Chikkodi Lok Sabha Election: ಚಿಕ್ಕೋಡಿ ಕ್ಷೇತ್ರದ ಚುನಾವಣಾ ಪರಿಚಯ, ವರದಿ ವಿಶ್ಲೇಷಣೆ
ಬೆಳಗಾವಿ, ಮಾರ್ಚ್ 12: ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯ ತಾಲೂಕು ಕೇಂದ್ರವು ಆಗಿರುವ ಲೋಕಸಭಾ ಕ್ಷೇತ್ರ ಚಿಕ್ಕೋಡಿ (Chikkodi) ಯಲ್ಲಿ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಕಳೆದುಕೊಂಡ ಕ್ಷೇತ್ರದ ಅಧಿಕಾರವನ್ನು ಪಡೆಯಲು ಕಾಂಗ್ರೆಸ್ ಉತ್ಸಾಹ ತೋರಿದ್ದು, ತಂತ್ರ ರೂಪಿಸಿದೆ. ಈಗಾಗಲೇ ಕಾಂಗ್ರೆಸ್ ಟಿಕೆಟ್ ಅಂತಿಮವಾಗಿದ್ದು, ಬಿಜೆಪಿ ಅಭ್ಯರ್ಥಿ ಘೋಷಣೆ ಆಗಬೇಕಿದೆ.
ಈ ಕ್ಷೇತ್ರದ ಅಧಿಕಾರವು 2019ರಲ್ಲಿ ಬಿಜೆಪಿ ದೊರೆತಿದೆ. ಚಿಕ್ಕೋಡಿ ವ್ಯಾಪ್ತಿಯಲ್ಲಿನ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ (2023) ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದೀಗ ಲೋಕಸಭಾ ಚುನಾವಣೆಗೆ ಪ್ರಭಾವಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

ಹಾಲಿ ಶಾಸಕನ ಪುತ್ರಿ ಸ್ಪರ್ಧೆ ಬಹುತೇಕ ಫಿಕ್ಸ್
ಗೆಲುವಿನ ಭಾಗವಾಗಿಯೇ ಈ ಭಾಗದ ಪ್ರಭಾವಿ ರಾಜಕಾರಣಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ ಜಾರಕಿಹೊಳಿಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಅಂತಿಮಗೊಳಿಸಿ, ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ.
ಚಿಕ್ಕೋಡಿಯಿಂದ ಪುತ್ರಿ ಕಣ್ಣಕ್ಕಿಳಿದರೆ ಸ್ವತಃ ಸತೀಶ್ ಜಾರಕಿಹೊಳಿಯವರೇ ಸ್ಪರ್ಧೆ ಮಾಡಿದಂತೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿದೆ. ಈ ಮೂಲಕ ಪ್ರಭಾವಿ ನಾಯಕರ ಕುಟುಂಬದ ಸದಸ್ಯರನ್ನೇ ಅಖಾಡಕ್ಕೆ ಇಳಿಸಿ ಕ್ಷೇತ್ರ ಮರಳಿ ಪಡೆಯಲು ಕಾಂಗ್ರೆಸ್ ಸಜ್ಜಾಗಿದೆ.
ಚಿಕ್ಕೋಡಿ ಟಿಕೆಟ್ ಆಕಾಂಕ್ಷಿಗಳು
ಈ ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಪ್ರಕಾಶ್ ಹುಕ್ಕೇರಿ, ವಕೀಲ ಮೋಹನ್ ಕಾತರಕಿ, ಡಾ ಗಿರೀಶ್ ಸೋನವಾಲ್ಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ ಮತ್ತು ಯುವ ಕಾಂಗ್ರೆಸ್ ಮುಖಂಡ ಕಿರಣ ಸಾಧುನವರ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಇವರೊಂದಿಗೆ ಲಕ್ಷ್ಮಣರಾವ್ ಚಿಂಗಳೆ ಮತ್ತು ಪ್ರಕಾಶ ಹುಕ್ಕೇರಿ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಜಾರಕಿಹೊಳಿ ಪುತ್ರಿ ಅಂತಿಮವಾಗಿದ್ದರಿಂದ ಇವರೆಲ್ಲರ ಟಿಕೆಟ್ ಪೈಪೋಟಿ ಅಂತ್ಯ ಕಂಡಿದೆ.

