ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ನೂತನ ಮೇಯರ್ ಮುಂದಿರುವ 10 ಸವಾಲುಗಳು

By ಭಾಸ್ಕರ ಭಟ್
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 11 : ಸುಮಾರು ಹದಿನೈದು ದಿನಗಳ ರಾಜಕೀಯ ಹಗ್ಗಜಗ್ಗಾಟ ಅಂತ್ಯಗೊಂಡಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪಟ್ಟ ಹಿಡಿಯಲು ಜೆಡಿಎಸ್, ಕಾಂಗ್ರೆಸ್ ಮಾಡಿದ ಪ್ರಯತ್ನಗಳು ಫಲಕೊಟ್ಟಿವೆ. ಬಿಬಿಎಂಪಿ ಚುನಾವಣೆಯಲ್ಲಿ 100 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿಗೆ ಮೇಯರ್ ಪಟ್ಟ ಕೈ ತಪ್ಪಿದೆ. ಕಾಂಗ್ರೆಸ್‌ನ ಮಂಜುನಾಥ ರೆಡ್ಡಿ ಅವರು ಬೆಂಗಳೂರಿನ ಪ್ರಥಮ ಪ್ರಜೆಯಾಗಿ ಆಯ್ಕೆಯಾಗಿದ್ದಾರೆ.

ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಡಿವಾಳ ವಾರ್ಡ್ ಕಾಂಗ್ರೆಸ್ ಸದಸ್ಯ ಬಿ.ಎನ್.ಮಂಜುನಾಥ ರೆಡ್ಡಿ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 49ನೇ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ವೃಷಭಾವತಿ ವಾರ್ಡ್‌ನ ಎಸ್‌.ಪಿ.ಹೇಮಲತಾ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. [ಮಂಜುನಾಥ ರೆಡ್ಡಿ ನೂತನ ಮೇಯರ್]

ಪಾಲಿಕೆಯಲ್ಲಿ ಐದು ವರ್ಷ ಆಡಳಿತ ನಡೆಸಿದ ಬಿಜೆಪಿ ಅಕ್ರಮಗಳನ್ನು ಮಾಡಿದೆ ಎಂದು ಆರೋಪಿಸುತ್ತಲೇ ಚುನಾವಣಾ ಪ್ರಚಾರ ನಡೆಸಿದ ಕಾಂಗ್ರೆಸ್‌ಗೆ ಸ್ವಚ್ಛ ಆಡಳಿತ ನಡೆಸುವ ಸವಾಲು ಮುಂದಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಸಮನ್ವಯತೆ ಸಾಧಿಸುವ ಅನಿವಾರ್ಯತೆಯೂ ಇದೆ. ಬಿಬಿಎಂಪಿ ಮೇಯರ್ ಮುಂದಿರುವ ಸವಾಲುಗಳೇನು ಎಂಬುದನ್ನು ಚಿತ್ರಗಳಲ್ಲಿ ನೋಡಿ.... [ಮಂಜುನಾಥ ರೆಡ್ಡಿ ಪರಿಚಯ]

ಬರಿದಾದ ಬೊಕ್ಕಸ ತುಂಬಿಸುವುದು

ಬರಿದಾದ ಬೊಕ್ಕಸ ತುಂಬಿಸುವುದು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೊಕ್ಕಸ ಖಾಲಿಯಾಗಿದೆ ಎಂಬುದು ಹಲವು ಬಾರಿ ಸಾಬೀತಾಗಿದೆ. ಆರ್ಥಿಕ ದುಸ್ತಿಯ ಕಾರಣ ಮಹಾನಗರ ಪಾಲಿಕೆ ಆಸ್ತಿಗಳನ್ನು ಅಡವಿಡಬೇಕಾಗಿದ್ದು ಗುಟ್ಟಾಗಿ ಉಳಿದಿಲ್ಲ. ನೂತನ ಮೇಯರ್ ಮುಂದಿರುವ ಮೊದಲ ಸವಾಲು ಪಾಲಿಕೆ ಬೊಕ್ಕಸವನ್ನು ತುಂಬಿಸುವುದು.

ಮೈತ್ರಿಯ ಸಮನ್ವಯತೆ ಸಾಧಿಸುವುದು

ಮೈತ್ರಿಯ ಸಮನ್ವಯತೆ ಸಾಧಿಸುವುದು

ಬಿಬಿಎಂಪಿ ಚುನಾವಣೆಯಲ್ಲಿ ಕೇವಲ 76 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಜೆಡಿಎಸ್‌ಜೊತೆ ಮೈತ್ರಿ ಮಾಡಿಕೊಂಡು ಮೇಯರ್ ಪಟ್ಟಕ್ಕೇರಿದೆ. ಆದ್ದರಿಂದ, ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರ ನಡುವೆ ಸಮನ್ವಯತೆ ಸಾಧಿಸಿಕೊಂಡು ಹೋಗುವ ಅನಿವಾರ್ಯತೆ ಇದೆ.

