ರೈಲಿಗೆ ತಲೆಕೊಟ್ಟ ದಂಪತಿ; ಪತಿ ಸಾವು, ಪತ್ನಿ ಸ್ಥಿತಿ ಗಂಭೀರ
ಬೆಳಗಾವಿ, ಫೆಬ್ರವರಿ 4; ಗೂಡ್ಸ್ ರೈಲಿಗೆ ತಲೆಕೊಟ್ಟು ಪತಿ ಮತ್ತು ಪತ್ನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪತಿ ಸಾವನ್ನಪ್ಪಿದ್ದು, ಪತ್ನಿ ಸ್ಥಿತಿ ಗಂಭೀರವಾಗಿದೆ.
ಬೆಳಗಾವಿಯ ಕಾಂಗ್ರೆಸ್ ರಸ್ತೆ ಬಳಿಯ ರೈಲ್ವೆ ಒಂದನೇ ಗೇಟ್ ಬಳಿ ಗುರುವಾರ ಮುಂಜಾನೆ ಈ ದುರ್ಘಟನೆ ನಡೆದಿದೆ. ಬೆಳಗಾವಿಯ ಮರಾಠಿ ದಿನಪತ್ರಿಕೆಯೊಂದರ ಪ್ರಿಂಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಪಾಟೀಲ್ (35) ಮೃತಪಟ್ಟಿದ್ದಾರೆ.
ರಾಕೇಶ್ ಪತ್ನಿ ಅಸ್ಮೀತಾ ಪಾಟೀಲ್ ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ದಂಪತಿಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.

ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ತಂದೆ-ತಾಯಿ ಜೊತೆ ದಂಪತಿಗಳು ವಾಸವಾಗಿದ್ದರು. ಬುಧವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಪತ್ನಿಯನ್ನು ತವರುಮನೆಗೆ ಬಿಟ್ಟು ಬರುವುದಾಗಿ ಮನೆಯಿಂದ ಕರೆದುಕೊಂಡು ಹೋದ ರಾಕೇಶ್ ಪಾಟೀಲ್ ತಡರಾತ್ರಿ ರೈಲಿಗೆ ತಲೆಕೊಟ್ಟಿದ್ದಾರೆ.
ಮುಂಜಾನೆ ಸ್ಥಳೀಯರು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜನರೇ ಗಂಭೀರವಾಗಿ ಗಾಯಗೊಂಡಿದ್ದದ ಅಸ್ಮೀತಾ ಪಾಟೀಲ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಬೆಳಗಾವಿ ರೈಲ್ವೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications