ವಿಧಾನಸೌಧದಲ್ಲಿ ಹಣ ಪತ್ತೆ : ಎಸಿಬಿಯಿಂದ ಮೋಹನ್ ಬಂಧನ
ಬೆಂಗಳೂರು, ಜನವರಿ 08 : ವಿಧಾನಸೌಧಲ್ಲಿ 25.7 ಲಕ್ಷ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ತನಿಖೆ ಆರಂಭವಾಗಿದೆ. ಹಣ ಸಾಗಣೆ ಮಾಡುತ್ತಿದ್ದ ಮೋಹನ್ ಕುಮಾರ್‌ನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿಧಾನಸೌಧಲ್ಲಿ ಹಣ ಪತ್ತೆಯಾದ ಪ್ರಕರಣ ತನಿಖೆಯನ್ನು ವಿಧಾನಸೌಧ ಠಾಣೆ ಪೊಲೀಸರು ಎಸಿಬಿಗೆ ವರ್ಗಾವಣೆ ಮಾಡಿದ್ದರು. ಮಂಗಳವಾರ ಸಂಜೆ ಮೋಹನ್ ಮನೆಯಲ್ಲಿ ಮಹಜರು ಮಾಡಿದ ಬಳಿಕ ಎಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮೋಹನ್ ಮನೆಯಲ್ಲಿ ಮಹಜರು ಮಾಡುವಾಗ 2 ಮೊಬೈಲ್‌ಗಳು ಪತ್ತೆಯಾಗಿವೆ. ಮೋಹನ್ ಕಂಪ್ಯೂಟರ್ ಹಾರ್ಡ್ ಡಿಸ್ಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಬೈಲ್‌ಗಳಲ್ಲಿನ ಸಂದೇಶಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಮೋಹನ್ ಕುಮಾರ್ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರ ಕಚೇರಿ ಟೈಪಿಸ್ಟ್. ಮೋಹನ್ ದಾಖಲೆ ಇಲ್ಲದ 25.7 ಲಕ್ಷ ಹಣವನ್ನು ಸಾಗಣೆ ಮಾಡುವಾಗ ಜನವರಿ 4ರ ಶುಕ್ರವಾರ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಬಂಧಿಸಲಾಗಿತ್ತು.
ಮಲ್ಲೇಶ್ವರದ ಸ್ವಿಮ್ಮಿಂಗ್ ಫೂಲ್ ಬಡಾವಣೆ ನಿವಾಸಿ ಮೋಹನ್ ಕುಮಾರ್ ಗುತ್ತಿಗೆ ಆಧಾರದಲ್ಲಿ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಹಣ ಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದರು.
ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣ ಬೆಳಕಿಗೆ ಬಂದ ನಂತರ ಪ್ರತಿಪಕ್ಷ ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿತ್ತು. ಸಚಿವ ಪುಟ್ಟರಂಗ ಶೆಟ್ಟಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿತ್ತು.












Click it and Unblock the Notifications