ಜಗತ್ತಿಗೆ ಪ್ರೀತಿ ಹಂಚಿದ ಬೆಂಗಳೂರು ಗುಲಾಬಿ: ಉದ್ಯಾನ ನಗರಿಯಿಂದ ಕೋಟಿ ಕೋಟಿ ಹೂವು ರಫ್ತು
ಬೆಂಗಳೂರು, ಫೆಬ್ರವರಿ 15: ಪ್ರೇಮಿಗಳ ದಿನದಂದು ಕೆಂಪು ಗುಲಾಬಿ ಹೂವಿಗೆ ಎಲ್ಲಿಲ್ಲದ ಡಿಮ್ಯಾಂಡ್, ಅಂದು ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿಯೂ ಗುಲಾಬಿ ಮಾರಾಟವಾದರೆ ಬೆಲೆ ಮಾತ್ರ ಎಂದಿಗಿಂತ ದುಬಾರಿಯೇ. ನಮ್ಮ ರಾಜ್ಯದಲ್ಲಿ ಬೆಳೆಯುವ ಈ ಗುಲಾಬಿಗೆ ನಮ್ಮ ರಾಜ್ಯ, ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಭಾರೀ ಡಿಮ್ಯಾಂಡ್ ಇದೆ. ಹೀಗಾಗಿ ಈ ವರ್ಷವೂ ಕೋಟ್ಯಾಂತರ ಗುಲಾಬಿಗಳು ವಿದೇಶಕ್ಕೆ ರವಾನೆಯಾಗಿದೆ.
ಈ ವರ್ಷ ಪ್ರೇಮಿಗಳ ದಿನ ಅಂಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 12,22,860 ಕೆ.ಜಿ ತೂಕದ ಸುಮಾರು 2.9 ಕೋಟಿ ಕರ್ನಾಟಕದ ಗುಲಾಬಿ ಹೂಗಳು ಹೊರ ರಾಜ್ಯ ಮತ್ತು ವಿದೇಶಕ್ಕೆ ರಫ್ತಾಗಿವೆ. ಕಳೆದ ಮೂರ್ನಾಲ್ಕು ವರ್ಷದಿಂದ ಕೊರೊನಾ ಕಾರಣದಿಂದ ತಗ್ಗಿದ್ದ ಕರ್ನಾಟಕದ ಗುಲಾಬಿ ರಫ್ತು ಮತ್ತೆ ಚೇತರಿಕೆ ಕಂಡಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ನೀಡಿರುವ ವರದಿ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ108 ರಷ್ಟು ರಫ್ತು ಹೆಚ್ಚಾಗಿದೆ. ಇನ್ನು ಹೊರ ರಾಜ್ಯಗಳಿಗೆ 2 ಕೋಟಿ ಗುಲಾಬಿ ಹೂಗಳನ್ನು ರಫ್ತು ಮಾಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 148 ರಷ್ಟು ಹೆಚ್ಚಳವಾಗಿದೆ.
ಕರ್ನಾಟಕದ ಗುಲಾಬಿ ಹೂಗಳು ಬೆಂಗಳೂರಿನಿಂದ ಮಲೇಷ್ಯಾ, ಸಿಂಗಾಪುರ್, ಕುವೈತ್, ಮನಿಲಾ ಸೇರಿದಂತೆ ಶಾರ್ಜಾ ದೇಶಗಳಿಗೆ ರಪ್ತಾಗಿದೆ. ಇನ್ನು ದೇಶದಲ್ಲೇ ಕೋಲ್ಕತ್ತಾ, ಮುಂಬೈ, ಗುವಾಹಟಿ, ಜೈಪುರ ಮತ್ತು ದೆಹಲಿ ರಾಜ್ಯಗಳಿಗೆ ರಫ್ತಾಗಿದೆ.
ಈ ಬಗ್ಗೆ ಅಂತಾರಾಷ್ಟ್ರೀಯ ಹೂವಿನ ಹರಾಜು ಬೆಂಗಳೂರು ಇದರ ವ್ಯವಸ್ಥಾಪಕ, ನಿರ್ದೇಶಕ ಎಂ ವಿಶ್ವನಾಥ್ ಮಾತನಾಡಿದ್ದು, " ಬೆಂಗಳೂರಿನ ಸುತ್ತಮುತ್ತ ಬೆಳೆಯುವ ಗುಲಾಬಿಗಳು ಉತ್ತಮ ಗುಣಮಟ್ಟದಾಗಿರುತ್ತದೆ. ಅವುಗಳು ಸುಮಾರು 8 ರಿಂದ ಹತ್ತು ದಿನಗಳವರೆಗೆ ತಾಜಾವಾಗಿರುತ್ತದೆ.

ಹೀಗಾಗಿ ನಾವು ಬೆಂಗಳೂರಿನಿಂದ ಹೊರ ದೇಶ, ಹೊರ ರಾಜ್ಯಗಳಿಗೆ ರಫ್ತು ಮಾಡುತ್ತೇವೆ. ಯುಎಇ ಮತ್ತು ಯುರೋಪ್ ದೇಶಗಳಿಂದ ಭಾರೀ ಬೇಡಿಕೆ ಇದ್ದು, ಹೆಚ್ಚಿನ ವ್ಯವಹಾರ ನಿರೀಕ್ಷಿಸುತ್ತಿದ್ದೇವೆ. ಇದರಿಂದ ಬೆಳೆಗಾರರಿಗೆ, ವ್ಯಾಪಾರಿಗಳಿಗೆ ನೆರವಾಗುತ್ತದೆ" ಎಂದಿದ್ದಾರೆ.
ಇನ್ನು ಭಾರತದಲ್ಲಿ ಕರ್ನಾಟಕ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ಒರಿಸ್ಸಾ, ಅಸ್ಸಾಂ ಮತ್ತು ತೆಲಂಗಾಣದಲ್ಲಿ ಹೆಚ್ಚು ಗುಲಾಬಿ ಬೆಳೆಯಲಾಗುತ್ತದೆ. ಅದರಲ್ಲಿ ಕರ್ನಾಟಕದಲ್ಲಿ ಬೆಳೆಯುವ ಗುಲಾಬಿಗೆ ವಿಶೇಷ ಬೇಡಿಕೆ ಇದೆ.
ಬೆಂಗಳೂರಿನ ಸುತ್ತಮುತ್ತ ಭಾಗದಲ್ಲಿ ಬೆಳೆಯುವ ಗುಲಾಬಿ ಹೂವುಗಳಿಗೆ ವಿಶೇಷ ಬೇಡಿಕೆ ಇದ್ದು, ಇತ್ತೀಚಿನ ದಿನಗಳಲ್ಲಿ ಗುಲಾಬಿ ಬೆಳೆಗಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನೀರಿನ ಸಮಸ್ಯೆ, ಕೀಟ ಭಾದೆಯಿಂದ ಗುಲಾಬಿ ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ.












Click it and Unblock the Notifications