Infosys: ಸರ್ಕಾರಿ ಭೂಮಿ: 250 ಕೋಟಿಗೆ ಮಾರಾಟ ಮಾಡಿದ ಇನ್ಫೋಸಿಸ್ , ಏನಿದು ಚರ್ಚೆ
ಬೆಂಗಳೂರು: ಇನ್ಫೋಸಿಸ್ ಸಂಸ್ಥೆಯು ಇದೀಗ ಬೇರೊಂದು ಕಾರಣಕ್ಕೆ ಚರ್ಚೆಯಲ್ಲಿದೆ. ಬೆಂಗಳೂರಿನ ಸಮೀಪದ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಹೋಬಳಿಯಲ್ಲಿ 53.5 ಎಕರೆ ಭೂಮಿಯನ್ನು ಇನ್ಫೋಸಿಸ್ ಐಟಿ ಕಂಪನಿಯು ರಿಯಲ್ ಎಸ್ಟೇಟ್ ಸಂಸ್ಥೆಯಾಗಿರುವ ಪುರವಂಕರಗೆ 250 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ ಎನ್ನಲಾದ ವ್ಯವಹಾರವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ (ಉದ್ಯಮ ಪ್ರಾರಂಭಕ್ಕೆಂದು ಸರ್ಕಾರದಿಂದ ಪಡೆದಿದ್ದು ಎನ್ನಲಾದ ಭೂಮಿ) ಭೂಮಿಯನ್ನು ಉದ್ಯಮ ಪ್ರಾರಂಭಕ್ಕೆಂದು ಪಡೆದು ಮಾರಾಟ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ವ್ಯವಹಾರದ ಬಗ್ಗೆ ಹಾಗೂ ಕಾನೂನು ಬದ್ಧತೆಯನ್ನು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಪ್ರಶ್ನಿಸಿದ್ದಾರೆ. ಈ ಭೂಮಿಯನ್ನು ಮೂಲತಃ ನಿರ್ದಿಷ್ಟ ಉದ್ದೇಶಕ್ಕಾಗಿ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗಿರಬಹುದು ಎಂದಿದ್ದು, ನಿರ್ದಿಷ್ಟ ಉದ್ದೇಶಕ್ಕಾಗಿ ರಿಯಾಯಿತಿ ದರದಲ್ಲಿ ನೀಡಿದ ಭೂಮಿಯನ್ನು ಆ ಉದ್ದೇಶಕ್ಕೆ ಒಂದೊಮ್ಮೆ ಬಳಸದಿದ್ದರೆ, ಅದನ್ನು ನಂತರ ವಾಣಿಜ್ಯ ದರಕ್ಕೆ ಮಾರಾಟ ಮಾಡುವ ಹಕ್ಕು ಕಂಪನಿಗೆ ಇರುವುದಿಲ್ಲ ಎಂದು ಹೇಳಿದ್ದಾರೆ. ಮುಂದುವರಿದು ಈ ಸಂದರ್ಭದಲ್ಲಿ ಭೂಮಿಯನ್ನೂ, ಅದರಿಂದ ಬಂದ ಆದಾಯವನ್ನೂ ಕರ್ನಾಟಕ ಸರಕಾರಕ್ಕೆ ಹಿಂತಿರುಗಿಸಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ. Times of India ವರದಿಯನ್ನು ಉಲ್ಲೇಖಿಸಿ ಅವರು ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ಅಭಿವೃದ್ಧಿ ಸೂಚ್ಯಂಕ ಎಂಬ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಕಟವಾದ ಪೋಸ್ಟ್‌ಗೆ ಅವರು ಕಾರ್ತಿ ಚಿದಂಬರಂ ಅವರು ಪ್ರತಿಕ್ರಿಯೆ ನೀಡಿದ್ದು, ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮತ್ತೊಂದು ಕಡೆ ಉದ್ಯಮಿ ಮೋಹನ್‌ದಾಸ್ ಪೈ ಅವರು ಈ ವಿಚಾರದಲ್ಲಿ ಇನ್ಫೋಸಿಸ್ ಸಂಸ್ಥೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಏನಿದು ಇನ್ಫೋಸಿಸ್ ಭೂಮಿ ಮಾರಾಟ ಸುದ್ದಿ
ಬೆಂಗಳೂರು ಮತ್ತು ತಮಿಳುನಾಡು ಗಡಿಗೆ ಸಮೀಪ ಪ್ರದೇಶಗಳಲ್ಲಿ ಒಂದಾಗಿರುವ ಅತ್ತಿಬೆಲೆ ಹೋಬಳಿ ಯಲ್ಲಿರುವ ಪ್ರದೇಶವನ್ನು ಪುರವಂಕರ ಸಂಸ್ಥೆಯ ವಿಸ್ತರಣಾ ಯೋಜನೆಯ ಭಾಗವಾಗಿದೆ. ಸುಮಾರು 250 ಕೋಟಿ ರೂ. ಮೌಲ್ಯದ ಈ ಒಪ್ಪಂದದಿಂದ ಬೆಂಗಳೂರು ಪ್ರದೇಶದಲ್ಲಿನ ಕಂಪನಿಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ.
