಬರೇಜ್ ಪಾಷಾ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆಗಸ್ಟ್ 2ರಂದು ಚಾಮರಾಜಪೇಟೆಯಲ್ಲಿರುವ ಪತ್ನಿ ಫಾತೀಮಾಳ ಮನೆಗೆ ತೆರಳಿ ಅತ್ತೆ ಮುಂದೆಯೇ ಮನಬಂದಂತೆ ಚುಚ್ಚಿ ಹತ್ಯೆ ಮಾಡಿದ್ದ. ಕೊಲೆಯ ಭೀಕರ ಕೃತ್ಯದ ದೃಶ್ಯವನ್ನು ಫೇಸ್‌ಬುಕ್‌ನಲ್ಲಿ ಸೆರೆಹಿಡಿದುಕೊಂಡು ಆರೋಪಿ ಪರಾರಿಯಾಗಿದ್ದ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.

ಕೊಲೆ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಬೆಂಗಳೂರಿನಿಂದ ಪರಾರಿಯಾಗಿ ಕೋಲಾರಕ್ಕೆ ತೆರಳಿದ್ದ ಆರೋಪಿ ಕಳೆದ ನಾಲ್ಕು ದಿನಗಳಿಂದ ಮಸೀದಿಯೊಂದರಲ್ಲಿ ಆಶ್ರಯ ಪಡೆದ್ದ ಎನ್ನಲಾಗಿದೆ. ಬಳಿಕ ನಿನ್ನೆ ಆತನ ಚಿಕ್ಕಮ್ಮನ ಮನೆಗೆ ಬಂದು ತಲೆ ಮರೆಸಿಕೊಂಡಿದ್ದ. ಇತ್ತ ಕೋಲಾರದಲ್ಲಿ ಆರೋಪಿ ಇರುವುದರ ಮಾಹಿತಿ ಸಂಗ್ರಹಿಸಿದ ಪೊಲೀಸರ ತಂಡವು ಸ್ಥಳಕ್ಕೆ ತೆರಳಿದೆ.
ಪೊಲೀಸರನ್ನು ನೋಡುತ್ತಿದ್ದಂತೆ ಆರೋಪಿ ತಬರೇಜ್ ಪಾಷಾ ಬಂಧನ ಭೀತಿಯಿಂದ ಪಾರಾಗಲು ಮನೆಯ ಟರೇಸ್‌ನಿಂದ ಜಿಗಿದಿದ್ದಾನೆ. ಘಟನೆಯಲ್ಲಿ ತಬರೇಜ್ ಪಾಷಾ ಸ್ಥಳದಲ್ಲೇ ತೀವ್ರ ಅಸ್ವಸ್ಥನಾಗಿದ್ದ. ಸ್ಥಳದಲ್ಲಿದ್ದವರು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications