ಗೋಮೂತ್ರ ಸೇವಿಸಿದರೆ ಡೇಂಜರ್ ಅಂತಿದ್ದಾರೆ ಸಂಶೋಧಕರು!
ನವದೆಹಲಿ: ಗೋಮೂತ್ರ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದ್ದು, ಮಾನವನ ಆರೋಗ್ಯಕ್ಕೆ ಒಳ್ಳೆಯದು ಎಂದೇ ಇಷ್ಟುದಿನ ಎಲ್ಲರೂ ಅಂದುಕೊಂಡಿದ್ದರು. ಆಯುರ್ವೇದದಲ್ಲಿ ಗೋಮೂತ್ರ ಬಳಿಸಿ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಇತ್ತೀಚಿಗೆ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ನಡೆಸಿರುವ ಸಂಶೋಧನೆ, ಗೋಮೂತ್ರ ಮಾನವನ ಆರೋಗ್ಯಕ್ಕೆ ಹಾನಿಕರ ಎಂಬ ಮಾಹಿತಿ ಹೊರಹಾಕಿದೆ.
ಈಗಾಗಲೇ ಗೋ (Cow) ಮೂತ್ರ (Urine) ಬಳಸಿ ಔಷಧ ತಯಾರಿಸುತ್ತಿವೆ ಹಲವು ಕಂಪನಿಗಳು. ಗೋಮೂತ್ರ ಮಧುಮೇಹಕ್ಕೆ ಅಥವಾ ಸಕ್ಕರೆ ಖಾಯಿಲೆ ಇರುವವರಿಗೆ ಪ್ರಯೋಜನಕಾರಿ ಎಂಬ ಮಾತೂ ಇದೆ. ಆದರೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಮತ್ತು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (IVRI) ನಡೆಸಿರುವ ಸಂಶೋಧನೆಯಲ್ಲಿ ವ್ಯತಿರಿಕ್ತ ಮಾಹಿತಿ ಹೊರಬಿದ್ದಿದೆ. ಗೋಮೂತ್ರವು ಮಾನವನ ನೇರ ಸೇವನೆಗೆ ಸೂಕ್ತವಲ್ಲ, ಇದು ಅಪಾಯಕಾರಿ ಬ್ಯಾಕ್ಟೀರಿಯಾ ಹೊಂದಿರಬಹುದು ಎಂದು ಸಂಶೋಧನಾ ವರದಿ ತಿಳಿಸಿದೆ.

ಗೋಮೂತ್ರ ಆರೋಗ್ಯಕ್ಕೆ ಒಳ್ಳೆಯದಲ್ವಾ?
ಗೋಮೂತ್ರ ಆರೋಗ್ಯಕ್ಕೆ ಒಳ್ಳೆಯದು ಎಂಬ ಮಾತನ್ನು ನಾವು ಇಷ್ಟುದಿನ ಎಲ್ಲೆಡೆ ಕೇಳುತ್ತಿದ್ದೆವು. ಅನಾದಿಕಾಲದಿಂದಲೂ ಹಿಂದೂ (Hindu) ಸಂಪ್ರದಾಯದ ಪ್ರಕಾರ ಶುಭಕಾರ್ಯಕ್ಕೆ ಗೋಮೂತ್ರ ಬಳಕೆ ಮಾಡಲಾಗುತ್ತದೆ. ಆದರೂ ಗೋಮೂತ್ರ ಬಳಕೆ ಬಗ್ಗೆ ಮೊದಲಿನಿಂದಲೂ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಈಗ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (IVRI) ನೀಡಿರುವ ಸಂಶೋಧನಾ ವರದಿ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
ಗೋಮೂತ್ರದಲ್ಲಿ ಏನೇನ್ ಇರುತ್ತೆ?
ಅಂದಹಾಗೆ ದೇಶ-ವಿದೇಶದಲ್ಲಿ ಈ ಮೊದಲು ಕೂಡ ಗೋಮೂತ್ರದ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದೆ. ಆ ಸಂಶೋಧನಾ ವರದಿಗಳ ಪ್ರಕಾರ, ಗೋಮೂತ್ರದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಕಾರ್ಬೊನಿಕ್ ಆಮ್ಲ, ಸಾರಜನಕ, ಅಮೋನಿಯಾ, ಮ್ಯಾಂಗನೀಸ್, 2.5 ರಷ್ಟು ಯೂರಿಯಾ, ಖನಿಜ ಸೇರಿದಂತೆ 24 ರೀತಿಯ ಲವಣಗಳು ಹಾಗೂ ಹಾರ್ಮೋನ್ಸ್ ಮತ್ತು 2.5 ರಷ್ಟು ಕಿಣ್ವಗಳಿವೆ ಎಂದು ಗುರುತಿಸಲಾಗಿತ್ತು. ಆದರೆ ಇದೀಗ ಗೋಮೂತ್ರ ಆರೋಗ್ಯಕ್ಕೆ ಸಮಸ್ಯೆ ತರಬಹುದು ಎಂಬ ವರದಿ ಸಂಶೋಧನೆಯಿಂದ ಹೊರಬಿದ್ದಿದೆ.