ಬಿಜೆಪಿ ಟಿಕೆಟ್ ಫೈನಲ್ ಆಗಿಲ್ಲ
ಇತ್ತ ಬಿಜೆಪಿಯಲ್ಲಿ ಚಿಕ್ಕೋಡಿಯಿಂದ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆಯವರು ಇದ್ದಾರೆ. ಈ ಬಾರಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರೊಂದಿಗೆ ಮತ್ತೋರ್ವ ರಮೇಶ್ ಕತ್ತಿ ಅವರು ಆಕಾಂಕ್ಷಿಯಾಗಿದ್ದು, ಯಾರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಕಾದು ನೋಡಬೇಕಿದೆ.
2019ರಲ್ಲಿ ಬಿಜೆಪಿಗೆ ಜಯ
ಚಿಕ್ಕೋಡಿಯ 2019ರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಅಣ್ಣ ಸಾಹೇಬ್ ಜೊಲ್ಲೆ ಅವರು ಸಂಸತ್ತಿಗೆ ಆಯ್ಕೆ ಆದರು. ಅಣ್ಣಾಸಾಹೇಬ ಜೊಲ್ಲೆ ಅವರು 6,45,017 ಪಡೆದು ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಕಾಶ ಬಾಬಣ್ಣ ಹುಕ್ಕೇರಿ (5,26,140) ಅವರನ್ನು ಸೋಲಿಸಿದರು.
2014ರಲ್ಲಿ ಕಾಂಗ್ರೆಸ್ 'ಕೈ'ಗೆ ಚಿಕ್ಕೋಡಿ
2014ರಲ್ಲಿ ಇದೇ ಚಿಕ್ಕೋಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ ಬಾಬಣ್ಣ ಹುಕ್ಕೇರಿ ಅವರು ಒಟ್ಟು 4,74,373 ಮತಗಳು ಪಡೆದು ಎದುರಾಳಿ ಬಿಜೆಪಿಯ ರಮೇಶ್ ವಿಶ್ವನಾಥ ಕತ್ತಿ (4,71,370) ಅವರನ್ನು ಸೋಲಿಸಿದ್ದರು. ಎನ್‌ಸಿಪಿಯಿಂದ ಸ್ಪರ್ಧಿಸಿದ್ದ ಪ್ರತಾಪರಾವ್ ಪಾಟೀಲ್ 42,738 ಮತ ಪಡೆದರು. ಜೆಡಿಎಸ್‌ನಿಂದ ಶ್ರೀಮಂತ ಬಾಳಾಸಾಹೇಬ್ ಪಾಟೀಲ್ ಅವರು ಕೇವಲ 39,992 ಮತಗಳಿಗೆ ತೃಪ್ತಿಪಟ್ಟುಕೊಂಡರು.
ಚಿಕ್ಕೋಡಿಯಲ್ಲಿ 8 ವಿಧಾನಸಭಾ ಕ್ಷೇತ್ರ
ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿನ ಒಟ್ಟು 08 ವಿಧಾನಸಭಾ ಕ್ಷೇತ್ರದಲ್ಲಿ 05 ಕ್ಷೇತ್ರಗಳು ಕಾಂಗ್ರೆಸ್ ಪಾಲಾದರೆ, ಕೇವಲ 03 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇಲ್ಲಿ ಯಾರು, ಯಾವ ಕ್ಷೇತ್ರದಿಂದ ಗೆದ್ದ ಮಾಹಿತಿ ಹೀಗಿದೆ.
ನಿಪ್ಪಾಣಿ ಕ್ಷೇತ್ರ- ಶಶಿಕಲಾ ಜೊಲ್ಲೆ (ಬಿಜೆಪಿ-73,348 ಮತಗಳು), ಚಿಕ್ಕೋಡಿ ಸದಲಗಾ- ಗಣೇಶ್ ಹುಕ್ಕೇರಿ (ಕಾಂಗ್ರೆಸ್- 1,28,349 ಮತಗಳು), ಅಥಣಿ- ಲಕ್ಷ್ಮಣ ಸವದಿ (ಕಾಂಗ್ರೆಸ್- 131,404 ಮತ), ಕಾಗವಾಡ- ರಾಜು ಕಾಗೆ (ಕಾಂಗ್ರೆಸ್- 83,387ಮತ) ಕುಡಚಿ (ಎಸ್‌ಸಿ)- ಮಹೇಂದ್ರ ತಮ್ಮಣ್ಣನವರ್ (ಕಾಂಗ್ರೆಸ್- 85,321 ಮತ), ರಾಯಭಾಗ್- ದುರ್ಯೋಧನ ಐಹೊಳೆ (ಬಿಜೆಪಿ- 67,502 ಮತ), ಹುಕ್ಕೇರಿ -ನಿಖಿಲ್ ಕತ್ತಿ (ಬಿಜೆಪಿ- 1,03,574 ಮತ) ಮತ್ತು ಯಮಕನಮರಡಿ (ಎಸ್‌ಟಿ) ಸತೀಶ್ ಜಾರಿಕಿಹೊಳಿ (ಕಾಂಗ್ರೆಸ್- 73,512ಮತ) ಅವರು ವಿಜಯ ಸಾಧಿಸಿದ್ದಾರೆ.












Click it and Unblock the Notifications