ದಿ. ಸುರೇಶ್ ಅಂಗಡಿ ತಾಯಿ ಸೋಮವ್ವ ವಿಧಿವಶ
ಬೆಳಗಾವಿ, ಮಾರ್ಚ್ 11; ಕೇಂದ್ರ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಕುಟುಂಬಕ್ಕೆ ಮತ್ತೊಂದು ಅಘಾತವಾಗಿದೆ. ಸುರೇಶ್ ಅಂಗಡಿ ಅವರ ತಾಯಿ ಸೋಮವ್ವ ಅಂಗಡಿ ವಿಧಿವಶರಾಗಿದ್ದಾರೆ.
ಗುರುವಾರ ಬೆಳಗಾವಿ ತಾಲೂಕಿನ ಕೆ. ಕೆ. ಕೊಪ್ಪ ಗ್ರಾಮದಲ್ಲಿ ಸೋಮವ್ವ ಅಂಗಡಿ (90) ವಿಧಿವಶರಾದರು. ಸೋಮವ್ವ ಅಂಗಡಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಸುರೇಶ್ ಅಂಗಡಿ ನಿಧನದ ಬಳಿಕ ತೀವ್ರವಾಗಿ ನೊಂದಿದ್ದರು.
ಸೋಮವ್ವ ಅಂಗಡಿ ಅವರಿಗೆ ಐವರು ಗಂಡು ಮಕ್ಕಳು, ಓರ್ವ ಪುತ್ರಿ. ದಿ. ಸುರೇಶ್ ಅಂಗಡಿ ಅವರ ಮೇಲೆ ಅತ್ಯಂತ ಪ್ರೀತಿಯನ್ನು ಹೊಂದಿದ್ದರು. ಸುರೇಶ ಅಂಗಡಿ ಅವರ ಅಕಾಲಿಕ ನಿಧನದ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.

ಗುರುವಾರ ಸಂಜೆ ಕೆ. ಕೆ. ಕೊಪ್ಪ ಗ್ರಾಮದಲ್ಲಿ ಸೋಮವ್ವ ಅಂಗಡಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಸಚಿವ, ಸುರೇಶ್ ಅಂಗಡಿ ಸಂಬಂಧಿಕರಾದ ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
ಬೆಳಗಾವಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ 2020ರ ಸೆಪ್ಟೆಂಬರ್ 23ರಂದು ನಿಧನ ಹೊಂದಿದ್ದರು. ಕೋವಿಡ್ ಸೋಂಕು ತಗುಲಿದ್ದ ಅವರು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಗಣ್ಯರು ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿ ಸೋಮವ್ವ ಅಂಗಡಿ ಸೇರಿದಂತೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು.












Click it and Unblock the Notifications