ಅಪ್ಪ ಅಮ್ಮನ ಜೊತೆ ಸೇರಿ ಪ್ರೀತಿಸಿ ಮದುವೆಯಾದವನನ್ನೇ ಕೊಂದ ಹೆಂಡತಿ
ಬೆಳಗಾವಿ, ಅಕ್ಟೋಬರ್ 5: ಅಪ್ಪ ಅಮ್ಮನೊಂದಿಗೆ ಸೇರಿ ಮಹಿಳೆಯೊಬ್ಬಳು ತನ್ನ ಗಂಡನನ್ನೇ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಲಕ್ಷ್ಮೀ ನಗರದಲ್ಲಿ ಕೊಲೆ ನಡೆದಿದ್ದು, ಕಿರಣ್ ಲೋಕರೆ (28) ಕೊಲೆಗೀಡಾದವರು.
ಒಂದೇ ಬೀದಿಯಲ್ಲಿ ವಾಸವಾಗಿದ್ದ ಕಿರಣ್ ಮತ್ತು ಸವಿತಾ 5 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಕೌಟುಂಬಿಕ ಕಲಹದಿಂದ ಒಂದು ವರ್ಷದ ಹಿಂದೆ ಪರಸ್ಪರ ಬೇರೆಯಾಗಿದ್ದರು. ದಂಪತಿಗೆ ಒಂದು ಮಗು ಇತ್ತು. ಆ ಮಗುವಿನೊಂದಿಗೆ ಸವಿತಾ ಪ್ರತ್ಯೇಕವಾಗಿ ವಾಸವಾಗಿದ್ದರು.
ಸವಿತಾ ಶುಕ್ರವಾರ, ಅಕ್ಟೋಬರ್ 4ರಂದು ತವರು ಮನೆಗೆ ಬಂದಾಗ ಮಗುವನ್ನು ನೋಡಲು ಕಿರಣ್ ಕೂಡ ಹೆಂಡತಿ ಮನೆಗೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ದಂಪತಿ ಮಧ್ಯೆ ಮತ್ತೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಸವಿತಾ ಮತ್ತು ಆಕೆಯ ಅಪ್ಪ ಅಮ್ಮ ಕಬ್ಬಿಣದ ರಾಡ್ ನಿಂದ ಕಿರಣ್ ಗೆ ಹೊಡೆದಿದ್ದಾರೆ.

ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.












Click it and Unblock the Notifications