ಕಾರ್ಯಕರ್ತರಿಗೆ ಹಣ ಹಂಚಿ ಸಿಕ್ಕಿಬಿದ್ದ ಉಪಮುಖ್ಯಮಂತ್ರಿ ಕಾರಜೋಳ
ಬೆಳಗಾವಿ, ನವೆಂಬರ್ 26: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕಾರ್ಯಕರ್ತರಿಗೆ ಹಣ ಹಂಚಿದ ವಿಡಿಯೋ ವೈರಲ್ ಆಗಿದೆ.
ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರವಾಗಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ಗೋವಿಂದ ಕಾರಜೋಳ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಮಹೇಶ್ ಕುಮಟಳ್ಳಿ ಮನೆಯಲ್ಲಿ ಕಾರ್ಯಕರ್ತರಿಗೆ ಗೋವಿಂದ ಕಾರಜೋಳ ಹಣ ಹಂಚಿಕೆ ಮಾಡಿದ್ದಾರೆ.
ಗೋವಿಂದ ಕಾರಜೋಳ ಅವರು ತಮ್ಮ ಜೇಬಿನಿಂದ ನೋಟಿನ ಕಂತೆಯನ್ನು ತೆಗೆದು ಕಾರ್ಯಕರ್ತರಿಗೆ ನೀಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆ ಆಗಿದ್ದು, ಈ ವಿಡಿಯೋವನ್ನು ಕನ್ನಡ ವೆಬ್‌ಪೋರ್ಟ್ 'ನ್ಯೂಸ್ ಫರ್ಸ್ಟ್' ಚಿತ್ರೀಕರಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಹಣ ಹಂಚಿಕೆ ಮಾಡುತ್ತಿದ್ದ ಗೋವಿಂದ ಕಾರಜೋಳ ಕ್ಯಾಮೆರಾ ಕಂಡೊಡನೆ ಗಾಬರಿಗೊಂಡು, ಕ್ಯಾಮೆರಾ ಆಫ್ ಮಾಡುವಂತೆ ಸೂಚಿಸಿದ್ದಾರೆ. ಅಲ್ಲಿದ್ದ ಕಾರ್ಯಕರ್ತರೂ ಸಹ ವಿಡಿಯೋ ಆಫ್ ಮಾಡುವಂತೆ ಕ್ಯಾಮೆರಾ ಮನ್ ಮೇಲೆ ಜಗಳ ಮಾಡಿದ್ದಾರೆ. ವಿಡಿಯೋ ವನ್ನು ಡಿಲೀಟ್ ಮಾಡುವಂತೆ ಕಾರಜೋಳ ಕಡೆಯವರು ಒತ್ತಡ ಹೇರಿರುವುದಾಗಿಯೂ ವೆಬ್‌ಸೈಟ್ ಪ್ರಕಟಿಸಿದೆ.
ಅಥಣಿಯಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ನೇತೃತ್ವದಲ್ಲಿ ಭಾರಿ ರೋಡ್ ಶೋ ಆಯೋಜಿಸಲಾಗಿತ್ತು. ರೋಡ್ ಶೋ ನಲ್ಲಿ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಜನ ಕರೆತಂದ ಮುಖ್ಯ ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡುವಾಗ ಡಿಸಿಎಂ ಕಾರಜೋಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ.












Click it and Unblock the Notifications