ಬಿಬಿಎಂಪಿ ವಿಭಜನೆ ಬಗ್ಗೆ ಸ್ಪಷ್ಟ ನಿಲುವು

ಬಿಬಿಎಂಪಿ ವಿಭಜನೆ ಬಗ್ಗೆ ಸ್ಪಷ್ಟ ನಿಲುವು

198 ವಾರ್ಡ್‌ಗಳ ಬಿಬಿಎಂಪಿಯನ್ನು ವಿಭಜನೆ ಮಾಡಬೇಕು ಎಂಬುದು ಸರ್ಕಾರದ ನಿಲುವು ಅದಕ್ಕಾಗಿ ವಿಧೇಯಕವನ್ನು ಮಂಡನೆ ಮಾಡಲಾಗಿದೆ. ಸದ್ಯ, ವಿಧೇಯಕ ರಾಷ್ಟ್ರಪತಿ ಮುಂದಿದೆ. ಮೇಯರ್ ಚುನಾವಣೆಯಲ್ಲಿ ಬೆಂಬಲ ನೀಡಿರುವ ಜೆಡಿಎಸ್ ಬಿಬಿಎಂಪಿ ವಿಭಜನೆ ವಿರೋಧಿಸುತ್ತಿದೆ. ಆದ್ದರಿಂದ, ನೂತನ ಮೇಯರ್ ಪಾಲಿಕೆ ವಿಭಜನೆ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು.

ಕಸ ವಿಲೇವಾರಿಗೆ ಆದ್ಯತೆ ನೀಡುವುದು

ಕಸ ವಿಲೇವಾರಿಗೆ ಆದ್ಯತೆ ನೀಡುವುದು

ಬೆಂಗಳೂರು ನಗರದ ಮುಖ್ಯ ಸಮಸ್ಯೆ ಏನು? ಎಂದರೆ ಎಲ್ಲರೂ ಕಸದತ್ತ ಕೈ ತೋರಿಸುತ್ತಾರೆ. ಕಸ ವಿಲೇವಾರಿಗೆ ಆದ್ಯತೆ ನೀಡುವುದು ನೂತನ ಮೇಯರ್ ಮುಂದಿರುವ ಸವಾಲಾಗಿದೆ. ಪ್ರತಿ ವಾರ್ಡ್‌ನಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡುವುದು. ಕಸವನ್ನು ಸುರಿಯಲು ಜಾಗ ಗುರುತಿಸುವುದು ಮೇಯರ್ ಮುಂದಿರುವ ಮತ್ತೊಂದು ಸವಾಲು.

ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದು

ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದು

ಬಿಬಿಎಂಪಿ ಚುನಾವಣೆ ವೇಳೆ ಕಾಂಗ್ರೆಸ್ ಬೆಂಗಳೂರಿನಿಂದ 60 ಕಿ.ಮೀ.ತನಕ ಜೋಡಿ ರೈಲು ಮಾರ್ಗ, ಬಿಬಿಎಂಪಿ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ವಿತರಣೆ, ಮನೆ ತೆರಿಗೆ ಶೇ 24 ರಿಂದ 5ಕ್ಕೆ ಇಳಿಕೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಡಯಾಲಿಸಿಸ್ ಕೇಂದ್ರ ಮುಂತಾದ ಭರವಸೆಗಳನ್ನು ನೀಡಿದೆ. ಇವುಗಳನ್ನು ಈಡೇರಿಸುವ ಸವಾಲು ನೂತನ ಮೇಯರ್ ಮುಂದಿದೆ.

ಉದ್ಯಾನ ನಗರಿ ರಸ್ತೆಗಳ ರಿಪೇರಿ

ಉದ್ಯಾನ ನಗರಿ ರಸ್ತೆಗಳ ರಿಪೇರಿ

ಬೆಂಗಳೂರಿನ ರಸ್ತೆಗಳು ಯಾವ ಸ್ಥಿತಿಯಲ್ಲಿವೆ ಎಂಬುದು ಉದ್ಯಾನ ನಗರಿಯ ಪ್ರತಿಯೊಬ್ಬರಿಗೂ ತಿಳಿದಿದೆ. ಸರ್ಕಾರ ಮತ್ತು ಬಿಬಿಎಂಪಿ ಸೇರಿ ನಗರದಲ್ಲಿ ಟೆಂಡರ್ ಶ್ಯೂರ್ ರಸ್ತೆಗಳನ್ನು ನಿರ್ಮಿಸುತ್ತಿವೆ. ಇವುಗಳ ಕಾರ್ಯ ಬೇಗ ಪೂರ್ಣಗೊಳ್ಳುವಂತೆ ಗಮನಹರಿಸುವುದು ಮೇಯರ್ ಮುಂದಿರುವ ಸವಾಲು.

ಸರ್ಕಾರದಿಂದ ಅನುದಾನ ತರುವುದು

ಸರ್ಕಾರದಿಂದ ಅನುದಾನ ತರುವುದು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸರ್ಕಾರದ ನೆರವು ಮುಖ್ಯವಾಗುತ್ತದೆ. ಅಲ್ಲಿಂದ ಹಣಕಾಸು ನೆರವನ್ನು ತಂದು ಪಾಲಿಕೆಯ ಯೋಜನೆಗಳಿಗೆ ನೀಡಬೇಕಾಗುತ್ತದೆ. ಸದ್ಯ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಅನುದಾನ ತರುವ ಕೆಲಸ ಸುಲಭವಾಗಬಹುದು.

ಕಾಮಗಾರಿಗಳನ್ನು ಚುರುಕುಗೊಳಿಸುವುದು

ಕಾಮಗಾರಿಗಳನ್ನು ಚುರುಕುಗೊಳಿಸುವುದು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಹಿಂದೆ ಆರಂಭಿಸಿದ ಅನೇಕ ಕಾಮಗಾರಿಗಳೇ ಕುಂಟುತ್ತಿವೆ. ಕಾಮಗಾರಿಗಳನ್ನು ಚುರುಕುಗೊಳಿಸುವುದು ನೂತನ ಮೇಯರ್ ಮುಂದಿರುವ ಸವಾಲು.

ಹಗರಣಗಳ ತನಿಖೆ ಮಾಡಿಸುವುದು

ಹಗರಣಗಳ ತನಿಖೆ ಮಾಡಿಸುವುದು

ಬಿಬಿಎಂಪಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ವರದಿ ನೀಡಲು ಸರ್ಕಾರ ಐಎಎಸ್ ಅಧಿಕಾರಿ ರಾಜೇಂದ್ರಕುಮಾರ್‌ ಕಟಾರಿಯಾ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಸರ್ಕಾರಕ್ಕೆ ಈಗಾಗಲೇ ವರದಿ ನೀಡಿದೆ. ನೂತನ ಮೇಯರ್ ಈ ವರದಿ ಅನ್ವಯ ತನಿಖೆಗೆ ಆದೇಶ ನೀಡಿದರೆ. ಬಿಬಿಎಂಪಿ ಆಡಳಿತದ ಅವಧಿಯಲ್ಲಿ ನಡೆದ ಹಗರಣಗಳು ಬೆಳಕಿಗೆ ಬರಲಿವೆ.

ಗುತ್ತಿಗೆದಾರರ ಬಾಕಿ ಪಾವತಿ

ಗುತ್ತಿಗೆದಾರರ ಬಾಕಿ ಪಾವತಿ

ಹಿಂದೆ ಪಾಲಿಕೆಯಲ್ಲಿ ಆಡಳಿತ ನಡೆಸಿದ ಬಿಜೆಪಿ ಗುತ್ತಿಗೆದಾರರ ಬಿಲ್ ಪಾವತಿ ಮಾಡಿಲ್ಲ ಎಂಬ ಆರೋಪಗಳಿವೆ. ಬಿಲ್ ಪಾವತಿ ಮಾಡದಿದ್ದರೆ ಕಾಮಗಾರಿ ವಿಳಂಬವಾಗಲಿದೆ. ಆದ್ದರಿಂದ ಸರಿಯಾದ ಸಮಯಕ್ಕೆ ಬಿಲ್ ಪಾವತಿ ಮಾಡಿ ಕಾಮಗಾರಿ ವೇಗ ಪಡೆದುಕೊಳ್ಳುವಂತೆ ಮಾಡುವ ಸವಾಲು ಮೇಯರ್ ಮುಂದಿದೆ.

English summary
Madiwala ward Congress corporator BN Manjunath Reddy elected as Bruhat Bangalore Mahanagara Palike (BBMP) mayor. 10 Challenges ahead for new mayor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X