ಬೆಂಗಳೂರಿಗೆ ಇನ್ನೂ 44 ಟೆಂಡರ್ ಶ್ಯೂರ್ ರಸ್ತೆಗಳು
ಬೆಂಗಳೂರು, ಜುಲೈ 12: ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಟೆಂಡರ್ ಶ್ಯೂರ್ ರಸ್ತೆಗಳ ಪಟ್ಟಿಗೆ ಇನ್ನೂ 44 ಹೊಸ ರಸ್ತೆಗಳನ್ನು ಸೇರ್ಪಡೆಗೊಳಿಸಿದೆ. ಸಂಪೂರ್ಣ ಪಟ್ಟಿ ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸೇಂಟ್ ಮಾರ್ಕ್ಸ್ ಮತ್ತು ವಿಠಲ ಮಲ್ಯ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ 'ಟೆಂಡರ್ ಶ್ಯೂರ್' ಟ್ಯಾಗ್ ಹಾಕಿದ ಮೇಲೆ ಮುಂದಿನ ಹಂತದಲ್ಲಿ ನಗರದ ಇಂದಿರಾನಗರ 100 ಅಡಿ ರಸ್ತೆ, ಬ್ರಿಗೇಡ್ ರಸ್ತೆ, ರಾಜಭವನ ರಸ್ತೆ, ಕೆಂಪೇಗೌಡ ರಸ್ತೆ, ಜಯನಗರ 11ನೇ ಮುಖ್ಯರಸ್ತೆ, ಮೋದಿ ಆಸ್ಪತ್ರೆ ರಸ್ತೆ, ಸಿದ್ದಯ್ಯ ಪುರಾಣಿಕ್ ರಸ್ತೆ, ನೃಪತುಂಗ ರಸ್ತೆ, ಮೈಸೂರು ಬ್ಯಾಂಕ್ ವೃತ್ತದಿಂದ ಉಪ್ಪಾರಪೇಟೆ ಪೊಲೀಸ್ ಠಾಣೆ ರಸ್ತೆ ಹೀಗೆ 44ಕ್ಕೂ ಅಧಿಕ ರಸ್ತೆಗಳಿಗೆ ಟೆಂಡರ್ ಶ್ಯೂರ್ ಸೌಲಭ್ಯ ಸಿಗಲಿದೆ. [ಟೆಂಡರ್ ಶ್ಯೂರ್ ರಸ್ತೆಯಲ್ಲಿ ಪೇ ಅಂಡ್ ಪಾರ್ಕ್]
ಪಾದಚಾರಿಗಳಿಗೆ ಸಮರ್ಪಕವಾದ ಫುಟ್‌ಪಾತ್ ಸೌಲಭ್ಯ, ಸೈಕಲ್‌ಗೆ ಪ್ರತ್ಯೇಕ ಟ್ರಾಕ್, ದೊಡ್ಡ ವಾಹನ, ಮಧ್ಯಮ ಗಾತ್ರದ ವಾಹನ ಮತ್ತು ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಲೇನ್‌ಗಳು, ಮಾರ್ಗ ಮಧ್ಯದಲ್ಲಿ ವಾಹನಗಳು ರಸ್ತೆಗೆ ನುಗ್ಗದಂತೆ ತಡೆಗೋಡೆ, ಪೇ ಅಂಡ್ ಪಾರ್ಕ್ ಇವು ಟೆಂಡರ್ ಶ್ಯೂರ್ ರಸ್ತೆಗಳ ವಿಶೇಷತೆಗಳಾಗಿವೆ.[ಟೆಂಡರ್ ಶ್ಯೂರ್ ರಸ್ತೆಯ ವಿಶೇಷತೆಗಳೇನು?]

ಬಿಬಿಎಂಪಿ, ಬಿಎಂಟಿಸಿ, ಬೆಸ್ಕಾಂ, ಜಲಮಂಡಳಿ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಸೇವಾ ಸಂಸ್ಥೆಗಳನ್ನು ಒಳಗೊಂಡ ಏಕಗವಾಕ್ಷಿ ವ್ಯವಸ್ಥೆ ಇದರಲ್ಲಿರುತ್ತದೆ. ನೀರು, ಒಳಚರಂಡಿ, ಬೆಸ್ಕಾಂ ಸಂಪರ್ಕ ಜಾಲ, ಒಎಫ್‌ಸಿ, ಬೀದಿದೀಪ, ಸಿಗ್ನಲ್ ದೀಪ, ಸಿಸಿಟಿವಿ ಕೇಬಲ್, ಗ್ಯಾಸ್ ಸಂಪರ್ಕ ಜಾಲ ಎಲ್ಲದಕ್ಕೂ ರಸ್ತೆ ಬದಿಯಲ್ಲಿ ಯುಟಿಲಿಟಿ ಡಕ್ಟ್ ವ್ಯವಸ್ಥೆ ರೂಪಿಸಲಾಗಿದೆ.
ನಗರೋತ್ತರ ಯೋಜನೆಯಡಿಯಲ್ಲಿ ಸಿಗ್ನಲ್ ಮುಕ್ತ ಕಾರಿಡರ್ ರಸ್ತೆಗಳಾಗಿ ನಾಯಂಡಹಳ್ಳಿ ಜಂಕ್ಷನ್ ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಹಾಗೂ ಓಲ್ಡ್ ಮದ್ರಾಸ್ ರಸ್ತೆ-ವೈಟ್ ಫೀಲ್ಡ್ ರಸ್ತೆ ಮಾರ್ಗಗಳು ಪರಿವರ್ತನೆಗೊಳ್ಳಲಿವೆ. ಸುಮಾರು 300 ಕೋಟಿ ರು ಇದಕ್ಕಾಗಿ ಸಿದ್ದರಾಮಯ್ಯ ಅವರು ನೀಡಿದ್ದಾರೆ. ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಮೂಲ ಸೌಕರ್ಯ ಹಾಗೂ ರಸ್ತೆ ಮೇಲ್ದರ್ಜೆ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.












Click it and Unblock the Notifications