ನಿನ್ನೆಯ ಅಬ್ಬರದ ಹೇಳಿಕೆಗೆ ಇಂದು ಕ್ಷಮೆಯಾಚಿಸಿದ ಸಿ.ಎಂ.ಇಬ್ರಾಹಿಂ
ಬೆಳಗಾವಿ, ಡಿ 21: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹಾವೇರಿ ಭಾಷಣಕ್ಕೆ ವ್ಯಂಗ್ಯವಾಡುತ್ತಾ ಸೋಮವಾರದಂದು (ಡಿ 20) ನೀಡಿದ್ದ ಹೇಳಿಕೆಗೆ ಇಂದು, ವಿಧಾನಪರಿಷತ್ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಕ್ಷಮೆಯಾಚಿಸಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ "ನಿಮ್ಮೆಲ್ಲರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತವೇ ಹೊರತು, ಅದರ ಹಿಂದಿರೋ ಪದನಾಮಗಳು ಶಾಶ್ವತವಲ್ಲ. ಈ ಬದುಕು ಶಾಶ್ವತವಲ್ಲ. ನಾವು ಎಷ್ಟು ದಿನ ಇರುತ್ತೇವೆ ಎಂದು ಗೊತ್ತಿಲ್ಲ, ಸ್ಥಾನಮಾನಗಳು ಶಾಶ್ವತವಲ್ಲ," ಎಂದು ಹೇಳಿದ್ದರು.
ಇದಕ್ಕೆ ಲೇವಡಿ ಮಾಡಿದ್ದ ಇಬ್ರಾಹಿಂ, "ದೋಬಿಕಾ ಗಧಾ ನ ಘರ್ ಕಾ, ನ ಬಸ್ ಸ್ಟ್ಯಾಂಡ್ಕಾ, ಕೇಶವಕೃಪಾ ನಂಬಿದರೆ ಚೊಂಬೇ ಗತಿ. ಪದವಿ ಶಾಸ್ವತವಲ್ಲ ಎಂದು ಬೊಮ್ಮಣ್ಣ ಹೇಳಿದ್ದಾರೆ, ಜೀವನವೇ ಶಾಸ್ವತವಲ್ಲ. ಬಸವರಾಜ ಬೊಮ್ಮಾಯಿಯವರು ಬೊಮ್ಮಾಯಿಯವರಾಗಿಯೇ ಇರಬೇಕು" ಎನ್ನುವ ಹೇಳಿಕೆಯನ್ನು ನೀಡಿದ್ದರು.
"ಅಳಬ್ಯಾಡ ತಂಗಿ ಅಳಬ್ಯಾಡ, ಬೊಮ್ಮಣ್ಣ ಅಳಬೇಡ. ಈಗ ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ. ಜಾಗ ಖಾಲಿ ಮಾಡುವ ಎನ್ನುವ ಸೂಚನೆ ಅವರಿಗೆ ಸಿಕ್ಕಿದೆ, ಅದಕ್ಕೆ ಯಾವುದೂ ಶಾಸ್ವತವಲ್ಲ ಎಂದು ಅವರು ಹೇಳುತ್ತಿದ್ದಾರೆ" ಎಂದು ಬೊಮ್ಮಾಯಿ ಭಾಷಣವನ್ನು ಇಬ್ರಾಹಿಂ ಲೇವಡಿ ಮಾಡಿದ್ದರು. ಇದಕ್ಕೆ ಇಬ್ರಾಹಿಂ ಕ್ಷಮೆಯಾಚಿಸಿದ್ದು ಹೀಗೆ..

ಮಡಿವಾಳ ಸಮಾಜಕ್ಕೆ ನೋವು ಉಂಟು ಮಾಡಿದೆ ಎನ್ನುವ ದೂರು ಬಂದಿರುವ ಹಿನ್ನಲೆ
ದೋಬಿಕಾ ಕುತ್ತಾ ನ ಘರ್ ಕಾ, ನ ಬಸ್ ಸ್ಟ್ಯಾಂಡ್ಕಾ ಎನ್ನುವ ಪದ ಪ್ರಯೋಗ, ಮಡಿವಾಳ ಸಮಾಜಕ್ಕೆ ನೋವು ಉಂಟು ಮಾಡಿದೆ ಎನ್ನುವ ದೂರು ಬಂದಿರುವ ಹಿನ್ನಲೆಯಲ್ಲಿ ಸಿ.ಎಂ.ಇಬ್ರಾಹಿಂ, ಆ ಸಮುದಾಯದ ಬೇಷರತ್ ಕ್ಷಮೆಯಾಚಿಸಿದ್ದಾರೆ. ಸಮುದಾಯದ ನಾಯಕರು ದೂರವಾಣಿ ಮೂಲಕ ಇಬ್ರಾಹಿಂ ಅವರಲ್ಲಿ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ಭಾಗವಹಿಸುವ ಮುನ್ನ ಮಾಧ್ಯಮದರೊಂದಿಗೆ ಇಬ್ರಾಹಿಂ ಕ್ಷಮೆಯಾಚಿಸಿದರು.

ಬೇಷರತ್ ಕ್ಷಮೆಯಾಚಿಸುತ್ತೇನೆ, ಸುರ್ವರ್ಣ ಸೌಧದಲ್ಲಿ ಸಿ.ಎಂ.ಇಬ್ರಾಹಿಂ
"ದೋಬಿ ಕಾ ಕುತ್ತಾ ಎನ್ನುವುದೊಂದು ಆಡುಭಾಷೆ, ಗ್ರಾಮದ ಭಾಷೆ. ಅದರಿಂದ ಮಡಿವಾಳ ಸಮಾಜದ ಕೆಲವರಿಗೆ ನೋವಾಗಿದೆ ಎಂದು ಕೇಳ್ಪಲ್ಪಟ್ಟೆ , ಕೆಲವರು ಫೋನ್ ಕೂಡಾ ಮಾಡಿದ್ದರು. ಆ ಸಮಾಜ ನನ್ನ ಹೃದಯಕ್ಕೆ ಹತ್ತಿರ ಇರುವಂತಹ ಸಮಾಜ. ಆ ಸಮಾಜದ ಜನರಿಗೆ ಏನಾದರೂ ನೋವಾಗಿದ್ದರೆ ನಾನು ಬೇಷರತ್ ಕ್ಷಮೆಯಾಚಿಸುತ್ತೇನೆ, ಇದರಲ್ಲಿ ಏನೂ ದುರುದ್ದೇಶವಿರಲಿಲ್ಲ"ಎಂದು ಸಿ.ಎಂ.ಇಬ್ರಾಹಿಂ ಸುರ್ವರ್ಣ ಸೌಧದಲ್ಲಿ ಹೇಳಿದರು.

ಎಲ್ಲರೂ ಒಟ್ಟಾಗಿ ಸಮಾಜದ ಏಳಿಗೆಗೆ ದುಡಿಯೋಣ
"ಆ ಸಮಾಜದ ಜೊತೆಗೆ ನಾನು ಯಾವಗಲೂ ಇರುತ್ತೇನೆ, ಹಾಗಾಗಿ, ನಾನು ಕೊಡುವ ಸ್ಪಷ್ಟೀಕರಣವನ್ನು ಅವರ್ರು ಸ್ವೀಕರಿಸಬೇಕೆಂದು ಆ ಸಮಾಜದಲ್ಲಿ ಮನವಿಯನ್ನು ಮಾಡುತ್ತೇನೆ. ಆ ಸಮುದಾಯವನ್ನು ನೋವಿಸುವ ಉದ್ದೇಶ ನನ್ನ ಮಾತಿನಲ್ಲಿ ಇರಲಿಲ್ಲ, ಎಲ್ಲರೂ ಒಟ್ಟಾಗಿ ಸಮಾಜದ ಏಳಿಗೆಗೆ ದುಡಿಯೋಣ"ಎಂದು ಇಬ್ರಾಹಿಂ ಈ ಸಂದರ್ಭದಲ್ಲಿ ಹೇಳಿದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
"ಉತ್ತರ ಕರ್ನಾಟಕ ಭಾಗದ ಸಮಸ್ಯೆಯ ಬಗ್ಗೆ ಚರ್ಚೆ ಮಾಡಲು ನಿರ್ಧರಿಸಲಾಗಿದೆ, ಚರ್ಚೆಗೆ ಸಾಕಷ್ಟು ಸಮಯಾವಕಾಶ ಸಿಗಬಹುದು ಎಂದು ಭಾವಿಸಿದ್ದೆ. ಪಕ್ಷದೊಳಗೂ ಈ ವಿಚಾರ ನಾನು ಪ್ರಸ್ತಾವಿಸಲಿದ್ದೇನೆ. ಮುಂದಿನ ಜನವರಿ ತಿಂಗಳಲ್ಲೇ ಕೃಷ್ಣಾ ಮೇಲ್ದಂಡೆ ಮತ್ತು ಈ ಭಾಗದ ನೀರಾವರಿ ಯೋಜನೆ ಅನುಷ್ಟಾನಗೊಳಿಸಲು ದೊಡ್ಡ ಹೋರಾಟದ ಅವಶ್ಯಕತೆಯಿದೆ. ಇದನ್ನು ಪಕ್ಷದ ಸಭೆಯಲ್ಲೂ ಮಾತನಾಡುತ್ತೇನೆ, ಪಕ್ಷ ಇದಕ್ಕೆ ಒಪ್ಪಿಗೆಯನ್ನು ನೀಡುತ್ತದೆ ಎಂದು ನಂಬಿಕೊಂಡಿದ್ದೇನೆ. ಉಳಿದಂತಹ ಕಾರ್ಯಕ್ರಮವನ್ನು ಪಕ್ಷದ ಅಧ್ಯಕ್ಷರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ವಿವರಿಸುತ್ತಾರೆ" ಎಂದು ಇಬ್ರಾಹಿಂ ಹೇಳಿದ್ದಾರೆ.
"ನಾಳೆ ಬೆಳಗ್ಗೆ ವಿಧಾನಮಂಡಲದ ಅಧಿವೇಶನ ಆರಂಭವಾದ ನಂತರ ಮೊದಲ ಒಂದು ಗಂಟೆ ಪ್ರಶ್ನೋತ್ತರಗಳಿಗೆ ಅವಕಾಶ ಕಲ್ಪಿಸುತ್ತೇನೆ. ನಂತರ ಇಡೀ ದಿನದ ಕಲಾಪವನ್ನು ಉತ್ತರ ಕರ್ನಾಟಕ ಭಾಗದಲ್ಲಿನ ಸಮಸ್ಯೆಗಳನ್ನು ಚರ್ಚಿಸಲು ಮೀಸಲಿಡಲಾಗಿದೆ" ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದರು.












Click it and Unblock the Notifications