ಬೆಂಗಳೂರಲ್ಲಿ 5 ಸಾವಿರ ಉಚಿತ ವೈ-ಫೈ ಹಾಟ್‌ಸ್ಪಾಟ್; ಯೋಜನೆಗೆ ತಾತ್ಕಾಲಿಕ ತಡೆ
ಬೆಂಗಳೂರು, ಸೆಪ್ಟೆಂಬರ್ 17: ಉದ್ಯಾನ ನಗರಿ, ಐಟಿಸಿಟಿ ಬೆಂಗಳೂರಿನಲ್ಲಿ 5 ಸಾವಿರ ಉಚಿತ ವೈ-ಫೈ ಹಾಟ್‌ಸ್ಪಾಟ್ ನಿರ್ಮಾಣ ಮಾಡುವ ಯೋಜನೆಗೆ ತಾತ್ಕಾಲಿಕ ತಡೆ ಬಿದ್ದಿದೆ. ಈ ಕುರಿತು ಸಲ್ಲಿಕೆಯಾಗಿದ್ದ ಕಡತವನ್ನು ನಗರಾಭಿವೃದ್ಧಿ ಇಲಾಖೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಾಪಸ್ ಕಳಿಸಿದೆ. ಹಲವಾರು ವರ್ಷಗಳಿಂದ ಈ ಕುರಿತು ಸರಣಿ ಸಭೆಗಳು ನಡೆದರೂ ಸಹ ಯೋಜನೆ ಅಂದುಕೊಂಡಷ್ಟು ವೇಗದಲ್ಲಿ ಸಾಗುತ್ತಿಲ್ಲ. ಹಲವು ಕಾರಣದಿಂದ ಯೋಜನೆಗೆ ತಾತ್ಕಾಲಿಕ ತಡೆ ಬಿದ್ದಿದೆ.
ನಗರದಲ್ಲಿ ಉಚಿತ ವೈ-ಫೈ ಹಾಟ್‌ಸ್ಪಾಟ್ ನಿರ್ಮಾಣದ ಬಗ್ಗೆ 2019ರಿಂದಲೂ ಚರ್ಚೆಗಳು ನಡೆದಿವೆ, ಆದರೆ ಇನ್ನೂ ಯೋಜನೆ ಜಾರಿಗೆ ಬಂದಿಲ್ಲ. ಈಗ ಹಾಟ್‌ಸ್ಪಾಟ್ ನಿರ್ಮಾಣ ಮಾಡಲು ಕೇವಲ ಒಂದು ಕಂಪನಿ ಆಸಕ್ತಿವಹಿಸಿ ಟೆಂಡರ್ ಸಲ್ಲಿಕೆ ಮಾಡಿದೆ. ಆದ್ದರಿಂದ ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ.

ಹಲವು ಕಂಪನಿಗಳು ಟೆಂಡರ್ ಸಲ್ಲಿಕೆ ಮಾಡದ ಕಾರಣ ನಗರಾಭಿವೃದ್ಧಿ ಇಲಾಖೆ ಯೋಜನೆ ಕೈಬಿಟ್ಟಿದೆ ಮತ್ತು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್ ಈ ಕುರಿತ ಕಡತವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಾಪಸ್ ಕಳಿಸಿದ್ದಾರೆ. ಇನ್ನಷ್ಟು ಕಂಪನಿಗಳು ಸೇವೆ ನೀಡಲು ಮುಂದೆ ಬಂದರೆ ಈ ಯೋಜನೆಯ ಪ್ರಕ್ರಿಯೆಗಳು ಮತ್ತೆ ಆರಂಭಗೊಳ್ಳಲಿವೆ.
ಒಂದು ಕಂಪನಿ ಟೆಂಡರ್: ಸದ್ಯದ ಮಾಹಿತಿ ಪ್ರಕಾರ ಎಸಿಟಿ ಗ್ರೂಪ್ ಮಾತ್ರ ಬೆಂಗಳೂರು ನಗರದಲ್ಲಿ 5 ಸಾವಿರ ಉಚಿತ ವೈ-ಫೈ ಹಾಟ್‌ಸ್ಪಾಟ್ ನಿರ್ಮಾಣ ಮಾಡಲು ಆಸಕ್ತಿ ವಹಿಸಿದೆ. ನಾವು ಇದೇ ಮಾದರಿಯ ಇನ್ನೂ ಹಲವು ಅರ್ಜಿಗಳನ್ನು ಪರಿಶೀಲಿಸಬೇಕು. ಇನ್ನು ಯಾವ ಕಂಪನಿಗಳು ಅರ್ಜಿ ಸಲ್ಲಿಕೆ ಮಾಡುತ್ತೇವೆ ಎಂದು ಕಾದು ನೋಡಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಹಲವು ವರ್ಷಗಳಲ್ಲಿ ಈ ಯೋಜನೆ ಕುರಿತು ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ನಡುವೆ ಹಲವು ಸಭೆಗಳು ನಡೆದರೂ ಸಹ ಅಂತಿಮವಾಗಿ ಯೋಜನೆಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ವರ್ಗಾವಣೆ ಕಾರಣಕ್ಕೂ ಯೋಜನೆಗೆ ಹಿನ್ನಡೆಯಾಗಿದೆ ಎಂಬ ಮಾಹಿತಿಯೂ ಇದೆ.
ಕರ್ನಾಟಕದ ಸರ್ಕಾರದ 'ಡಿಜಿಟಲ್ ಕರ್ನಾಟಕ' ಯೋಜನೆಯಡಿ 6 ವರ್ಷಗಳ ಹಿಂದೆ ಬೆಂಗಳೂರು ನಗರದ ಸಾರ್ವಜನಿಕ ಸ್ಥಳದಲ್ಲಿ 5 ಸಾವಿರ ಉಚಿತ ವೈ-ಫೈ ಹಾಟ್‌ಸ್ಪಾಟ್ ನಿರ್ಮಾಣ ಮಾಡುವ ಪ್ರಸ್ತಾವನೆ ಸಿದ್ಧಗೊಳಿಸಲಾಗಿತ್ತು. 2023ರಲ್ಲಿ ಈ ಯೋಜನೆಯನ್ನು ಮರು ವಿನ್ಯಾಸಗೊಳಿಸಲಾಗಿತ್ತು.
ಇಂಟರ್‌ನೆಟ್ ಸಂಪರ್ಕ ನೀಡುವ ಪ್ರಮುಖ ಕಂಪನಿಯಾದ ಎಸಿಟಿ ಗ್ರೂಪ್ ತನ್ನ ಟೆಂಡರ್‌ನಲ್ಲಿ 3 ಸಾವಿರ ಕಂಬಗಳನ್ನು ನೆಟ್ಟು ಹಾಟ್‌ಸ್ಪಾಟ್ ನಿರ್ಮಾಣ ಮಾಡುವ ಪ್ರಸ್ತಾವನೆ ಮಾಡಿದೆ. ಮೊದಲ ಒಂದು ಗಂಟೆ ಉಚಿತವಾಗಿ ವೈ-ಫೈ ಸೌಲಭ್ಯವನ್ನು ಪಡೆಯಬಹುದು. 3 ಸಾವಿರ ಕಂಬದಲ್ಲಿಯೂ ಸಹ ಕಂಪನಿ ಲೋಗೋವನ್ನು ಹಾಕಲಾಗುತ್ತದೆ.
ಈಗಾಗಲೇ ಕಂಪನಿ ಹೈದರಾಬಾದ್ ನಗರದಲ್ಲಿ ಇದೇ ಮಾದರಿಯಲ್ಲಿ 4 ಸಾವಿರ ಹಾಟ್‌ಸ್ಪಾಟ್ ನಿರ್ಮಾಣ ಮಾಡಿದೆ. ಚೆನ್ನೈನಲ್ಲಿ 3 ಸಾವಿರ ಹಾಟ್‌ಸ್ಪಾಟ್ ನಿರ್ಮಾಣದ ಯೋಜನೆ ರೂಪಿಸಿದೆ. ಈ ಮಾದರಿಯ ಪ್ರಾಯೋಗಿಕ ಯೋಜನೆಯನ್ನು ಬೆಂಗಳೂರು ನಗರದ ಮಲ್ಲೇಶ್ವರದಲ್ಲಿ 2019ರಲ್ಲಿ ಮಾಡಲಾಗಿತ್ತು.
ಆದರೆ ಯೋಜನೆಗೆ ಸರ್ಕಾರದಿಂದ ಯಾವುದೇ ಅನುದಾಬ ಬರುವುದಿಲ್ಲ. ಎಸಿಟಿ ಗ್ರೂಪ್ ಯೋಜನೆಯ ಮೂಲ ಸೌಕರ್ಯ, ಸಂಪರ್ಕಕ್ಕೆ ಹೇಗೆ ಅನುದಾನ ಹೊಂದಿಸಿಕೊಳ್ಳಲಿದೆ? ಎಂದು ಮಾಹಿತಿ ನೀಡಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಕಂಬಗಳನ್ನು ಹಾಕಿ ಹಾಟ್‌ಸ್ಪಾಟ್ ನಿರ್ಮಾಣ ಮಾಡಿ ಸೇವೆ ನೀಡುವುದರಿಂದ ಕಂಪನಿಗೆ ಹೆಚ್ಚಿನ ವೆಚ್ಚ ಆಗುವುದಿಲ್ಲ ಎಂದು ಅಂದಾಜಿಸಲಾಗಿದೆ.












Click it and Unblock the Notifications