ಬೆಳಗಾವಿ ವಿಡಿಯೋ; ಬಾಡಿಗೆ ಕೊಡದಿದ್ದಕ್ಕೆ ಗಾಳಿಯಲ್ಲಿ ಗುಂಡು!
ಬೆಳಗಾವಿ, ಜೂನ್ 15 : ಮನೆ ಬಾಡಿಗೆ ಕಟ್ಟಲಿಲ್ಲ ಎಂಬ ಕಾರಣಕ್ಕೆ ಬಂದೂಕು ತೋರಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಗುಂ ಡು ಹಾರಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಮನೆಯ ಮಾಲೀಕ ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿಕ್ಕೋಡಿಯ ಬಿ. ಕೆ. ಕಾಲೇಜಿನ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರೋಹಿಣಿ ಕುಲಕರ್ಣಿ ಬಾಡಿಗೆ ಕಟ್ಟಿರಲಿಲ್ಲ. ಭಾನುವಾರ ರಾತ್ರಿ ಮನೆಗೆ ನುಗ್ಗಿದ ಮಾಲೀಕ ತಕ್ಷಣವೇ ಮನೆ ಖಾಲಿ ಮಾಡಬೇಕು ಎಂದು ಬೆದರಿಕೆ ಹಾಕಿದ್ದಾನೆ.

ಬಂದೂಕು ಹಿಡಿದು ಬಂದಿದ್ದ ಮಾಲೀಕ ಗಾಳಿಯಲ್ಲಿ ಗುಂಡು ಹಾರಿಸಿ ಬಾಡಿಗೆದಾರರಿಗೆ ಬೆದರಿಕೆ ಹಾಕಿದ್ದಾನೆ. ಈ ವಿಡಿಯೋ ವಾಟ್ಸಪ್ ಮೂಲಕ ಹರಿದಾಡುತ್ತಿದೆ.
ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲನ್ನು ಏರಿದೆ. ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ
#WATCH Karnataka: A landlord fired shots in the air after a tenant failed to pay rent, in Chikkodi area of Belgaum district yesterday. The person was later taken into custody by the police. pic.twitter.com/8dxXA8ifcI
— ANI (@ANI) June 15, 2020
ಲಾಕ್ ಡೌನ್ ಹಿನ್ನಲೆಯಲ್ಲಿ ರೋಹಿಣಿ ಅವರಿಗೆ ಬಾಡಿಗೆ ಕಟ್ಟಲು ಆಗಿರಲಿಲ್ಲ. ಅಡ್ವಾನ್ಸ್ ಹಣದಲ್ಲಿಯೇ ಎರಡು ತಿಂಗಳ ಬಾಡಿಗೆ ಮುರಿದುಕೊಂಡಿದ್ದ ಮಾಲೀಕ ನೂರ್ ಅಹ್ಮದ್ ಉಳಿದ ಹಣ ನೀಡುವಂತೆ, ತಕ್ಷಣ ಮನೆ ಖಾಲಿ ಮಾಡುವಂತೆ ಮನೆ ಮುಂದೆ ಬಂದು ಗಲಾಟೆ ಮಾಡಿದ್ದಾನೆ.
ಸ್ಥಳೀಯರು ನೂರ್ ಅಹ್ಮದ್ ಗಲಾಟೆ ಮಾಡುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಗುಂಡು ಮನೆಯ ಮೇಲ್ಛಾವಣಿಗೆ ತಗುಲಿದ್ದು, ಯಾರಿಗೂ ಯಾವುದೇ ಅಪಾಯವಾಗಿಲ್ಲ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications