ಸೋಮವಾರದಿಂದ ಬೆಳಗಾವಿ ಅಧಿವೇಶನ: ಹೇಗೆ ನಡೆಯಲಿದೆ ವಿಧಾನ ಪರಿಷತ್ ಕಲಾಪ
ಬೆಳಗಾವಿ, ಡಿಸೆಂಬರ್ 08: ಸೋಮವಾರದಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕದ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಡಿಸೆಂಬರ್ 9 ರಿಂದ 19ರ ತನಕ ಅಧಿವೇಶನ ನಡೆಯಲಿದ್ದು, ಬೆಳಗಾವಿ ಜಿಲ್ಲಾಡಳಿತ ಅಧಿವೇಶನಕ್ಕೆ ಸಕಲ ರೀತಿಯಲ್ಲಿ ತಯಾರಿಯನ್ನು ನಡೆಸುತ್ತಿದೆ. ರಾಜ್ಯದ ಇಡೀ ಆಡಳಿತ ಯಂತ್ರವೇ ಬೆಳಗಾವಿಯಲ್ಲಿರಲಿದ್ದು, ಯಾವುದೇ ಲೋಪಗಳು ಆಗದಂತೆ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಕಾರ್ಯ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸುವರ್ಣ ವಿಧಾನಸೌಧದಲ್ಲಿ ಅಂತಿಮ ಹಂತದ ಪರಿಶೀಲನೆಯನ್ನು ನಡೆಸಿ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ವಿಧಾನ ಪರಿಷತ್ ಕಾರ್ಯದರ್ಶಿ ಕೆ. ಆರ್. ಮಹಾಲಕ್ಷ್ಮೀ, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮುಂತಾದವರು ಉಪಸ್ಥಿತರಿದ್ದರು.

ವಿಧಾನ ಪರಿಷತ್ ಕಲಾಪ: ಬಸವರಾಜ ಹೊರಟ್ಟಿ ಮಾತನಾಡಿ, "ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಯಶಸ್ಸಿಗೆ ಹಾಗೂ ಕಲಾಪವನ್ನು ರಚನಾತ್ಮಕವಾಗಿ ನಡೆಸಲು ಪರಿಷತ್ ಸದಸ್ಯರಿಗೆ ಅನೇಕ ಸಲಹೆಗಳನ್ನು ನೀಡಲಾಗಿದೆ. ಮಂಗಳವಾರ ಮತ್ತು ಬುಧವಾರ ಪ್ರಶ್ನೋತ್ತರ ವೇಳೆಯ ನಂತರ ಸಂಪೂರ್ಣ ಕಿತ್ತೂರ ಕಲ್ಯಾಣ ಪ್ರಾಂತ್ಯಗಳ ಅಭಿವೃದ್ಧಿ ಕುರಿತು ಚಿಂತನೆ ನಡೆಸಲು ಸದಸ್ಯರಿಗೆ ಸಲಹೆ ನೀಡಲಾಗಿದೆ" ಎಂದರು.
"ಪರಿಷತ್ ಕಲಾಪವನ್ನು ರಚನಾತ್ಮಕವಾಗಿ ನಡೆಸಲು ವಿಧಾನ ಪರಿಷತ್ ಸದಸ್ಯರಿಗೆ ಈಗಾಗಲೇ ಅನೇಕ ಸಲಹೆಗಳನ್ನು ನೀಡಲಾಗಿದೆ. ಈ ಬಾರಿ ಪರಿಷತ್ತಿನಲ್ಲಿ ಒಟ್ಟು 1,397 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 150 ಚುಕ್ಕೆ ಗುರುತಿನ ಪ್ರಶ್ನೆಗಳು ಹಾಗೂ 81 ಗಮನ ಸೆಳೆಯುವ ಸೂಚನೆಗಳು ಬಂದಿರುತ್ತವೆ" ಎಂದು ಸಭಾಪತಿಗಳು ಮಾಹಿತಿ ನೀಡಿದರು.
"ಮಕ್ಕಳ ರಕ್ಷಣೆ ಕುರಿತು ಅರಿವು ಮೂಡಿಸಲು ಕ್ರಮವಹಿಸಲಾಗುತ್ತಿದ್ದು, ಪರಿಷತ್ ಸದಸ್ಯರ ವೇದಿಕೆ ಮಾಡಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸರಕಾರಕ್ಕೆ ಸಲಹೆ ನೀಡಲು ಕ್ರಮ ವಹಿಸಲಾಗುವದು. ಸದನದಲ್ಲಿ ರಚನಾತ್ಮಕ ಚರ್ಚೆಗೆ ಪರಿಷತ್ ಸದಸ್ಯರ ಜತೆ ಈಗಾಗಲೇ ಚರ್ಚಿಸಲಾಗಿದ್ದು, ಸದನ ಸುಗಮವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶಾಸಕರ ಹಾಜರಾತಿ ಹೆಚ್ಚಳಕ್ಕೆ ಕೂಡ ಆದ್ಯತೆ ನೀಡಲಾಗುವುದು" ಎಂದು ಸಭಾಪತಿಗಳು ಹೇಳಿದರು.
"ಅಧಿವೇಶನ ನಡೆಸಲು ಈ ಬಾರಿ 20 ಕೋಟಿ ಖರ್ಚಾಗಲಿದೆ ಅಂದಾಜಿಸಲಾಗಿದೆ. ಶಾಸಕರ ಭವನ ನಿರ್ಮಿಸಲು ಕೆಲವು ಪ್ರಸ್ತಾವನೆಗಳು ಬಂದಿವೆ. ಇವುಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವದು. ತಾಜ್ ಗ್ರೂಪ್, ಕೆಎಲ್ಇ ಹೀಗೆ ಅನೇಕ ಸಂಸ್ಥೆಗಳು ಶಾಸಕರ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಿದ್ದು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದರು.
ಬೆಳಗಾವಿ ಜಿಲ್ಲಾಡಳಿತದ ಸಿದ್ಧತೆ: ಬೆಳಗಾವಿ ಜಿಲ್ಲಾಡಳಿತ ಅಧಿವೇಶನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. "ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಲೋಪಗಳು ಆಗದಂತೆ ಎಲ್ಲಾ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು" ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದ್ದಾರೆ.
"ಅಧಿವೇಶನಕ್ಕೆ ಆಗಮಿಸುವ ಅಧಿಕಾರಿ/ ಸಿಬ್ಬಂದಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು. ಹತ್ತು ದಿನಗಳ ಕಾಲ ರಾಜ್ಯದ ಇಡೀ ಆಡಳಿತ ಯಂತ್ರ ಬೆಳಗಾವಿಯಲ್ಲಿರಲಿದ್ದು ಯಾವುದೇ ಲೋಪಗಳು ಆಗದಂತೆ ಎಲ್ಲ ಅಧಿಕಾರಿ/ ಸಿಬ್ಬಂದಿಗಳು ಕಾರ್ಯ ನಿರ್ವಹಣೆ ಮಾಡಬೇಕು" ಎಂದು ನಿರ್ದೇಶನ ನೀಡಿದ್ದಾರೆ.
"ಅಧಿವೇಶನದ ಕುರಿತಂತೆ ಈಗಾಗಲೇ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದ್ದು, ಎಲ್ಲ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕು. ಅಧಿಕಾರಿ/ ಸಿಬ್ಬಂದಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು. ಅಧಿವೇಶನ ನಡೆಯುವ ವೇಳ ಸುವರ್ಣಸೌಧದ ಆಡಿಟೋರಿಯಂನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು" ಎಂದರು.












Click it and Unblock the Notifications