ನರೇಗಾ ಅಡಿ ಕೂಲಿ ಕೆಲಸ ಕೊಡುವಲ್ಲಿ ಬೆಳಗಾವಿಗೆ ಮೊದಲ ಸ್ಥಾನ
ಬೆಳಗಾವಿ, ಜುಲೈ 11; ಈ ಬಾರಿ ನೈಋತ್ಯ ಮುಂಗಾರು ತಡವಾಗಿ ಆರಂಭವಾಗಿದೆ. ಬೇಸಿಗೆ ಅವಧಿ ಧೀರ್ಘವಾಗಿದ್ದು, ಗ್ರಾಮೀಣ ಮಟ್ಟದಲ್ಲಿ ಜನರಿಗೆ ಉದ್ಯೋಗಕ್ಕಾಗಿ ಕಷ್ಟಪಡುತ್ತಿದ್ದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ನರೇಗಾ) ಅಡಿ ಗ್ರಾಮೀಣ ಜನರಿಗೆ ಉದ್ಯೋಗ ಸಿಕ್ಕಿದೆ.
ನರೇಗಾ ಯೋಜನೆಯಡಿ ಕೆಲಸ ನೀಡುವಲ್ಲಿ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಈ ಸಾಲಿನ ಆರ್ಥಿಕ ವರ್ಷದ ಕೇವಲ ಮೂರು ತಿಂಗಳಲ್ಲಿ 61.41 ಲಕ್ಷದಷ್ಟು ಮಾನವ ದಿನ ಸೃಜನೆ ಮಾಡಿರುವುದು ದಾಖಲೆಯಾಗಿದೆ.

ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಭೊಯರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆಗೆ 2023-24ನೇ ಸಾಲಿಗೆ 1.40 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿದೆ. ಅದರ ಪೈಕಿ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಲಾಗಿದೆ. ಮುಖ್ಯವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಸತತ ಪ್ರತಿದಿನ 1 ಲಕ್ಷಕ್ಕೂ ಮೇಲ್ಪಟ್ಟು ಕೂಲಿಕಾರರು ಕೆಲಸ ನಿರ್ವಹಿಸಿರುವುದು ವಿಶೇಷವಾಗಿದೆ.
ಯಾವ ಜಿಲ್ಲೆಗೆ ಯಾವ ಸ್ಥಾನ?; ನರೇಗಾ ಯೋಜನೆಯಡಿ ಮಾನವ ದಿನ ಸೃಜನೆಯಲ್ಲಿ ಮೊದಲ ಸ್ಥಾನ ಬೆಳಗಾವಿ ಜಿಲ್ಲೆಗೆ ಸಿಕ್ಕಿದೆ. ಬೆಳಗಾವಿ 61.41 ಲಕ್ಷ ಮಾನವ ದಿನ ಸೃಜನೆ ಮಾಡಿದೆ. ರಾಯಚೂರು 58.75 ಲಕ್ಷದೊಂದಿಗೆ 2ನೇ ಸ್ಥಾನ, ಕೊಪ್ಪಳ 57.37 ಲಕ್ಷ (3ನೇ ಸ್ಥಾನ), ಬಳ್ಳಾರಿ 49.19 ಲಕ್ಷ (4ನೇ ಸ್ಥಾನ) ಮತ್ತು ವಿಜಯನಗರ ಜಿಲ್ಲೆಯು 42.51 ಲಕ್ಷದೊಂದಿಗೆ (5ನೇ ಸ್ಥಾನ) ಪಡೆದಿದೆ.
ಕಳೆದ ಸಾಲಿನ ಆರ್ಥಿಕ ವರ್ಷದ ಮೊದಲ ಈ ಮೂರು ತಿಂಗಳಲ್ಲಿ 42.67 ಲಕ್ಷ ಮಾನವ ದಿನಗಳ ಸೃಜನೆ ಜಿಲ್ಲೆಯಲ್ಲಿ ಆಗಿತ್ತು. ಆದರೆ ಈ ಬಾರಿ 61.41 ಲಕ್ಷ ಮಾನವ ದಿನ ಸೃಜನೆಯಾಗಿದ್ದು ನಿರೀಕ್ಷೆಗೂ ಮೀರಿ ಸಾಧನೆಯಾಗಿದೆ. ಕಳೆದ ವರ್ಷಕ್ಕೂ ಪ್ರಸ್ತುತ ವರ್ಷಕ್ಕೂ 18.73 ಲಕ್ಷ ಮಾನವ ದಿನ ಸೃಜನೆ ಮಾಡುವುದರೊಂದಿಗೆ ಶೇ 43.91 ರಷ್ಟು ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ.
