ಬೆಂಗಳೂರಿನಲ್ಲಿ 50 ಕಿ.ಮೀ ಪ್ರದಕ್ಷಿಣೆಗೆ ಆರು ಗಂಟೆ - ಮಹಾನಗರದ ವಿಶ್ವರೂಪ ದರ್ಶನ: ರಾಜೀವ ಹೆಗಡೆ ಬರಹ

ಬೆಂಗಳೂರಿನಲ್ಲಿ 50 ಕಿ.ಮೀ ಪ್ರದಕ್ಷಿಣೆಗೆ ಆರು ಗಂಟೆ - ಮಹಾನಗರದ ವಿಶ್ವರೂಪ ದರ್ಶನ: ಹವ್ಯಾಸಿ ಬರಹಗಾರ ರಾಜೀವ ಹೆಗಡೆ ಅವರ ಬರಹ ಇಲ್ಲಿದೆ.

ಕೆಲ ದಿನಗಳ ಹಿಂದೆ ಒಂದೇ ದಿನದಲ್ಲಿ ಬೆಂಗಳೂರು ಮಹಾನಗರದೊಳಗೆ ಬರೋಬ್ಬರಿ 50 ಕಿ.ಮೀ ಪ್ರದಕ್ಷಿಣೆ ಹಾಕುವ ಪುಣ್ಯದ ಅವಕಾಶ ಲಭಿಸಿತ್ತು. ಕೇವಲ 6 ಗಂಟೆಯಲ್ಲಿ 50 ಕಿ.ಮೀ ಪರ್ಯಟನೆಯನ್ನು ಮಾಡಿ ಬೆಂದಕಾಳೂರಿನ ವಿಶ್ವರೂಪ ದರ್ಶನವಾಯಿತು. ನಮ್ಮನ್ನಾಳುವ ಸರ್ಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಶಾಸಕರು ಹಾಗೂ ಜನಪ್ರತಿನಿಧಿಗಳು ಎಷ್ಟು ಹುಲುಸಾಗಿ ಮೇಯುತ್ತಿದ್ದಾರೆ ಹಾಗೂ ನಾವು ಸಾಮಾನ್ಯ ಜನರು ಜಾತಿ ಕೊಂಪೆಯಲ್ಲಿ ಹೇಗೆ ಕಿತ್ತಾಡುತ್ತಿದ್ದೇವೆ ಎನ್ನುವ ಸಾಕ್ಷಾತ್‌ ವಿರಾಟ್‌ ರೂಪವೇ ಕಣ್ಣೆದುರಿಗೆ ಬಂದಿತು. ಒಂದು ಪೇಂಟಿಂಗ್ ಸಂಗ್ರಹಿಸಲು ಈ ಸುತ್ತಾಟ ಮಾಡಿದ್ದೆ. ವಿಪರ್ಯಾಸವೆಂದರೆ ಆ ಪೇಂಟಿಂಗ್‌‌ನ್ನು ಬೆಂಗಳೂರಿನಿಂದ ಉಜಿರೆಗೆ ಇನ್ನೂ ಎರಡು ಗಂಟೆ ಮೊದಲೇ ತಲುಪಿಸಿದೆ.

ನಾನು ಮಾರತಹಳ್ಳಿಯಿಂದ ಆರಂಭಿಸಿ ಔಟರ್‌ ರಿಂಗ್‌ ರೋಡ್‌ನಲ್ಲಿ ಸಹಕಾರನ ನಗರಕ್ಕೆ ಹೋಗಿ, ಅಲ್ಲಿಂದ ಜೆ.ಪಿ ನಗರಕ್ಕೆ ಆಗಮಿಸಿದ್ದೆ. ಈ ಅವಧಿಯಲ್ಲಿ ನಾಗಾವರ, ಹೆಬ್ಬಾಳ, ಜೆಪಿ ನಗರ, ಆರ್‌ಬಿಐ ಲೇಔಟ್‌ ರೀತಿಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ದೌರ್ಭಾಗ್ಯ ನನಗೆ ಪ್ರಾಪ್ತಿಯಾಯಿತು. ನಾನು ಮೇಲೆ ಉಲ್ಲೇಖಿಸಿದ ಬಹುತೇಕ ಪ್ರದೇಶಗಳಲ್ಲಿ ರಸ್ತೆಗಳನ್ನು ಅಗೆದು ಹಾಕಿ ವರ್ಷಗಳೇ ಕಳೆದಂತೆ ಭಾಸವಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿರುವ ವಾಣಿಜ್ಯ ಹಾಗೂ ವಸತಿ ಕಟ್ಟಡಗಳಿಗೆ ದಿನದ 24 ಗಂಟೆಯಲ್ಲೂ ಸತತವಾಗಿ ಧೂಳಿನ ಅರ್ಚನೆಯಾಗುತ್ತಿದೆ. ಆ ಮನೆಗಳಲ್ಲಿನ ಸದಸ್ಯರು ಹಾಗೂ ಅಂಗಡಿ-ಮುಂಗಟ್ಟುಗಳ ಮಾಲೀಕರನ್ನು ನೆನೆಸಿಕೊಂಡರೆ ರಾತ್ರಿ ನಿದ್ರೆ ಬರುವುದಿಲ್ಲ. ಯಾವುದೇ ಗಣಿಗಾರಿಕೆ ಪ್ರದೇಶದಲ್ಲಿ ಗಾಡಿ ಚಲಾಯಿಸುವ ಅನುಭವ ಆಗುತ್ತದೆ. ಅಂಗಡಿಗಳ ಫಲಕಗಳೇ ಧೂಳಿನಲ್ಲಿ ಮುಚ್ಚಿ ಹೋಗಿವೆ.

Bengaluru Glimpse

ಆ ದಿನ ಬೆಳಗ್ಗೆಯಷ್ಟೇ ಕಾರನ್ನು ಸ್ವಚ್ಛವಾಗಿ ತೊಳೆದಿದ್ದೆ. ಆದರೆ ಈ ರಸ್ತೆಗಳಲ್ಲಿ ಹೋಗಿ ಬಂದ ಬಳಿಕ, ಕಾರು ನನ್ನದೆಯೇ ಎನ್ನುವ ಸಂದೇಹಬರುವ ಮಟ್ಟಿಗೆ ರಸ್ತೆಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹಾಗೂ ಘನತೆವೆತ್ತ ಸಚಿವರು ನಿಭಾಯಿಸಿಕೊಂಡು ಬಂದಿರುವುದಕ್ಕೆ ಕೆಂಪೇಗೌಡ ಪ್ರಶಸ್ತಿ ಕೊಟ್ಟರೂ ಕಡಿಮೆಯಾದೀತು.

ನಾನಿಲ್ಲಿ ಉಲ್ಲೇಖಿಸಿರುವ ರಸ್ತೆಗಳು ಬೆಂಗಳೂರಿನ ಅವ್ಯವಸ್ಥೆಯ ಸಣ್ಣ ಉದಾಹರಣೆಯಷ್ಟೇ. ಆದರೆ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಬಹುತೇಕ ಭಾಗದ ಜನರ ಸಂಕಷ್ಟ ಹೇಳತೀರದಾಗಿದೆ. ವರ್ಷಾನುಗಟ್ಟಲೇ ಈ ರೀತಿ ರಸ್ತೆಗಳನ್ನು ಅಗೆದು ಹಾಕಿಹೋದರೆ, ಅಲ್ಲಿರುವ ಅಂಗಡಿಗಳನ್ನೇ ನಂಬಿಕೊಂಡು ಬದುಕುವ ಮಧ್ಯಮ ವರ್ಗ ಕುಟುಂಬದ ಕಥೆ ಎನಾಗಲಿದೆ ಎನ್ನುವ ಸಣ್ಣ ಕಾಳಜಿಯನ್ನೂ ಹೊಂದದವರು ನಮ್ಮ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ನಗರಾಭಿವೃದ್ಧಿ ಸಚಿವರು, ಸಚಿವರು, ಶಾಸಕರು, ಸಂಸದರು ಹಾಗೂ ಪಾಲಿಕೆ ಅಧಿಕಾರಿಗಳಾಗಿದ್ದರೇ ಪ್ರಯೋಜನವೇನಿದೆ ?

ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿರುವ ದನವಾದರೂ ದಿನಕ್ಕೆರಡು ಬಾರಿ ಹಾಲು ಕೊಡುತ್ತದೆ ಹಾಗೂ ಅದು ಹಾಕುವ ಸಗಣಿಯೂ ತೋಟಕ್ಕೆ ಗೊಬ್ಬರವಾಗಿ ಬಳಕೆಯಾಗುತ್ತದೆ. ಆದರೆ ನಮ್ಮ ಬೆಂಗಳೂರಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಪ್ರಾಣಿಗಳಿಗೂ ಹೋಲಿಸಲಾಗದು. ಇವರು ಅಕ್ಷರಶಃ ನರರಾಕ್ಷಸರಿಗೆ ಸಮಾನರು. ದುಡಿಯುವ ವರ್ಗದ ಬೆವರು ಹಾಗೂ ರಕ್ತವನ್ನು ಹೀರುವ ರಕ್ತಬೀಜಾಸುರರು ಇವರು. ಬೆಂಗಳೂರಿನಲ್ಲಿ ಇಂತಹ ನೂರಾರು ರಸ್ತೆಗಳು ಕಾಣಿಸುತ್ತವೆ. ಸಾವಿರಾರು ಕುಟುಂಬಗಳು ಇದರಿಂದ ಬೀದಿಗೆ ಬಿದ್ದಿರುವುದು ಗೊತ್ತಾಗುತ್ತದೆ. ರಸ್ತೆಗಳನ್ನು ಈ ರೀತಿ ತಿಂಗಳು, ವರ್ಷಗಟ್ಟಲೇ ಅಗೆದು ಹಾಕುವುದರಿಂದ ಅವರ ಉದ್ಯಮವು ಸಂಪೂರ್ಣ ನೆಲಕಚ್ಚುವುದರಲ್ಲಿ ಸಂಶಯವಿಲ್ಲ.

ಇವರಿಗೆ ತಾಕತ್ತಿದ್ದರೆ, ಸದಾಶಿವನಗರ, ಡಾಲರ್ಸ್‌ ಕಾಲನಿಯ ರಸ್ತೆಗಳನ್ನು ಇದೇ ರೀತಿ ಅಗೆದು ಹಾಕಲಿ ನೋಡೋಣ. ಇಲ್ಲವಾದಲ್ಲಿ ರಾಜಕಾರಣಿಗಳ ಬೇನಾಮಿ ಆಸ್ತಿಗಳಾಗಿರುವ ದೊಡ್ಡ ಮಾಲ್‌, ಎಸ್‌ಇಝೆಡ್‌ಗಳ ಎದುರು ಈ ರೀತಿ ತಿಂಗಳುಗಟ್ಟಲೇ ಅಗೆದು ಹಾಕುವ ಧೈರ್ಯವನ್ನು ತೋರಲಿ. ಅವರಿಂದ ಹೇಸಿಗೆ ದುಡ್ಡನ್ನು ಬಾಚಿಕೊಂಡು ಬಡವರ ರಕ್ತ ಹೀರಲೇ ಇಂತಹ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಅಗೆದು ಹಾಕುತ್ತಾರೆ ಎನಿಸುತ್ತದೆ.

ಒಬ್ಬ ಬಡ, ಮಧ್ಯಮ ವರ್ಗದ ವರ್ತಕರಿಗೂ ಜೀವನವಿದೆ, ಕುಟುಂಬವಿದೆ, ಅದನ್ನೇ ನಂಬಿಕೊಂಡು ಮಕ್ಕಳ ಶುಲ್ಕ ಕಟ್ಟಬೇಕಿದೆ ಎನ್ನುವ ಸಾಮಾನ್ಯ ಜ್ಞಾನ ಹಾಗೂ ಕಾಳಜಿಯನ್ನು ಸರ್ಕಾರದ ಹಂತದಲ್ಲಿರುವವರಿಗೆ ಇರದಿದ್ದರೆ, ಅವರಿದ್ದೂ ಯಾವುದೇ ಪ್ರಯೋಜನವಿಲ್ಲ. ಹೀಗಿರುವಾಗ ಅವರ ಬದಲಿಗೆ ಆ ಕುರ್ಚಿಯಲ್ಲಿ ಕತ್ತೆ, ಮಂಗಗಳನ್ನು ಕೂರಿಸಿದರೂ ಸಮಸ್ಯೆಯಾಗದು. ಕೆಲವೊಮ್ಮೆ ಸುಧಾರಣೆಯಾದರೂ ಅಚ್ಚರಿಯಿಲ್ಲ.

ನನ್ನ ಸ್ನೇಹಿತರೊಬ್ಬರು ಇಂದಿರಾ ನಗರದಲ್ಲಿ ವಾಸಿಸುತ್ತಾರೆ. ಅವರಿರುವ ಬಡಾವಣೆಗೆ ಕೆಲಸಗಾರರ ಗುಂಪೊಂದು ಬಂತಂತೆ. ಇದ್ದಕ್ಕಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿನ ಚರಂಡಿಯನ್ನು ಕಿತ್ತು ಎಸೆಯಲು ಆರಂಭಿಸಿದ್ದಾರೆ. ಪಾಲಿಕೆಯ ಇಂತಹ ಕಾಮಗಾರಿಯ ಪರಿಚಯ ನಿಮಗೂ ಇರುತ್ತದೆ. ಅಲ್ಲಿರುವ ಕಲ್ಲುಗಳನ್ನು ತೆಗೆದು ಪಕ್ಕದ ಬಡಾವಣೆಗೆ ಹಾಕಿ, ಅಲ್ಲಿರುವ ಕಲ್ಲಿಗೆ ಬಣ್ಣ ಬಳಿದು ಇಲ್ಲಿಗೆ ಹಾಕುವುದು ತುಂಬಾ ಚಿರಪರಿಚಿತವಾದ ಹಗರಣ. ಇಲ್ಲಿಯೂ ಅದೇ ಕೆಲಸ ನಡೆದಿತ್ತು. ಈ ಕಾಮಗಾರಿಗೆ ಪಾಲಿಕೆಯಿಂದ ಬಿಲ್‌ ಪಡೆಯುವುದರ ಜೊತೆಗೆ, ಗುತ್ತಿಗೆದಾರರು ಇನ್ನೊಂದು ಫರ್ಮಾನು ಹೊರಡಿಸಿದ್ದರು. ಪ್ರತಿ ಮನೆಗೂ ಒಂದಿಷ್ಟು ಹಣ ನಿಗದಿ ಮಾಡಿದ್ದರು. ಹಣ ಕೊಡದಿದ್ದರೆ ಮನೆ ಎದುರಿಗಿನ ಚರಂಡಿಯನ್ನು ಮುಚ್ಚುವುದೇ ಇಲ್ಲ. ಮನೆಯ ಗೇಟ್‌ ಒಳಗಿನ ಗಾಡಿಯನ್ನು ತೆಗೆಯುವುದಕ್ಕಾಗಿಯಾದರೂ ಗುತ್ತಿಗೆದಾರರಿಗೆ ಹಣ ಕೊಡಲೇಬೇಕು.

ಬೆಂಗಳೂರಿನ ಹಾಲಿ ಅವ್ಯವಸ್ಥೆಯನ್ನು ನೋಡಿದರೆ, ಇದು ಕೇವಲ ಒಂದು ಬಡಾವಣೆಗೆ ಸೀಮಿತವಾಗಿಲ್ಲ. ಗುತ್ತಿಗೆದಾರರ ಸಂಘವೇ ಹೇಳುವಂತೆ, ಕಮೀಷನ್‌ ಪ್ರಮಾಣವು ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈಗ ಹೆಚ್ಚಾಗಿದೆಯಂತೆ. ಹೀಗಾಗಿ ಗುತ್ತಿಗೆದಾರರಿಗೆ ಕೆಲಸ ಮಾಡಲು ಹಣವೇ ಇಲ್ಲದಿರುವಾಗ, ಸಾಮಾನ್ಯ ಜನರ ಬಳಿ ಬೇಡುವುದು ಅನಿವಾರ್ಯ. ಆದರೆ ಸಾಮಾನ್ಯ ಜನರ ಗೋಳನ್ನು ಮಾತ್ರ ಕೇಳುವರಿಲ್ಲ. ಕಾಲಕ್ಕೆ ತಕ್ಕಂತೆ ಎಲ್ಲ ರೀತಿಯ ತೆರಿಗೆಯನ್ನು ಪಾಲಿಕೆಯಿಂದ ಹಿಡಿದು ಕೇಂದ್ರ ಸರ್ಕಾರದವರೆಗೂ ಕಟ್ಟಿಕೊಂಡು, ಕೊನೆಗೆ ಧೂಳು ತಿಂದುಕೊಂಡು ಬದುಕಬೇಕು.

ಕಾನೂನು ಏನಾಯಿತು?