ಸ್ಟಾಕ್ ಎಕ್ಸ್‌ಚೇಂಜ್ ಗೆ ಸಲ್ಲಿಸಿದ ಮಾಹಿತಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಶಿಷ್ ಪುರವಂಕರ ಆಯಕಟ್ಟಿನ ಸ್ಥಳಗಳಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಿರುವ ಗುಣಮಟ್ಟದ ಭೂಮಿಯನ್ನು ಹಂತ ಹಂತವಾಗಿ ಸೇರಿಸಿಕೊಳ್ಳುವುದು ಸಂಸ್ಥೆಯ ದೀರ್ಘಕಾಲೀನ ಯೋಜನೆ ಆಗಿದೆ ಎಂದು ವಿವರಿಸಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿ, ಉತ್ತಮ ಸಂಪರ್ಕ ಮತ್ತು ಬಳಕೆದಾರರಿಂದ ನಿರಂತರ ಬೇಡಿಕೆ ಇರುವ ಸೂಕ್ಷ್ಮ ಮಾರುಕಟ್ಟೆಗಳಲ್ಲಿ ವಿಸ್ತರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ಅತ್ತಿಬೆಲೆ ಹೋಬಳಿಯ ಈ ಪ್ರದೇಶದಲ್ಲಿ ಅಂದಾಜು 6.4 ಮಿಲಿಯನ್ ಚದರ ಅಡಿ ಮಾರಾಟಯೋಗ್ಯ ಪ್ರದೇಶ ಅಭಿವೃದ್ಧಿಪಡಿಸಹುದಾಗಿದೆ ಎಂದು ಅಂದಾಜಿಸಲಾಗಿದೆ. ಇದರ ಒಟ್ಟು ಅಭಿವೃದ್ಧಿ ಮೌಲ್ಯ 4,800 ಕೋಟಿ ರೂಪಾಯಿಗೂ ಹೆಚ್ಚಾಗಿದೆ ಎಂದು ವರದಿಯು ಉಲ್ಲೇಖಿಸಿದೆ.
This is not govt land so please stop this fake narrative. It was purchased from the market for a campus and now there is no need. https://t.co/VIhaEq3iJK
— Mohandas Pai (@TVMohandasPai) December 28, 2025
ಮೋಹನ್‌ದಾಸ್ ಪೈ ಟ್ವೀಟ್
ಇನ್ನು ಈ ವಿಚಾರವಾಗಿ ಟ್ವೀಟ್ ಮಾಡಿರುವ ಉದ್ಯಮಿ ಮೋಹನ್ ದಾಸ್ ಪೈ ಅವರು, ಇದು ಸರ್ಕಾರಿ ಭೂಮಿ ಅಲ್ಲ, ದಯವಿಟ್ಟು ಈ ಸುಳ್ಳು ಸುದ್ದಿಯನ್ನು ನಿಲ್ಲಿಸಿ ಇದನ್ನು ಕ್ಯಾಂಪಸ್‌ಗಾಗಿ ಮಾರುಕಟ್ಟೆಯಿಂದ ಖರೀದಿಸಲಾಗಿದೆ ಮತ್ತು ಈಗ ಅದರ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಕಾರ್ತಿ ಚಿದಂಬರಂ ಅವರ ಟ್ವೀಟ್‌ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications