ಚೀಟಿ ಹೆಸರಿನಲ್ಲಿ 8 ಕೋಟಿ ವಂಚಿಸಿದ್ದ ದಂಪತಿಗಳ ಬಂಧನ
ಬೆಂಗಳೂರು, ನವೆಂಬರ್ 30 : ಚೀಟಿ ಹೆಸರಿನಲ್ಲಿ ಜನರಿಂದ 8 ಕೋಟಿಗೂ ಅಧಿಕ ಹಣ ಸಂಗ್ರಹಣೆ ಮಾಡಿ ಪರಾರಿಯಾಗಿದ್ದ ದಂಪತಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಒಂದು ತಿಂಗಳ ಹಿಂದೆ ದಂಪತಿ ಹಣದೊಂದಿಗೆ ಪರಾರಿಯಾಗಿದ್ದರು.
ಬಂಧಿತ ದಂಪತಿಯನ್ನು ಶ್ರೀನಿವಾಸ್ (63) ಮತ್ತು ಪುಷ್ಪಲತಾ ಎಂದು ಗುರುತಿಸಲಾಗಿದೆ. ಜಯನಗರದ 4ನೇ ಬ್ಲಾಕ್ನಲ್ಲಿ ಶ್ರೇಯಸ್ ಫೈನಾನ್ಸ್ ಹೆಸರಿನಲ್ಲಿ ಕಂಪನಿ ತೆರೆದಿದ್ದ ದಂಪತಿ ಹಣ ಠೇವಣಿ ಇಟ್ಟುಕೊಳ್ಳುವುದು, ಸಾಲ ನೀಡುವುದು ಮುಂತಾದ ವ್ಯವಹಾರಗಳನ್ನು ನಡೆಸುತ್ತಿದ್ದರು. [43 ಕೋಟಿ ವಂಚನೆ : ವಿಶಾಲಾಕ್ಷಿ ಭಟ್ ಬಂಧನ]

ಜಯನಗರದಲ್ಲಿ ಹಲವಾರು ಜನರಿಂದ ಹಣ ಪಡೆದಿದ್ದ ದಂಪತಿಗಳು ಅವರಿಗೆ ವಂಚನೆ ಮಾಡಿದ್ದರು. ಹಣ ಪಡೆದವರಿಗೆ ದಂಪತಿಗಳು ನೀಡಿದ್ದ ಚೆಕ್ ಸಹ ಬೌನ್ಸ್ ಆಗಿತ್ತು. ವಂಚನೆಗೆ ಒಳಗಾದ ಜನರ ಪೈಕಿ ಮೂವರು ದಂಪತಿಗಳ ವಿರುದ್ಧ ಜಯನಗರ ಠಾಣೆಗೆ ದೂರು ನೀಡಿದ್ದರು. [ಚಿಟ್ ಫಂಡ್ ನಿಂದ 2 ಕೋಟಿ ವಂಚನೆ]
ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಈ ದಂಪತಿಗಳು ತಲೆಮರೆಸಿಕೊಂಡಿದ್ದರು. ದಂಪತಿಗಳು ಬೆಂಗಳೂರಿನಲ್ಲೇ ಇರುವ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿದ ಪೊಲೀಸರು ಭಾನುವಾರ ರಾತ್ರಿ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಅನ್ವಯ ಈ ದಂಪತಿಗಳು ಸುಮಾರು 8 ಕೋಟಿಗೂ ಹೆಚ್ಚು ವಂಚನೆ ಮಾಡಿರುವುದು ತಿಳಿದುಬಂದಿದೆ ಎಂದು ಡಿಸಿಪಿ ಲೋಕೇಶ್ಕುಮಾರ್ ತಿಳಿಸಿದ್ದಾರೆ. ದಂಪತಿಗಳ ವಿಚಾರಣೆ ಮುಂದುವರೆದಿದೆ.


Click it and Unblock the Notifications
