Vande Bharat; ಬೆಳಗಾವಿಗೆ ವಂದೇ ಭಾರತ್ ರೈಲು ವಿಳಂಬ, ವಿವರ
ಬೆಳಗಾವಿ, ಡಿಸೆಂಬರ್ 11; ಪ್ರಯಾಣಿಕರ ಬೇಡಿಕೆಯಂತೆ ಭಾರತೀಯ ರೈಲ್ವೆ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಳಗಾವಿ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ. ಈ ಮಾರ್ಗದಲ್ಲಿ ರೈಲಿನ ಪ್ರಾಯೋಗಿಕ ಸಂಚಾರವೂ ಮುಗಿದಿದೆ. ಆದರೆ ವಾಣಿಜ್ಯ ಸಂಚಾರ ಇನ್ನೂ ಆರಂಭವಾಗಿಲ್ಲ.
ಸದ್ಯ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಇದನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕಿದೆ. ಆದರೆ ಪ್ರಾಯೋಗಿಕ ಸಂಚಾರ ಪೂರ್ಣಗೊಂಡು ತಿಂಗಳುಗಳು ಕಳೆದರೂ ರೈಲು ಸೇವೆ ಯಾವಾಗ ಆರಂಭ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ನವೆಂಬರ್ 21ರಂದು ರೈಲ್ವೆ ಇಲಾಖೆ ಅಧಿಕಾರಿಗಳು ಬೆಂಗಳೂರಿನಿಂದ ಬೆಳಗಾವಿ ತನಕ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಸಿದ್ದಾರೆ. ಯಾವುದೇ ಅಡೆ ತಡೆ ಇಲ್ಲದೇ ನಿಗದಿತ ಸಮಯಕ್ಕಿಂತ ಮೊದಲೇ ರೈಲು ಬೆಳಗಾವಿಗೆ ತಲುಪಿತ್ತು. ಶೀಘ್ರವೇ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂದು ಗಡಿನಾಡಿನ ಜನರು ಸಹ ಕಾಯುತ್ತಿದ್ದಾರೆ.
ವಿಳಂಬ ಆಗುತ್ತಿರುವುದು ಏಕೆ?; ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಪ್ರಮುಖ ಅಡಚಣೆ ಆಗಿರುವುದು ನಿರ್ವಹಣಾ ವ್ಯವಸ್ಥೆ. ಹೌದು ರೈಲು ಒಂದು ಕಡೆಯ ಸಂಚಾರ ಪೂರ್ಣಗೊಳಿಸಿದ ಬಳಿಕ ನಿರ್ವಹಣೆ ಮಾಡಲೇಬೇಕಿದೆ. ಅದರಲ್ಲಿ ಎಲೆಕ್ಟ್ರಿಕಲ್, ಸ್ವಚ್ಛತೆ ಮುಂತಾದ ಅಂಶಗಳು ಸೇರಿವೆ. ಬೆಳಗಾವಿ ನಿಲ್ದಾಣದಲ್ಲಿ ಈ ನಿರ್ವಹಣೆ ಮಾಡುವ ವ್ಯವಸ್ಥೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಬೆಳಗಾವಿಗೆ ವಂದೇ ಭಾರತ್ ರೈಲು ಬೇಕು ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು. ಅಲ್ಲದೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಈ ಕುರಿತು ರೈಲ್ವೆ ಸಚಿವರಿಗೆ ಪತ್ರವನ್ನು ಬರೆದಿದ್ದರು. ಆದ್ದರಿಂದ ಮುಖ್ಯಮಂತ್ರಿಗಳ ಒಪ್ಪಿಗೆ ಬಳಿಕ ಕಾರ್ಯಕ್ರಮದ ದಿನಾಂಕವನ್ನು ನಿಗದಿ ಮಾಡಬೇಕಿದೆ.
ಬೋಗಿಗಳ ಬದಲಾವಣೆ, ವೇಳಾಪಟ್ಟಿ, ರೈಲಿಗೆ ನೀರು ತುಂಬಿಸುವುದು ಸೇರಿದಂತೆ ವಿವಿಧ ಅಂಶಗಳು ಸಹ ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರದ ದಿನಾಂಕ ವಿಳಂಬವಾಗಲು ಕಾರಣವಾಗಿವೆ ಎಂದು ಟ್ವೀಟ್ ಖಾತೆಯೊಂದರಲ್ಲಿ ಉಲ್ಲೇಖ ಮಾಡಲಾಗಿದೆ.
ದೇಶದಲ್ಲಿ ಎಲ್ಲಾ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಚಾಲನೆ ನೀಡುತ್ತಿದ್ದಾರೆ. ಒಟ್ಟಿಗೆ 4 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮವನ್ನು ರೈಲ್ವೆ ಇಲಾಖೆ ನಿಗದಿ ಮಾಡಲಿದೆ. ಪ್ರಧಾನಿ ಕಾರ್ಯಕ್ರಮದ ದಿನಾಂಕ ಸಿಗದ ಕಾರಣ ರೈಲು ಸಂಚಾರ ವಿಳಂಬವಾಗುತ್ತಿದೆ ಎಂಬ ಮಾಹಿತಿಯೂ ಇದೆ.
ರೈಲ್ವೆ ಇಲಾಖೆ ಈಗಾಗಲೇ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸಂಚಾರ ನಡೆಸುವ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಅಂತಿಮ ಆದೇಶ ಹೊರಡಿಸಿದೆ. ಅಲ್ಲದೇ ವಿಸ್ತರಿತ ರೈಲು ಸೇವೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ರೈಲು ಸಂಖ್ಯೆ 20661 ಮುಂಜಾನೆ 05.45ಕ್ಕೆ ಹೊರಟು ಮಧ್ಯಾಹ್ನ 01.30ಕ್ಕೆ ಬೆಳಗಾವಿ ತಲುಪಲಿದೆ. ರೈಲು ಸಂಖ್ಯೆ 20662 ಮಧ್ಯಾಹ್ನ 2ಕ್ಕೆ ಬೆಳಗಾವಿಯಿಂದ ಹೊರಟು ರಾತ್ರಿ 10.10ಕ್ಕೆ ಬೆಂಗಳೂರು ನಗರ ನಿಲ್ದಾಣ ತಲುಪಲಿದೆ ಎಂದು ವೇಳಾಪಟ್ಟಿ ತಯಾರು ಮಾಡಲಾಗಿದೆ.
ಈಗಾಗಲೇ ಬೆಂಗಳೂರು ನಗರದಿಂದ ಧಾರವಾಡ ತನಕ ವಂದೇ ಭಾರತ್ ರೈಲಿನಲ್ಲಿ ಸಂಚಾರ ನಡೆಸುವ ಜನರು ಅಲ್ಲಿಂದ ಬಸ್ ಮೂಲಕ ಬೆಳಗಾವಿಗೆ ತಲುಪುತ್ತಿದ್ದಾರೆ. ಈಗ ವಂದೇ ಭಾರತ್ ರೈಲು ಸಂಚಾರ ಬೆಳಗಾವಿ ತನಕ ವಿಸ್ತರಣೆ ಮಾಡಿದರೆ ಪ್ರಯಾಣಿಕರು ಸುಮಾರು 2 ಗಂಟೆ ಹೆಚ್ಚುವರಿ ಸಂಚಾರ ನಡೆಸಬೇಕು.












Click it and Unblock the Notifications