KSDL ಲಾಭಾಂಶದ ಭಾರೀ ಮೊತ್ತ ರಾಜ್ಯ ಸರ್ಕಾರಕ್ಕೆ ಹಸ್ತಾಂತರ
ಬೆಳಗಾವಿ, ಡಿಸೆಂಬರ್ 17: ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ (ಕೆಎಸ್.ಡಿ.ಎಲ್) ಕಾರ್ಖಾನೆಯು 2023-24ನೇ ಸಾಲಿನ ಲಾಭಾಂಶವನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. ಕೆಎಸ್‌ಡಿಎಲ್ ಈ ವರ್ಷ 362.07 ಕೋಟಿ ರೂಪಾಯಿ ಲಾಭದ ಪೈಕಿ 108.62 ಕೋಟಿ ರೂಪಾಯಿ ಲಾಂಭಾಂಶದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಕಾರ್ಖಾನೆ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರು ಮಂಗಳವಾರ ಹಸ್ತಾಂತರಿಸಿದರು.
ಬೆಳಗಾವಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ವಿಧಾನಸಭೆ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈ ಚೆಕ್ ನೀಡಲಾಯಿತು. ಅದಷ್ಟೇ ಅಲ್ಲದೇ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಇದೇ ಸಂದರ್ಭದಲ್ಲಿ ಐದು ಕೋಟಿ ರೂಪಾಯಿಗಳ ಚೆಕ್ ನೀಡಲಾಯಿತು.

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ (ಕೆಎಸ್.ಡಿ.ಎಲ್) ಕಾರ್ಖಾನೆ ಇತಿಹಾಸದಲ್ಲಿ ಇಷ್ಟು ಮೊತ್ತದ (108.62 ಕೋಟಿ ರೂಪಾಯಿ) ಲಾಭಾಂಶದ ಚೆಕ್ ನೀಡುತ್ತಿರುವುದು ಇದೇ ಮೊದಲು ಎಂದು ರಾಜ್ಯ ಕೈಗಾರಿಕೆ ಕಚೇರಿಯು ದೃಢಪಡಿಸಿದೆ.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಸಾರ್ವಜನಿಕ ಉದ್ದಿಮೆಗಳು ಲಾಭದಾಯಕ ವಹಿವಾಟು ನಡೆಸುವುದು ಒಳ್ಳೆಯ ಬೆಳವಣಿಗೆಯಾಗಿದೆ. ಐದು ವರ್ಷಗಳ ಹಿಂದೆ 15.91 ಕೋಟಿ ರೂಪಾಯಿ ಲಾಭಾಂಶ ಕೊಟ್ಟಿದ್ದ ಈ ಉದ್ದಿಮೆಯು ಈ ವರ್ಷ 108 ಕೋಟಿ ರೂ.ಗಳಿಗೂ ಹೆಚ್ಚಿನ ಡಿವಿಡೆಂಡ್ ಕೊಟ್ಟಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಳಿಕ ಸಚಿವ ಎಂ.ಬಿ ಪಾಟೀಲ ಅವರು, 'ಈಗಿನ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕೆಎಸ್ ಡಿಲ್ ಕಾರ್ಖಾನೆಯು ಉನ್ನತಿ ಕಾಣುತ್ತಿದೆ. ಈ ಲಾಭವನ್ನು ಇನ್ನೂ ಹೊಸ ಎತ್ತರಕ್ಕೆ ಕೊಂಡೊಯ್ಯಲು ಮತ್ತು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಸಲು ಅಗತ್ಯ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಹೊಸಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ' ಎಂದರು.
ಸಾರ್ವಜನಿಕ ಉದ್ದಿಮೆಗಳು ತಮ್ಮ ಲಾಭಾಂಶದಲ್ಲಿ ಶೇ.30 ರಷ್ಟನ್ನು ಸರ್ಕಾರ ಕೊಡಬೇಕಾದ್ದು ನಿಯಮವಾಗಿದೆ. ಇದಕ್ಕೆ ತಕ್ಕಂತೆ ಈ ಲಾಭಾಂಶವನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧ್ಯಕ್ಷ ನಾಡಗೌಡ ವಿವರಿಸಿದರು.
ವಿದೇಶಿ ಪ್ರವಾಸದಲ್ಲಿರುವ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು, ವಿವಿಧ ದೇಶಗಳ ಕಂಪನಿಗಳ ಸದಸ್ಯರನ್ನು ಭೇಟಿ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ಬಂಡವಾಳ, ಉತ್ಪಾದನಾ ಘಟಕ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಕರ್ನಾಟಕದಲ್ಲಿ ಬಂಡವಾಳ ಹೂಡಲು ವಿದೇಶಿ ಕಂಪನಿಗಳು ಆಸಕ್ತಿ ವಹಿಸಿವೆ. ಅವರನ್ನೆಲ್ಲ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಕರ್ನಾಟಕ ಬಂಡವಾಳ ಹೂಡಿಕೆ ಸಮಾವೇಶ 2024ಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದಾರೆ.












Click it and Unblock the Notifications