ಸಂಶೋಧನಾ ವರದಿ ಹೇಳಿದ್ದೇನು?
ಈ ಸಂಶೋಧನೆ ನಡೆಸಿದ್ದು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಇಜ್ಜತ್‌ನಗರದ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (IVRI) ಭೋಜರಾಜ್ ಸಿಂಗ್ ಹಾಗೂ ಮೂವರು ಪಿಎಚ್‌ಡಿ ವಿದ್ಯಾರ್ಥಿಗಳ ತಂಡ. ಸಂಶೋಧನೆ ಹೊರಹಾಕಿರುವ ಮಾಹಿತಿ ಪ್ರಕಾರ, ಆರೋಗ್ಯವಂತ ಹಸುಗಳ ಗೋಮೂತ್ರದಲ್ಲಿ ಕನಿಷ್ಠ 14 ಬಗೆಯ ಬ್ಯಾಕ್ಟೀರಿಯಾ (Bacteria) ಕಂಡುಬರುತ್ತದೆ ಎನ್ನಲಾಗಿದೆ. ಇದರ ಜೊತೆಗೆ ಎಸ್ಚೆರಿಚಿಯಾ ಕೋಲಿ (Escherichia Coli) ಕೂಡ ಕಂಡುಬರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಎಮ್ಮೆ ಮೂತ್ರ ಉತ್ತಮವಂತೆ!
ಸಂಶೋಧನೆಗೆ ಹಸು ಮತ್ತು ಎಮ್ಮೆಯ 73 ಮೂತ್ರದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ ಎಂದು ಸಂಶೋಧನಾ ತಂಡ ತಿಳಿಸಿದೆ. ಮತ್ತೊಂದು ಕಡೆ ಸಂಶೋಧನೆ ವೇಳೆ ಗೋವಿನ ಮೂತ್ರಕ್ಕಿಂತ ಎಮ್ಮೆಯ ಮೂತ್ರ ಹೆಚ್ಚು ಪ್ರಯೋಜನಕಾರಿ ಎಂಬುದು ತಿಳಿಯಿತು ಎಂದು ಸಂಶೋಧನೆ ನಡೆಸಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ತಂಡ ತಿಳಿಸಿದೆ. ಸಾಹಿವಾಲ್, ತಾರ್ಪಾರ್ಕರ್, ವಿಂದಾವಿ ತಳಿಯ ಹಸುಗಳ ಮೂತ್ರವನ್ನು ಪರೀಕ್ಷಿಸಲಾಗಿದೆ.
ಎಮ್ಮೆ ಮೂತ್ರದ ಜೊತೆ ಮನುಷ್ಯನ ಮೂತ್ರದ ಪರೀಕ್ಷೆಯೂ ನಡೆದಿದೆ. ಕಳೆದ ಜೂನ್ ನಿಂದ ನವೆಂಬರ್ ತನಕ ಸಂಶೋಧನೆ ಕೈಗೊಳ್ಳಲಾಗಿತ್ತು ಎಂದು ಸಂಶೋಧನಾ ತಂಡ ಮಾಹಿತಿ ಹಂಚಿಕೊಂಡಿದೆ. ಮತ್ತೊಂದು ಕಡೆ ಆರೋಗ್ಯವಂತ ವ್ಯಕ್ತಿ ಮೂತ್ರದಲ್ಲೂ ಅಪಾಯಕಾರಿ ಬ್ಯಾಕ್ಟೀರಿಯಾ ಇರುತ್ತದೆ ಎಂಬುದು ಪತ್ತೆಯಾಗಿದೆ. ಹಸುವಿನ ಡಿಸ್ಟಲ್ ಯೂರಿನ್ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಮಾತುಗಳು ಮೊದಲಿನಿಂದ ಕೇಳಿ ಬರುತ್ತಿದ್ದು, ಈ ಕುರಿತು ಇನ್ನೂ ಸಂಶೋಧನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications