ಬೆಳಗಾವಿ-ನವದೆಹಲಿ ನಡುವೆ ಪ್ರತಿದಿನ ವಿಮಾನ; ವೇಳಾಪಟ್ಟಿ
ಬೆಳಗಾವಿ, ಮಾರ್ಚ್ 28; ಬೆಳಗಾವಿ-ನವದೆಹಲಿ ನಡುವಿನ ವಿಮಾನ ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ದರಿಂದ ಉಭಯ ನಗರಗಳ ನಡುವೆ ಪ್ರತಿದಿನದ ವಿಮಾನ ಸೇವೆಯನ್ನು ಆರಂಭಿಸಲಾಗಿದೆ.
ಭಾನುವಾರ ಸ್ಪೈಸ್ ಜೆಟ್ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಮತ್ತು ನವದೆಹಲಿ ನಡುವೆ ಪ್ರತಿದಿನದ ವಿಮಾನ ಸೇವೆಗೆ ಚಾಲನೆ ನೀಡಿದೆ. ಭಾನುವಾರ ಬೆಳಗಾವಿಯಿಂದ 167 ಪ್ರಯಾಣಿಕರು ದೆಹಲಿಗೆ ಪ್ರಯಾಣ ಬೆಳೆಸಿದರು.
2021ರ ಆಗಸ್ಟ್‌ನಲ್ಲಿ ಬೆಳಗಾವಿ-ದೆಹಲಿ ನಡುವಿನ ವಿಮಾನ ಹಾರಾಟ ಆರಂಭವಾಗಿತ್ತು. ವಾರದಲ್ಲಿ ಎರಡು ದಿನಗಳು ಮಾತ್ರ ವಿಮಾನ ಸಂಚಾರವಿತ್ತು. ಈಗ ಪ್ರತಿದಿನ ವಿಮಾನ ಸೇವೆ ಆರಂಭವಾಗಿದ್ದು, ಜನರಿಗೆ ಅನುಕೂಲವಾಗಿದೆ.

ವೇಳಾಪಟ್ಟಿ; ಬೆಳಗಾವಿ-ನವದೆಹಲಿ ಪ್ರತಿದಿನದ ವಿಮಾನ ಸೇವೆ ವೇಳಾಪಟ್ಟಿ ಹೀಗಿದೆ. ದೆಹಲಿಯಿಂದ ಬೆಳಗ್ಗೆ 6.05ಕ್ಕೆ ಹೊರಡುವ ವಿಮಾನ 8.45ಕ್ಕೆ ಬೆಳಗಾವಿಗೆ ಬರಲಿದೆ. 9.15ಕ್ಕೆ ಬೆಳಗಾವಿಯಿಂದ ಹೊರಟು 11.45ಕ್ಕೆ ದೆಹಲಿಗೆ ತಲುಪಲಿದೆ.
ಬೆಳಗಾವಿ-ದೆಹಲಿ ನಡುವಿನ ಪ್ರಯಾಣ ದರ 5,686ರಿಂದ ಆರಂಭವಾಗಲಿದೆ. ಸ್ಪೈಸ್ ಜೆಟ್ ವೆಬ್‌ಸೈಟ್ ಮೂಲಕವೂ ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಬೆಳಗಾವಿ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ನಂಬರ್ 1 ಪಟ್ಟ; ಕರ್ನಾಟಕದ ದೇಶಿಯ ವಿಮಾನ ನಿಲ್ದಾಣ (ಡೊಮೆಸ್ಟಿಕ್)ಗಳಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ನಂಬರ್ 1 ಸ್ಥಾನದಲ್ಲಿದೆ. 2021ರಲ್ಲಿ 7 ಸಾವಿರ ವಿಮಾನಗಳು ಹಾರಾಟ ನಡೆಸಿದ್ದು, 3.11 ಲಕ್ಷ ಪ್ರಯಾಣಿಕರು ಭೇಟಿ ನೀಡಿದ್ದಾರೆ.
ಬೆಂಗಳೂರು ಮತ್ತು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿದರೆ ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಂದಣಿ ಹೊಂದಿರುವ ವಿಮಾನ ನಿಲ್ದಾಣಗಳಗಳ ಪಟ್ಟಿಯಲ್ಲಿ ಬೆಳಗಾವಿ ಇದೆ.
ಸಾಂಬ್ರಾ ವಿಮಾನ ನಿಲ್ದಾಣ ಕರ್ನಾಟಕ ಗಡಿ ಭಾಗದಲ್ಲಿ ಇರುವುದರಿಂದ ಮಹಾರಾಷ್ಟ್ರ ಮತ್ತು ಗೋವಾದ ಪ್ರಯಾಣಿಕರು ಸಹ ಈ ವಿಮಾನ ನಿಲ್ದಾಣವನ್ನು ಬಳಕೆ ಮಾಡುತ್ತಾರೆ. ಆದ್ದರಿಂದ ಮೂರು ರಾಜ್ಯದ ಜನರಿಗೆ ವಿಮಾನ ನಿಲ್ದಾಣ ಅನುಕೂಲವಾಗಿದೆ.
ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಮತ್ತು ಮೈಸೂರು ವಿಮಾನ ನಿಲ್ದಾಣಗಳು ಕರ್ನಾಟಕದ ದೇಶಿಯ ವಿಮಾನ ನಿಲ್ದಾನಗಳಾಗಿವೆ. ಇವುಗಳಲ್ಲಿ ಬೆಳಗಾವಿ ವಿಮಾನ ವಿಮಾನ ಅತಿ ಹೆಚ್ಚು ಪ್ರಯಾಣಿಕರ ಭೇಟಿ, ಪ್ರಯಾಣಿಕರ ದಟ್ಟಣೆಯಲ್ಲಿ ಮೊದಲ ಸ್ಥಾನದಲ್ಲಿದೆ.
ಬೆಳಗಾವಿ ವಿಮಾನ ನಿಲ್ದಾಣ ಕೇಂದ್ರ ಸರ್ಕಾರದ ಉಡಾನ್ ಯೋಜನೆಗೆ ಸೇರುವ ಮೊದಲು ಪ್ರತಿ ತಿಂಗಳು ಸುಮಾರು 100 ವಿಮಾನಗಳು ಹಾರಾಟ ನಡೆಸುತ್ತಿದ್ದವು. 2019ರಲ್ಲಿ ಯೋಜನೆ ವ್ಯಾಪ್ತಿಗೆ ಸೇರಿದ ಬಳಿಕ ವಿಮಾನಗಳ ಸಂಖ್ಯೆ ಏರಿಕೆಯಾಯಿತು.
ಉಡಾನ್ ಯೋಜನೆಗೆ ಸೇರುವ ಮೊದಲು 2019ರ ಏಪ್ರಿಲ್‌ನಲ್ಲಿ 118 ವಿಮಾನಗಳು ಮಾತ್ರ ಸಂಚಾರ ನಡೆಸಿದ್ದವು. ಆದರೆ 2019ರ ಮೇನಲ್ಲಿ 258, ಜೂನ್‌ನಲ್ಲಿ 354 ವಿಮಾನಗಳು ಹಾರಾಟ ನಡೆಸಿ ದಾಖಲೆ ಬರೆದವು. 2021ರಲ್ಲಿ ಬೆಳಗಾವಿಯಿಂದ 7048 ವಿಮಾನಗಳು ಹಾರಾಟ ನಡೆಸಿದ್ದು, 3,11,335 ಪ್ರಯಾಣಿಕರು ಸಂಚಾರ ನಡೆಸಿದರು.
ಉಡಾನ್ ಯೋಜನೆಗೆ ಸೇರುವ ಮೊದಲು ಬೆಳಗಾವಿಯಿಂದ ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್‌ಗೆ ಮಾತ್ರ ವಿಮಾನಗಳು ಸಂಚಾರ ನಡೆಸುತ್ತಿದ್ದವು. ಆದರೆ ಈಗ ಬೆಳಗಾವಿಯಿಂದ 13 ಪ್ರಮುಖ ನಗರಗಳಿಗೆ ವಿಮಾನ ಸೇವೆ ಇದೆ.
ಬೆಳಗಾವಿ ಪ್ರಮುಖ ವ್ಯಾಪಾರಿ ಕ್ಷೇತ್ರವೂ ಆಗಿರುವುದರಿಂದ ವಿವಿಧ ನಗರಗಳ ವ್ಯಾಪಾರಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ವಾಯು ಮತ್ತು ಭೂ ಸೇನೆ ತರಬೇತಿ ಕೇಂದ್ರ ಸಹ ಬೆಳಗಾವಿಯಲ್ಲಿದೆ. ಆದ್ದರಿಂದ ಅಧಿಕಾರಿಗಳು ಭೇಟಿ ನೀಡುತ್ತಿರುತ್ತಾರೆ. ಇವರಿಗೆಲ್ಲ ಬೆಳಗಾವಿ ವಿಮಾನ ನಿಲ್ದಾಣ ಸಹಾಯಕವಾಗಿದೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ 2019ರಲ್ಲಿ 3,99,917 ಜನರು, 2020ರಲ್ಲಿ 5,78,244 ಜನರು ಸಂಚಾರ ನಡೆಸಿದ್ದಾರೆ.












Click it and Unblock the Notifications