Heavy rain: ಬೆಳಗಾವಿ ಜಿಲ್ಲೆಯಲ್ಲಿ ಹಲವೆಡೆ ಭಾರೀ ಮಳೆ, ಬಿಸಿಲ ಧಗೆಗೆ ಬಾಡಿದ್ದ ಜನರ ಮುಖದಲ್ಲಿ ಮಂದಹಾಸ
ಬೆಳಗಾವಿ, ಡಿಸೆಂಬರ್, 01: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತಡರಾತ್ರಿವರೆಗೂ ಭಾರೀ ಮಳೆ ಆಗಿದ್ದು, ಜನಜೀವನ ಅಸ್ತವ್ಯಸ್ತ ಆಗಿದೆ. ಸವದತ್ತಿ, ರಾಯಭಾಗ ಹಾಗೂ ಬೈಲಹೊಂಗಲ ತಾಲ್ಲೂಕಿನ ಮುರಗೋಡ, ಸೊಗಲ, ಕಾರಿಮನಿ, ಹೊಸೂರ ಗ್ರಾಮಗಳ ಸುತ್ತಮುತ್ತ ಗುರುವಾರ (ಡಿಸೆಂಬರ್ 01) ಧಾರಾಕಾರ ಮಳೆ ಸುರಿಯಿತು. ತಾಸಿಗೂ ಹೆಚ್ಚು ಸಮಯ ಸುರಿದ ಮಳೆಯಿಂದ ಹಳ್ಳ, ಕಾಲುವೆ, ಚರಂಡಿಗಳು ತುಂಬಿ ಹರಿದವು.
ದಕ್ಷಿಣ ಕಾಶಿ ಎಂದೇ ಹೆಸರಾದ 'ಸೊಗಲ ಸೋಮೇಶ್ವರ' ಕ್ಷೇತ್ರದ ಎರಡು ಜಲಪಾತಗಳಿಗೆ ಮಳೆಯಿಂದಾಗಿ ಮತ್ತೆ ಜೀವಕಳೆ ಬಂದಿದೆ. ದೇವಸ್ಥಾನದ ಕಿರು ಕಾಲುವೆಗಳೂ ತುಂಬಿದವು. ಕೆಲ ಗ್ರಾಮಗಳಲ್ಲಿ ಬಿರಿಗಾಳಿಗೆ ಹಲವು ಕಡೆ ವಿದ್ಯುತ್ ಕಂಬಗಳ ವಾಲಿದವು. ಜಮೀನುಗಳಲ್ಲಿ ಮಳೆ ನೀರು ನಿಂತು ಒಡ್ಡು ಒಡೆದವು.

ಕಾರವಾರ ಜಿಲ್ಲೆಯ ಕರಾವಳಿಯೂ ಸೇರಿದಂತೆ ಮಲೆನಾಡಿನ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಕಾರವಾರ, ಕುಮಟಾ, ಹೊನ್ನಾವರದಲ್ಲಿ ಮಧ್ಯಾಹ್ನದ ಹೊತ್ತಿಗೆ ಎಡೆಬಿಡದೆ ಕೆಲ ಹೊತ್ತು ಮಳೆ ಸುರಿಯಿತು. ಯಲ್ಲಾಪುರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿಯೂ ಮಳೆಯಾಗಿದೆ. ಅಲ್ಲದೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಚೋರನೂರು ಹೋಬಳಿಯಲ್ಲಿ ಬುಧವಾರ ರಾತ್ರಿ ಉತ್ತಮ ಮಳೆಯಾಗಿದೆ. ಮಳೆಯ ಅಬ್ಬರಕ್ಕೆ ಕೆರೆಕಟ್ಟೆಗಳೆಲ್ಲ ತುಂಬಿವೆ. ಚೋರನೂರು ಗ್ರಾಮ, ಜಿಗೇನಹಳ್ಳಿ ಗ್ರಾಮಗಳಲ್ಲಿ ಎರಡು ಮನೆ ಕುಸಿದಿವೆ.












Click it and Unblock the Notifications