ಈ ಕುರಿತು ಮಾತನಾಡಿರುವ ಹರ್ಷಲ್ ಭೊಯರ್, "ಜಿಲ್ಲೆಯಾದ್ಯಂತ ನರೇಗಾದಡಿ ಅಧಿಕ ಪ್ರಮಾಣದಲ್ಲಿ ಜನರು ಕೂಲಿ ಕೆಲಸ ಪಡೆದು ರಾಜ್ಯದಲ್ಲಿಯೇ ಅತಿ ಹೆಚ್ಚು ಮಾನವ ದಿನ ಸೃಜನೆ ಮಾಡಿದ್ದು ಸಂತಸದ ವಿಷಯವಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕಿನ ಹಾಗೂ ಗ್ರಾಮ ಪಂಚಾಯತಿಯ ಅಧಿಕಾರಿ/ ಸಿಬ್ಬಂದಿಯವರ ಶ್ರಮ ಹಾಗೂ ಸಹಕಾರದಿಂದ ಹೆಚ್ಚಿನ ಪ್ರಗತಿ ಸಾಧ್ಯವಾಗಿದೆ. ಅದೇರೀತಿ ವಿಶೇಷ ಚೇತನರು, ಹಿರಿಯನಾಗರಿಕರು ಮತ್ತು ಮಹಿಳೆಯರು ಇನ್ನು ಹೆಚ್ಚು ಯೋಜನೆಯಡಿ ಭಾಗಿಯಾಗಿ ನರೇಗಾ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು" ಎಂದರು.
ರವಿ ಎನ್ ಬಂಗಾರೆಪ್ಪನವರ, ಯೋಜನಾ ನಿರ್ದೇಶಕರು ಡಿ.ಆರ್.ಡಿ.ಎ ಶಾಖೆ ಬೆಳಗಾವಿ ಮಾತನಾಡಿ, "ಈ ಬಾರಿ ಮುಂಗಾರು ವಿಳಂಬವಾಗಿರುವುದರಿಂದ ರೈತರು ಬಿತ್ತನೆ ಕಾರ್ಯ ಮಾಡಲು ಸಾಧ್ಯವಾಗದೇ ಇರುವುದರಿಂದ ವಾಡಿಕೆಯಂತೆ ರೈತರ ಜಮೀನುಗಳಲ್ಲಿ ಸದ್ಯಕ್ಕೆ ಯಾವುದೇ ಕೆಲಸಗಳು ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನರೇಗಾ ಕಾಮಗಾರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನು ಹೆಚ್ಚು ಹೆಚ್ಚು ರೈತರು/ ಕೂಲಿಕಾರರು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು" ಎಂದು ಹೇಳಿದರು.
ಒಂದೇ ದಿನದಲ್ಲಿ 2.78 ಲಕ್ಷ ಮಾನವ ದಿನದ ಸೃಜನೆ; ಬೆಳಗಾವಿ ಜಿಲ್ಲೆಯು ನರೇಗಾ ಯೋಜನೆಯಡಿ ಪ್ರಪ್ರಥಮ ಬಾರಿಗೆ ದಿನಾಂಕ 01/07/2023 ರಂದು ಒಂದೇ ದಿನದಲ್ಲಿ 2.78 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿರುವುದು ರಾಜ್ಯದಲ್ಲಿಯೇ ಇಲ್ಲಿಯವರೆಗಿನ ಗರಿಷ್ಠ ಸಾಧನೆಯಾಗಿದೆ.
ಜಿಲ್ಲೆಯಾದ್ಯಂತ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಯೋಜನೆಯಡಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೂಲಿ ಒದಗಿಸಲಾಗಿದ್ದು, 2022-23ನೇ ಸಾಲಿನಲ್ಲಿ ಶೇ 54.40 ರಷ್ಟು ಮಹಿಳಾ ಭಾಗವಹಿಸುವಿಕೆ ಪ್ರಮಾಣವಿದೆ. ಪ್ರಸಕ್ತ ಸಾಲಿನಲ್ಲಿ ಶೇ.58.66 ರಷ್ಟು ಮಹಿಳೆಯರು ಉದ್ಯೋಗ ಪಡೆದುಕೊಂಡಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದಾಗ ಕೇವಲ 3 ತಿಂಗಳಲ್ಲಿ ಶೇ.4.24 ರಷ್ಟು ಮಹಿಳೆಯರ ಭಾಗವಹಿಸುವಿಕೆ ಏರಿಕೆ ಕಂಡಿದೆ.
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಿರಂತರವಾಗಿ ಜನರಿಗೆ ನರೇಗಾ ಯೋಜನೆಯ ಕುರಿತು ಮನೆ ಮನೆ ಭೇಟಿ, ಸ್ವಸಹಾಯ ಸಂಘದ LCRP, MBK, ಕೃಷಿ ಸಖಿ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷವಾಗಿ ತಾಲ್ಲೂಕಾ ಮಟ್ಟದಲ್ಲಿ ತಾಲ್ಲೂಕಾ ಐ.ಇ.ಸಿ ಸಂಯೋಜಕರು ಹಾಗೂ ಆಡಳಿತ ಸಹಾಯಕರು ಗ್ರಾಮ ಪಂಚಾಯತಿ ಹಾಗೂ ಕಾಮಗಾರಿ ಸ್ಥಳಗಳಿಗೆ ನಿರಂತರ ಭೇಟಿ ಹಾಗೂ ಪರಿಶೀಲನೆ ಕಾರ್ಯ ನಡೆಸಿರುವುದರಿಂದ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಲುಪಲು ಅನುಕೂಲವಾಗಿದೆ.












Click it and Unblock the Notifications