Namma Metro: ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ ಯತ್ನ: ರೆಡ್ ಅಲರ್ಟ್ ಘೋಷಿಸಿದ್ದ ಸಿಬ್ಬಂದಿ: ರಕ್ಷಣೆಗೆ ಸಂಸದ ಮನವಿ
ಬೆಂಗಳೂರು, ಆಗಸ್ಟ್ 12: ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆಯಾಗಿ ಎರಡು ದಿನ ಕಳೆದಿದೆ. ಜನ ಸಂಚಾರ ಪ್ರಮಾಣ ಹೆಚ್ಚಾಗುತ್ತಿದೆ. ಈ ಮಧ್ಯೆ ಇಂಟರ್‌ಚೇಂಜ್ ನಿಲ್ದಾಣದವಾದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಳಿಗೆ ಜಿಗಿದು ಆತ್ಮಹತ್ಯೆ ಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದುಬಿಎಂಆರ್‌ಸಿಎಲ್ ಅಧಿಕೃತ ಮಾಹಿತಿ ನೀಡಿದೆ. ಈ ವೇಳೆ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದ್ದು, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಂಸದ ತೇಜಸ್ವಿ ಸೂರ್ಯ ಅವರು ಮನವಿ ಮಾಡಿದ್ದಾರೆ.
ಪ್ರಯಾಣಿಕರೊಬ್ಬರು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಹಸಿರು ಮಾರ್ಗದಲ್ಲಿ ಬರುತ್ತಿದ್ದ ರೈಲಿಗೆ ಎದುರಾಗಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವ್ಯಕ್ತಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಿ ರಕ್ಷಣೆ ಮಾಡಲಾಗಿದೆ. ಈ ಘಟನೆ ಸೋಮವಾರ (ಆಗಸ್ಟ್ 11) ರಾತ್ರಿ 10 ಗಂಟೆ ಸುಮಾರಿಗೆ ಜರುಗಿದೆ. ಕೂಡಲೇ ಮೆಟ್ರೋ ಸಿಬ್ಬಂದಿ ರೆಡ್ ಅಲರ್ಟ್ ನೀಡಿತು. ಅಲ್ಲಿಂದ ಅರ್ಧ ಗಂಟೆ ಕಾಲ ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯವಾಯಿತು. ನಂತರ 10.28ಕ್ಕೆ ರೈಲು ಸೇವೆ ಎಂದಿನಂತೆ ಆರಂಭಿಸಲಾಯಿತು.

ಈ ವೇಳೆ ಮಾದಾವರದಿಂದ ಬರುವ ರೈಲು, ಕೆಂಗೇರಿ ಕಡೆಯಿಂದ, ವೈಟ್‌ಫಿಲ್ಡ್ ಹಾಗೂ ರೇಷ್ಮೆ ಸಂಸ್ಥೆಯಿಂದ ಬರುವ ರೈಲುಗಳಲ್ಲಿ ಅಡಚಣೆ ಉಂಟಾಯಿತು. ಪ್ರಯಾಣಿಕನ ಮೇಲೆ ಹತ್ತಿದ ರೈಲಿನಲ್ಲಿದ್ದ ಪ್ರಯಾಣಿಕರನ್ನು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಇಳಿಯಲು ಬಿಡಲಿಲ್ಲ. ಕೆಲ ಹೊತ್ತಿನ ಬಳಿಕ ಪ್ರಯಾಣಿಕರನ್ನು ಇಳಿಸಲಾಯಿತು. ಈ ವೇಳೆ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದು ಕಂಡು ಬಂತು. ಸುಮಾರು ಅರ್ಧಗಂಟೆ ತಡವಾಗಿ ಪ್ರಯಾಣಿಕರು ಗಮ್ಯಸ್ಥಾನ ತಲುಪುವಂತಾಯಿತು.
ಜನ ಸಂಚಾರ ಏರಿಕೆ: ರಕ್ಷಣೆಗೆ ಆದ್ಯತೆ ನೀಡಿ: ಸಂಸದ
ಹಳದಿ ಮಾರ್ಗದಲ್ಲಿ ಪ್ರತಿ 25 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸುತ್ತವೆ. ಆದರೆ ಹಸಿರು ಮಾರ್ಗದಲ್ಲಿ ಪ್ರತಿ 4-8 ನಿಮಿಷಗಳಿಗೊಮ್ಮೆ ರೈಲುಗಳು ಕಾರ್ಯಾಚರಣೆ ಮಾಡುತ್ತವೆ. ಹಸಿರು ಮಾರ್ಗವೇ ಆರ್‌ವಿರಸ್ತೆಯಲ್ಲಿ ಹಳದಿ ಮಾರ್ಗ ಸಂಪರ್ಕಿಸುತ್ತದೆ. ಇದರಿಂದಾಗಿ ಆರ್‌ವಿ ರಸ್ತೆ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗಲು ಕಾರಣವಾಗಬಹುದು. ಜನಸಂದಣಿ ಹೆಚ್ಚಿರುವ ವೇಳೆ ಪ್ರಯಾಣಿಕರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ BMRCL ಗೆ ಸಂಸದ ತೇಜಸ್ವಿ ಸೂರ್ಯ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ತಿಂಗಳಾಂತ್ಯಕ್ಕೆ ಹೆಚ್ಚುವರಿ ರೈಲು ಬರಲಿದ್ದು, ಅದು ಸಹ ಕಾರ್ಯಾಚರಣೆಗೆ ಇಳಿಯಲಿದೆ. ಮೆಟ್ರೋ ಪ್ರಯಾಣಿಕರ ಸೇಪ್ಟಿಗಾಗಿ ಪ್ಲಾಟ್ ಫಾರ್ಮ್ ಸ್ಕ್ರೀನ್ ಡೋರ್ ವ್ಯವಸ್ಥೆ ಮಾಡಬೇಕು. ನಾನು ಯೆಲ್ಲೋ ಲೈನ್ ರೈಲಿನಲ್ಲಿ ಮೊದಲ ದಿನ ಪ್ರಯಾಣಿಸಿದೆ. ಅನೇಕ ಜನರು ಈ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications