ವಾಲಿಕೊಂಡಿದ್ದ ಬೆಂಗಳೂರಿನ ಪಿಜಿ ಕಟ್ಟಡ ಸಂಪೂರ್ಣ ನೆಲಸಮ
ಬೆಂಗಳೂರು, ಫೆಬ್ರವರಿ 20: ಹೆಬ್ಬಾಳ ಹತ್ತಿರದ ರಾಮಯ್ಯ ಲೇಔಟ್‌ನಲ್ಲಿ ಕುಸಿದು ವಾಲಿಕೊಂಡಿದ್ದ ಪೇಯಿಂಗ್ ಗೆಸ್ಟ್ (ಪಿಜಿ) ಕಟ್ಟಡವನ್ನು ಗುರುವಾರ ಬಿಬಿಎಂಪಿ ಸಂಪೂರ್ಣವಾಗಿ ಹಾಗೂ ಸುರಕ್ಷಿತವಾಗಿ ನೆಲಸಮಗೊಳಿಸಿದೆ.
ಕಳೆದ ಫೆಬ್ರವರಿ 5 ರಂದು ಕಟ್ಟಡ ವಾಲಿಕೊಂಡು ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಪಾಯ ತೆಗೆಯುವ ವೇಳೆ ಬೆಳಿಗ್ಗೆ G+3 ಕಟ್ಟಡ ವಾಲಿಕೊಂಡಿತ್ತು. ಈ ಸಂಬಂಧ ಪಾಲಿಕೆ ಅಧಿಕಾರಿಗಳು, ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡದ ಸುತ್ತಮುತ್ತಲಿನ ನಿವಾಸಿಗಳನ್ನು ಕಲ್ಯಾಣಮಂಟಪ ಹಾಗೂ ಶಾಲೆಯಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರು. ಅಕ್ಕಪಕ್ಕದ ಮನೆಗಳಿಗೆ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದರು.
ಯಾವ ಮನೆಗಳಿಗೂ ತೊಂದರೆಯಾಗದಂತೆ ವಾಲಿರುವ ಕಟ್ಟಡವನ್ನು ತೆರವುಗೊಳಿಸಲಾಗಿದೆ. ಪಾಲಿಕೆಯ ಗಮನಕ್ಕೆ ಬಾರದೆ ಕಟ್ಟಡ ನಿರ್ಮಿಸಲು ಪಾಯ ತೆಗೆದಿರುರವ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಂಡಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಾಸ್ಕರ್ ರಾವ್ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

ಅಂದು ಪೇಯಿಂಗ್ ಗೆಸ್ಟ್ ಕಟ್ಟಡ ವಾಲಿಕೊಂಡಿದ್ದರಿಂದ 30ಕ್ಕೂ ಹೆಚ್ಚು ವಾಸಿಗಳು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು ಕಟ್ಟಡ ಸಂಪೂರ್ಣ ಕುಸಿದಿದ್ದರೇ ಹೆಚ್ಚು ಪ್ರಾಣಾಪಾಯವಾಗುವ ಸಂಭವವಿತ್ತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದರು. ಕಟ್ಟಡ ಯಾವುದೇ ಕ್ಷಣದಲ್ಲಾದರೂ ಉರುಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸ್ಥಳೀಯರಿಗೆ ಯಾವುದೇ ತೊಂದರೆ ಆಗದ ರೀತಿ ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡಲಾಗಿದೆ. ಇದರಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications