ಬೆಳಗಾವಿ; ರಸ್ತೆ ಅಪಘಾತ; ಮಹಿಳಾ ಪಿಎಸ್ಐ ಸೇರಿ ನಾಲ್ಕು ಸಾವು
ಬೆಳಗಾವಿ, ಜನವರಿ 24: ಭೀಕರ ರಸ್ತೆ ಅಪಘಾತದಲ್ಲಿ ಮಹಿಳಾ ಪಿಎಸ್ಐ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಕ್ರಾಸ್ ಬಳಿ ನಡೆದಿದೆ.
ಭಾನುವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮೀ ಪವಾರ್, ಪ್ರಸಾದ್ ಪವಾರ್, ಅಂಕಿತಾ ಪವಾರ್ ಹಾಗೂ ದೀಪಾ ಶಹಾಪುರಕರ್ ಮೃತಪಟ್ಟಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತರಾಗಿದ್ದಾರೆ. ಮೃತರೆಲ್ಲರೂ ಬೆಳಗಾವಿಯ ಸಹ್ಯಾದ್ರಿ ನಗರದ ನಿವಾಸಿಗಳಾಗಿದ್ದಾರೆ.

ಸಂಬಂಧಿಕರ ಮನೆಗೆ ಹೋಗಿ ಕಾರಿನಲ್ಲಿ ಬೆಳಗಾವಿಗೆ ವಾಪಸ್ ಆಗುತ್ತಿದ್ದಾಗ ಚಚಡಿ ಕ್ರಾಸ್ ಬಳಿ ಈ ದುರಂತ ನಡೆದಿದೆ. ಸರ್ಕಾರಿ ಬಸ್ ಬೆಳಗಾವಿಯಿಂದ ಯರಗಟ್ಟಿಯತ್ತ ಹೊರಟಿತ್ತು.
ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಲ್ಲದೇ ಕಾರು ಬಸ್ ಅಡಿಯಲ್ಲಿ ಸಿಲುಕಿತ್ತು. ಕ್ರೇನ್ ಮೂಲಕ ಕಾರು ಹೊರ ತೆಗೆದು, ಶವಗಳನ್ನು ಹೊರಕ್ಕೆ ತರಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರ ಗುರುತು ತಕ್ಷಣ ಪತ್ತೆಯಾಗಿರಲಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಮೃತರ ಗುರುತು ಪತ್ತೆ ಹಚ್ಚಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications