ಕರ್ನಾಟಕದಲ್ಲಿ ವಾರ್ಷಿಕ 2000 ಇವಿ ಬೈಕ್ ತಯಾರಿಕೆ ಗುರಿ: ಎಂಬಿ ಪಾಟೀಲ್
ಬೆಂಗಳೂರು: ಕರ್ನಾಟಕ ಮೂಲದ ರಿವರ್ ಮೊಬಿಲಿಟಿ ಕಂಪನಿ ತಯಾರಿಸಿರುವ ಯಮಾಹಾ ಇಸಿ-06 ವಿದ್ಯುತ್ ಚಾಲಿತ ಬೈಕ್ ಅನ್ನು ತಯಾರಿಸಿದೆ. ದ್ವಿಚಕ್ರ ವಾಹನ ತಯಾರಿಕೆ ಸ್ಥಳೀಯವಾಗಿಯೇ ತಯಾರಾಗುತ್ತಿರುವುದು, ರಾಜ್ಯ ಕೈಗಾರಿಕಾ ಬೆಳವಣಿಗೆಯಲ್ಲಿನ ಒಂದು ಉಜ್ಜ್ವಲ ಅಧ್ಯಾಯವಾಗಿದೆ. ಇದಕ್ಕೆ ನಮ್ಮ ಸರ್ಕಾರ ಸಹ ಅಗತ್ಯ ಸಹಕಾರ ನೀಡುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದರು.
ಸೋಮವಾರ ಹೊಸಕೋಟೆಯಲ್ಲಿ ಸಚಿವರು ರಿವರ್ ಮೊಬಿಲಿಟಿ ಕಂಪನಿಯ ಬೈಕ್ ತಯಾರಿಕಾ ಘಟಕದಲ್ಲಿರುವ ವ್ಯವಸ್ಥೆಗಳನ್ನು ಮತ್ತಿತರ ಸೌಲಭ್ಯಗಳನ್ನು ವೀಕ್ಷಿಸಿದರು. ಬಳಿಕ ಕೈಗಾರಿಕಾ ಸಹಭಾಗಿತ್ವದ ಅಡಿ 'ಯಮಾಹಾ ಇಸಿ-06 ವಿದ್ಯುತ್ ಚಾಲಿತ ದ್ವಿಚಕ್ರ ವಾಹನವನ್ನು' ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಯಮಾಹಾ ಕಂಪನಿಗೆ ಹಸ್ತಾಂತರಿಸಿದರು. ಬಳಿಕ ಸ್ಥಳೀಯ ಉತ್ಪಾದನೆ, ಕೈಗಾರಿಕೆ ಬೆಳವಣಿಗೆಯನ್ನು ಕೊಂಡಾಡಿದರು.

ನಗರ ಸಂಚಾರವನ್ನು ಪರಿಸರ ಸ್ನೇಹಿ, ಸುಗಮ ಮತ್ತು ಸುಸ್ಥಿರಗೊಳಿಸುವಂತಹ ಇಂತಹ ದ್ವಿಚಕ್ರ ವಾಹನ ತಯಾರಿಕೆ ಸ್ಥಳೀಯವಾಗಿಯೇ ಆಗತೊಡಗಿವೆ. ಇದು ಕೈಗಾರಿಕಾ ಬೆಳವಣಿಗೆಯ ಪೂರಕ ವಾತಾವರಣಕ್ಕೆ ಸಾಕ್ಷಿಯಾಗಿದೆ. ಹೊಸ ಅಧ್ಯಾಯ ಆರಂಭವಾಗಿದೆ. ರಾಜ್ಯವು ಭವಿಷ್ಯದ ಸಂಚಾರ ವ್ಯವಸ್ಥೆಯ ನಿರ್ಮಾಣದ ಸರಿಯಾದ ಪಥದಲ್ಲಿ ಸಾಗುತ್ತಿರುವುದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ' ಎಂದು ಅವರು ಬಣ್ಣಿಸಿದ್ದಾರೆ.
2000 ಇ.ವಿ. ಬೈಕ್ ತಯಾರಿಕೆ
ಈ ಘಟಕದಲ್ಲಿ ವರ್ಷಕ್ಕೆ ಇಂತಹ ಉತ್ಕೃಷ್ಟ ಗುಣಮಟ್ಟದ 2 ಸಾವಿರ ಇ.ವಿ. ಬೈಕ್ ತಯಾರಿಸಲಾಗುವುದು. ಇವುಗಳಿಗೆ ಇಲ್ಲೇ ತಯಾರಿಸುವ ಬ್ಯಾಟರಿ ಅಳವಡಿಸಲಾಗುವುದು. ಇದು ಒಂದು ಲಕ್ಷ ಕಿಲೋ ಮೀಟರ್ ವರೆಗೂ ವಾಹನ ಓಡಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕೆ 10 ವರ್ಷಗಳ ವಾರಂಟಿ ಇರಲಿದೆ ಎಂದು ಅವರು ತಿಳಿಸಿದರು.
ಸ್ಥಳೀಯ ಉತ್ಪಾದನೆಯಿಂದ ವ್ಯಾಪಕ ಆರ್ಥಿಕ ಮೌಲ್ಯವೂ ಸೃಷ್ಟಿಯಾಗಲಿದೆ. ಇದು ಕೌಶಲ್ಯಪೂರ್ಣ ಉದ್ಯೋಗಗಳ ಸೃಷ್ಟಿ, ಸ್ಥಳೀಯ ಪೂರೈಕೆ ಸರಪಳಿ ಬಲವರ್ಧನೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾಲಿಗೆ ಸದವಕಾಶ ಇವೆಲ್ಲವನ್ನೂ ಸಾಧ್ಯವಾಗಿಸಲಿದೆ ಎಂದರು.
ವಾಹನ ಮಾರುಕಟ್ಟೆ ಈಗ ವಿದ್ಯುತ್ ಚಾಲಿತ ವಾಹನಗಳತ್ತ ಹೋಗುತ್ತಿದೆ. ರಾಜ್ಯದಲ್ಲಿ ಕೂಡ ಇದನ್ನು ಗಮನಿಸಿ, ಈಗಾಗಲೇ ಸಾವಿರಾರು ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಇವುಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸಲಾಗುವುದು. ಇದು ಇ.ವಿ. ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೊಂದಿರುವ ಬದ್ಧತೆಯನ್ನು ಸೂಚಿಸುತ್ತದೆ ಎಂದು ತಿಳಿಸಿದರು.












Click it and Unblock the Notifications