ವಿದ್ಯಾರ್ಥಿಗಳಿಗೆ ಆಧಾರ್ ಕಡ್ಡಾಯ: ಶಿಕ್ಷಣ ಇಲಾಖೆ ಆದೇಶ
ಬೆಂಗಳೂರು, ಅಕ್ಟೋಬರ್, 8: 2016-2017ನೇ ಶೈಕ್ಷಣಿಕ ವರ್ಷದ ಅಂತ್ಯದ ವೇಳೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗು ಪಿಯು ವಿದ್ಯಾರ್ಥಿಗಳಿಗೆ ಆಧಾರ್ ಕಡ್ಡಾಯಗೊಳಿಸಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರಿ, ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೂ ಈ ಆದೇಶ ಅನ್ವಯಿಸುತ್ತದೆ ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗಾಗಿ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನ, ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್ ಮತ್ತಿತರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಯೋಜನೆಗಳ ಸದ್ಬಳಕೆಗೆ ಆಧಾರ್ ಗುರುತಿನ ಚೀಟಿಯನ್ನು ಸಂಯೋಜನೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ರಾಜ್ಯದಲ್ಲಿರುವ 1 ಕೋಟಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಿದ್ಯಾರ್ಥಿಗಳ ಪೈಕಿ ಈಗಾಗಲೇ 65 ಲಕ್ಷ ವಿದ್ಯಾರ್ಥಿಗಳು ಆಧಾರ್ ಸಂಖ್ಯೆ ನೋಂದಾಯಿಸಿದ್ದಾರೆ.
ಉಳಿದ ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆ ಮಾಡಿಸಲು ಗ್ರಾಮೀಣ ಪ್ರದೇಶದ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ಸಿಬ್ಬಂದಿಯನ್ನು ಕಳುಹಿಸಿಕೊಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್ ತಿಳಿಸಿದ್ದಾರೆ.












Click it and Unblock the Notifications