ಬೆಳಗಾವಿ: ಪ್ರೇಮಿಗಳನ್ನು ದೋಚುತ್ತಿದ್ದ ಐವರ ಬಂಧನ
ಬೆಳಗಾವಿ, ಡಿಸೆಂಬರ್ 13: ಪ್ರೇಮಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಜೀವ ಬೆದರಿಕೆ ಹಾಕಿ ಹಣ, ಚಿನ್ನಾಭರಣ, ಮೊಬೈಲ್ ದೋಚುತ್ತಿದ್ದ ಬೆಳಗಾವಿಯ ಕಳ್ಳರ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಬೆಳಗಾವಿಯ ಹಲವೆಡೆ ಪ್ರೇಮಿಗಳು ಏಕಾಂತವಾಗಿರುವಾಗ ಹಠಾತ್ ದಾಳಿ ನಡೆಸಿ, ಅವರ ವಿಡಿಯೊ ಚಿತ್ರೀಕರಣ ಮಾಡಿ, ಚಾಕು ತೋರಿಸಿ ಹೆದರಿಸಿ ಚಿನ್ನಾಭರಣ, ಹಣ, ಮೊಬೈಲ್ ದೋಚಿದ್ದಾರೆ.

ನಗರದ ಸಿಪಿಎಡ್ ಮಯದಾನದ ಬಳಿಯ ನಿರ್ಜನ ಪ್ರದೇಶದಲ್ಲಿ ಈ ತಂಡ ಹಲವು ಯುವಕ, ಯುವತಿಯರನ್ನು ದೋಚಿದೆ. ಅಷ್ಟೆ ಅಲ್ಲದೆ ಚಾಕು ತೋರಿಸಿ ಪರಸ್ಪರ ಪ್ರಣಯದಲ್ಲಿ ತೊಡಗುವಂತೆ ಬೆದರಿಸಿ ಅದನ್ನು ಮೊಬೈಲ್ ನಲ್ಲಿ ಚಿತ್ರಿಸಿಕೊಂಡು ಬ್ಲಾಕ್‌ಮೇಲ್ ಮಾಡಿದ್ದಾರೆ.
ಬೆಳಗಾವಿಯ ಸಿಪಿಎಡ್ ಮೈದಾನದ ಬಳಿಯ ನಿರ್ಜನ ಪ್ರದೇಶದಲ್ಲಿ ನಿನ್ನೆ ಸಂಜೆ ಯುವಕ, ಯುವತಿ ಮಾತನಾಡುತ್ತಿದ್ದಾಗ ಈ ತಂಡ ದಾಳಿ ನಡೆಸಿ ಯುವತಿಯ ಕೈಹಿಡಿದುಕೊಂಡು ಎಳೆದಾಡಿ ದಾಂದಲೆ ಮಾಡಿದ್ದಾರೆ, ಮದುವೆ ಮಾಡುವುದಾಗಿ ಹೆದರಿಸಿದ್ದಾರೆ ಹಾಗೂ ಅವರ ಬಳಿ ಇದ್ದ ಮೊಬೈಲ್, ಹಣ, ಚಿನ್ನಾಭರಣ ದೋಚಿದ್ದಾರೆ.
ಸಂತ್ರಸ್ತ ಯುವಕ ಪೊಲೀಸರಿಗೆ ದೂರು ನೀಡಿದ ಕಾರಣ ಪೊಲೀಸರು ಜಾಗೃತರಾಗಿ ಐವರು ಕಿರಾತಕರನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾಗಿರುವ ಶಾರೂಕ ಕಿಲ್ಲೇದಾರ, ರಹೀಮ್ ಸೈಯದ್ , ಮೊಹಮ್ಮದ್ ಬಾಂಬೆವಾಲೆ, ಜಾವೀತ ಅತ್ತಾರ, ಮೊಹಮ್ಮದ್ ಬೇಪಾರಿ ಎಲ್ಲರೂ ಬೆಳಗಾವಿಯ ನಿವಾಸಿಗಳೆ.












Click it and Unblock the Notifications