ಸಿದ್ದರಾಮಯ್ಯರ ಹಿಂದಿನ ಅವಧಿಯಲ್ಲಿ ಒಂದು ಕಾನೂನು ಜಾರಿ ಮಾಡಲಾಗಿತ್ತು. ಯಾವುದೇ ರಸ್ತೆಗಳನ್ನು ಅಗೆಯುವವರಿಂದಲೇ ದುರಸ್ತಿ ಮಾಡಿಸಬೇಕು ಅಥವಾ ಆ ಹಣವನ್ನು ಅವರಿಂದ ತುಂಬಿಸಿಕೊಳ್ಳಬೇಕು. ಆದರೆ ಕಳೆದ ಕೆಲ ವರ್ಷಗಳಿಂದ ಇವೆರಡೂ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಯಾವುದಾದರೂ ಪ್ರಭಾವಿ ಅಥವಾ ಹಠಮಾರಿ ಬಡಾವಣೆಗಳಿದ್ದರೆ ಈ ಕೆಲಸ ಸ್ವಲ್ಪಮಟ್ಟಿಗೆ ಆಗುತ್ತಿದೆ. ಇಲ್ಲವಾದಲ್ಲಿ ಅಗೆದವರು ಕಟ್ಟುವ ಹಣವು ಇನ್ಯಾರದ್ದೋ ಜೇಬಿಗೆ ಇಳಿಯುತ್ತಿದೆ. ನಂತರ ತಿಂಗಳುಗಟ್ಟಲೇ ವಿಳಂಬದ ಬಳಿಕ ಪಾಲಿಕೆಯ ಖರ್ಚಿನಲ್ಲಿ ದುರಸ್ತಿ ಕೆಲಸ ಅಗುತ್ತಿದೆ. ಒಟ್ಟಾರೆಯಾಗಿ ಮೇಯುವವರಿಗೆ ಭರಪೂರ ಅವಕಾಶ ಸಿಗುತ್ತಿದೆ. ಜನರು ಬೀದಿಗೆ ಬೀಳುತ್ತಿದ್ದಾರೆ.

ಕೊನೆಯದಾಗಿ: ಮಾನ್ಯ ಮುಖ್ಯಮಂತ್ರಿ ಹಾಗೂ ಉಪುಮುಖ್ಯಮಂತ್ರಿಗಳು ಪ್ರಚಾರಕ್ಕಾಗಿ ನಗರ ಪ್ರದಕ್ಷಿಣೆ ಹಾಕುವುದನ್ನು ನೋಡಿದ್ದೇವೆ. ಆದರೆ ನಾನು ಮೊನ್ನೆ ಓಡಾಡಿದ 50 ಕಿ.ಮೀ ರೀತಿಯ ರಸ್ತೆಗಳಲ್ಲಿ ಈ ಸಿಎಂ, ಡಿಸಿಎಂ ಏಕೆ ಹೋಗುವುದಿಲ್ಲ? ಅಂದ್ಹಾಗೆ ಇದು ನಗರದ ಯಾವುದೋ ಮೂಲೆಯಲ್ಲಿರುವ ರಸ್ತೆಗಳಲ್ಲ. ಬೆಂಗಳೂರಿನ ಕೇಂದ್ರಭಾಗ ಹಾಗೂ ಔಟರ್‌ ರಿಂಗ್‌ ರೋಡ್‌ನ ಆಸುಪಾಸಿನ ಕಥೆಯಿದು. ಮಾನ್ಯ ಸಿಎಂ ಹಾಗೂ ಡಿಸಿಎಂ ಅವರೇ ಒಂದೊಮ್ಮೆ ಇಂತಹ ರಸ್ತೆಗಳು ನಿಮ್ಮ ಕಣ್ಣಿಗೆ ಕಾಣದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನನ್ನ ಸ್ವಂತ ಖರ್ಚಿನಲ್ಲಿ ಕಾರಿನಲ್ಲಿ ನಿಮಗೆ ನಗರ ಪ್ರದಕ್ಷಿಣೆಯನ್ನು ಹಾಕಿಸುತ್ತೇನೆ. ಆ ಪ್ರದಕ್ಷಿಣೆ ಬಳಿಕವೂ ಮಾಧ್ಯಮಗಳೆದುರು ಎದೆ ತಟ್ಟಿಕೊಂಡು ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಮಾತನಾಡಿ ನೋಡೋಣ.

ರಾಜೀವ ಹೆಗಡೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+