ಮುಂದುವರೆದ ಅಬ್ಬರದ ಮಳೆ: ಶಾಲೆಗಳಿಗೆ ರಜೆ ಘೋಷಣೆ
ಬೆಳಗಾವಿ, ಜುಲೈ, 24: ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಅದರಲ್ಲೂ ನದಿ, ಕೆರೆ-ಕಟ್ಟೆಗಳು ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ. ಆದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರೆದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಲ್ಲಿನ ನಾಲ್ಕು ತಾಲ್ಲೂಕುಗಳ ಶಾಲೆಗಳಿಗೆ ಇಂದು (ಜುಲೈ 24) ರಜೆ ಘೋಷಣೆ ಮಾಡಲಾಗಿದೆ.
ಭಾರೀ ಮಳೆ ಮುಂದುವರೆದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಜಿಲ್ಲೆಯ ಬೆಳಗಾವಿ, ಕಿತ್ತೂರು, ಖಾನಾಪುರ ಹಾಗೂ ಬೈಲಹೊಂಗಲ 4 ತಾಲೂಕಿನ ಶಾಲಾ-ಕಾಲೇಜುಗಳಿಗೆ ನಾಳೆ(ಜುಲೈ 24) ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.

ಮಹಾರಾಷ್ಟ್ರ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಮುಂದುವರೆದ ಹಿನ್ನೆಲೆ ದೂದಗಂಗಾ ನದಿ ಅಪಾಯದ ಮಟ್ಟು ಮೀರಿ ತುಂಬಿ ಹರಿಯುತ್ತಿದ್ದು, ಜಿಲ್ಲೆಯ ನಿಪ್ಪಾಣಿ ತಾಲೂಕಿನಾದ್ಯಂತ ಪ್ರವಾಹದ ಮುನ್ಸೂಚನೆ ನೀಡಲಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ ನೀರು ಇನ್ನೂ ಕೆಲವೇ ಗಂಟೆಗಳಲ್ಲಿ ಕೆಲವು ಗ್ರಾಮಗಳಿಗೆ ನುಗ್ಗುವ ಸಾಧ್ಯತೆ ಇದೆ. ಈ ಹಿನ್ನಲೆ ನದಿ ಪಾತ್ರದ ಗ್ರಾಮಗಳಿಗೆ ಎಸ್.ಪಿ.ಡಾ.ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲನೆ ನಡೆಸಿದ್ದಾರೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ: ಬೆಳಗಾವಿ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಧಾರಾಕಾರ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆ ಮಾರ್ಕಂಡೇಯ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಮಾರ್ಕೆಂಡೆಯ ನದಿ ನೀರಿನ ಹರಿವು ಹೆಚ್ಚಳ ಹಿನ್ನೆಲೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಅಂಬೇವಾಡಿಯ ರೈತ ಕುಟುಂಬಗಳು ವಾಸವಾಗಿದ್ದ ಮನೆಗಳನ್ನು ನದಿ ನೀರು ಸುತ್ತುವರೆದಿದ್ದು, ಇಲ್ಲಿನ ಜನರು ಜೀವವನ್ನು ಕೈಯಲ್ಲಿ ಹಿಡಿದು ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ಮಳೆಗಾಲ ಸಮಯದಲ್ಲೂ ಈ ಭಾಗದ ರೈತ ಕುಟುಂಬಗಳಿಗೆ ಒಂದಲ್ಲ ಒಂದು ಸಮಸ್ಯೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಇನ್ನು ಇದೀಗ ನದಿ ನೀರು ಮನೆಯೊಳಗೆ ನುಗ್ಗುವ ಭೀತಿ ಎದುರಾದ ಹಿನ್ನೆಲೆ ರೈತರು ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಮೆನೆಯಿಂದ ಬೇರೆಡೆಗೆ ಸ್ಥಳಾಂತರಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಈಗಾಗಲೇ ಈ ಭಾಗದ ಸಾವಿರಾರು ಹೆಕ್ಟೇರ್ ಜಮೀನು ಕೂಡ ಮಾರ್ಕಂಡೇಯ ನದಿ ನೀರಿನಲ್ಲಿ ಮುಳುಗಡೆಯಾಗಿದ್ದು, ಪರಿಣಾಮ ಭತ್ತ, ಕಬ್ಬು, ಮೆಣಸಿನಕಾಯಿ, ಮೆಕ್ಕೆಜೋಳ, ತರಕಾರಿ ಬೆಳೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಇನ್ನು ಬೆಳೆಗಳನ್ನು ಕಳೆದುಕೊಂಡ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.












Click it and Unblock the Notifications