2025 New Year: ಬೆಂಗಳೂರು ಹೊಸ ವರ್ಷ ಸಂಭ್ರಮಾಚರಣೆ: ಈ ವಿಷಯದಲ್ಲಿ ಪೊಲೀಸರಿಂದ ಅಲರ್ಟ್!
2025 ಹೊಸ ವರ್ಷ ಪ್ರಾರಂಭಕ್ಕೆ ಇನ್ನು ಒಂದು ತಿಂಗಳು ಬಾಕಿ ಉಳಿದಿದೆ. ಇನ್ನೊಂದು ತಿಂಗಳು ಬಾಕಿ ಉಳಿದಿರುವಾಗಲೇ ಬೆಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆಗೆ ಬೇಕಾದ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಬೆಂಗಳೂರಿನ ಬಾರ್ & ರೆಸ್ಟೋರೆಂಟ್ ಮೇಲೆ ಕಣ್ಣಿಟ್ಟಿದ್ದು, ಸುರಕ್ಷತೆಯ ದೃಷ್ಟಿಯಿಂದ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಯಾವ ರೀತಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಎಂದರೆ ಬೆಂಗಳೂರಲ್ಲಿ ರಂಗುಗಂಗಿನ ವಾತಾವರಣ ಬೆಂಗಳೂರಿನ ರಸ್ತೆಗಳು ಸಂಜೆ ಆಗುತ್ತಿದ್ದಂತೆಯೇ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತವೆ. ರಿಚ್ಮಂಡ್ ಸರ್ಕಲ್ ಹಾಗೂ ಎಂ.ಜಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಯುವಕ ಹಾಗೂ ಯುವತಿಯರು ಕಿಕ್ಕಿರಿದು ಸೇರಿರುತ್ತಾರೆ. ಬೆಂಗಳೂರಿನಲ್ಲಿ ಹೊಸ ವರ್ಷದ ಗುಂಗು ಡಿಸೆಂಬರ್ ಅಂತ್ಯಕ್ಕೆ ಅಲ್ಲ, ಡಿಸೆಂಬರ್ ತಿಂಗಳ ಪ್ರಾರಂಭದಿಂದಲೇ ಜೋರಾಗಿ ಇರುತ್ತದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಬಟ್ಟೆ, ಶಾಪಿಂಗ್ ಜೋರಾಗಿ ನಡೆಯುತ್ತದೆ. ಆದರೆ, ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹಲವು ಅಪರಾಧ ಕೃತ್ಯಗಳು ಸಹ ನಡೆಯುತ್ತವೆ. ಇದೇ ಕಾರಣಕ್ಕೆ ಬೆಂಗಳೂರು ಪೊಲೀಸರು ಸಹ ಅಲರ್ಟ್ ಆಗಿದ್ದಾರೆ.

ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ಬಾರ್ & ರೆಸ್ಟೋರೆಂಟ್ ಹಾಗೂ ಪಬ್‌ಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿದ್ದಾರೆ. 2025ನೇ ಸಾಲಿನ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದೆ ಇರುವುದಕ್ಕೆ ಮುಂದಾಗಿದ್ದಾರೆ. ಅಲ್ಲದೇ ಕಾನೂನು-ಸುವ್ಯವವಸ್ಥೆಗೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಲಾಗುತ್ತಿದೆ.
ಆರೋಪಿಗಳಿಗೆ ಸೂಚನೆ
ಹೊಸ ವರ್ಷ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಅಲ್ಲದೇ ಈಚೆಗೆ ಬೆಂಗಳೂರು ನಗರದ ಎಲ್ಲಾ ವಿಭಾಗಗಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಎನ್.ಡಿ.ಪಿ.ಎಸ್. ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಪರಿಶೀಲನೆ ನಡೆಸಲಾಗಿದೆ.

ಬೆಂಗಳೂರಿನ ಪಬ್ ವೈನ್‌ಸ್ಟೋರ್, ಬಾರ್ & ರೆಸ್ಟೋರೆಂಟ್‌ಗಳು, ಸ್ಥಳೀಯ ಡಾಬ, ಹೋಟೆಲ್ ಮತ್ತು ಲಾಡ್ಜ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಸ್ಥಳಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು, ರೌಡಿಶೀಟರ್‌ಗಳು ಕಂಡು ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಲ್ಲದೇ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಯಾಚರಣೆ ವೇಳೆ ಬಾರ್ & ರೆಸ್ಟೋರೆಂಟ್, ಲಾಡ್ಜ್‌ಗಳಲ್ಲಿ ಕಾರ್ಯಾಚರಣೆ ನಡೆದಿದೆ. ನಿಯಮ ಉಲ್ಲಂಘನೆ ಮಾಡಿರುವ ಬಾರ್ & ರೆಸ್ಟೋರೆಂಟ್‌ಗಳ ಮೇಲೆ ಕ್ರಮ ತಗೆದುಕೊಳ್ಳಲಾಗಿದೆ. ಅಲ್ಲದೇ ಈ ಕಾರ್ಯಾಚರಣೆಯ ಸಂದರ್ಭದಲ್ಲಿ ನಿಷೇಧಿತ ಮಾದಕ ವಸ್ತುಗಳ ಸರಬರಾಜು ಮತ್ತು ಬಳಕೆಯನ್ನು ತಡೆಗಟ್ಟುವ ಸಲುವಾಗಿ ಈ ಹಿಂದೆ ಅಪರಾಧ ಪ್ರಕರಣದಲ್ಲಿ (ಎನ್.ಡಿ.ಪಿ.ಎಸ್) ಭಾಗಿಯಾಗಿದ್ದ 380 ಜನ ಆರೋಪಿಗಳನ್ನು ಬೆಂಗಳೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಆಂದಾಜು 40 ಸಾವಿರ ರೂಪಾಯಿ ಬೆಲೆ ಬಾಳುವ ಸುಮಾರು 1 ಕೆ.ಜಿ. 100 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, 3 ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾದೆ. ಈ ಕಾರ್ಯಾಚರಣೆ ವೇಳೆಯಲ್ಲಿ ವೈಶ್ಯಾವಾಟಿಕೆಯಲ್ಲಿ ಸಿಲುಕಿದ್ದ 6 ಜನ ವಿದೇಶಿ ಮಹಿಳೆಯರನ್ನು ಸಹ ರಕ್ಷಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications