Belagavi airport: ಹೆಚ್ಚಾಯಿತು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ, ಹುಬ್ಬಳ್ಳಿಗಿಲ್ಲ ಅದೃಷ್ಟ!
ಬೆಂಗಳೂರು, ಜೂನ್. 03: ರಾಜ್ಯದ ಬೆಂಗಳೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು ವಿಮಾನ ನಿಲ್ದಾಣಗಳಲ್ಲಿ ಹೆಚ್ಚು ಬಳಕೆಯಾಗುವುದು ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಬೆಳಗಾವಿ ವಿಮಾನ ನಿಲ್ದಾಣದ ಬಳಕೆ ಹೆಚ್ಚಾಗಿರುವುದು ಕಂಡು ಬಂದಿದೆ.
ಬೆಳಗಾವಿ ವಿಮಾನ ನಿಲ್ದಾಣವು ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ 2024 ರ ಏಪ್ರಿಲ್‌ನಲ್ಲಿ 64.1% ನಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕರ ದಟ್ಟಣೆ ಕಾಣಿಸುತ್ತಿದ್ದು, ಪ್ರಭಾವಶಾಲಿ ಬೆಳವಣಿಗೆಯನ್ನು ದಾಖಲಿಸಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ವಿಮಾನಯಾನಕ್ಕೆ ನೀರಸ ಪ್ರತಿಕ್ರಿಯೆ
ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ಆದರೆ, ಹುಬ್ಬಳ್ಳಿ, ಕಲಬುರಗಿ ಮತ್ತು ಮೈಸೂರು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಕ್ಯೆ ಸಾಕಷ್ಟು ಕುಸಿದಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ವರದಿ ಬಹಿರಂಗಪಡಿಸಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಸಿಕ ಏರ್ ಟ್ರಾಫಿಕ್ ವರದಿಯು 2023 ರ ಏಪ್ರಿಲ್‌ನಲ್ಲಿ 30.56 ಮಿಲಿಯನ್‌ಗೆ ಹೋಲಿಸಿದರೆ, 2024 ರ ಏಪ್ರಿಲ್‌ನಲ್ಲಿ 32.39 ಮಿಲಿಯನ್ ಪ್ರಯಾಣಿಕರೊಂದಿಗೆ, ದೇಶದಲ್ಲಿ ಒಟ್ಟಾರೆ ಶೇಕಡಾ 6 ರಷ್ಟು ಪ್ರಯಾಣಿಕರ ಬೆಳವಣಿಗೆಯನ್ನು ತೋರಿಸುತ್ತದೆ.
ವಿದೇಶಕ್ಕೆ ಹೋಗಲು ಬಯಸುವ ಭಾರತೀಯರು ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಶೇಕಡಾ 16.8 ರಷ್ಟು ಏರಿಕೆಯ ಬೆಳವಣಿಗೆ ದಾಖಲಿಸಿದ್ದಾರೆ. ಈ ಏಪ್ರಿಲ್‌ನಲ್ಲಿ 5.87 ಮಿಲಿಯನ್ ಮತ್ತು ಕಳೆದ ವರ್ಷ ಇದೇ ತಿಂಗಳು 5.03 ಮಿಲಿಯನ್ ಮಂದಿ ಪ್ರಯಾಣಿಸಿದ್ದರು.
ಬೆಳಗಾವಿ ವಿಮಾನ ನಿಲ್ದಾಣದ ಸಾಧನೆ
ಬೆಳಗಾವಿ ವಿಮಾನ ನಿಲ್ದಾಣವು ಈ ವರ್ಷದ ಏಪ್ರಿಲ್‌ನಲ್ಲಿ 31,060 ಪ್ರಯಾಣಿಕರನ್ನು ದಾಖಲಿಸಿದೆ. ಕಳೆದ ವರ್ಷ ಇದೇ ತಿಂಗಳು ಕೇವಲ 18,922 ಮಂದಿ ಪ್ರಯಾಣಿಕರು ಸೇವೆಯನ್ನು ಉಪಯೋಗಿಸಿದ್ದರು. ಈ ಉತ್ತಮ ಸಾಧನೆಗೆ ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ ಎಂದು ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್ ತ್ಯಾಗರಾಜನ್ ಹೇಳಿದ್ದಾರೆ.

ಅಕ್ಟೋಬರ್ 2023 ರಲ್ಲಿ ಪ್ರಾರಂಭವಾದ ಬೆಳಗಾವಿ - ದೆಹಲಿ ಮಾರ್ಗದಲ್ಲಿ ಇಂಡಿಗೋದ ದೈನಂದಿನ ಕಾರ್ಯಾಚರಣೆಗಳು ಬೆಳಗಾವಿ ವಿಮಾನ ನಿಲ್ದಾಣಕ್ಕೆ ದೊಡ್ಡ ಉತ್ತೇಜನವನ್ನು ನೀಡಿತು. ಇದು 70% ಸರಾಸರಿ ಆಕ್ಯುಪೆನ್ಸಿಯೊಂದಿಗೆ ಚಾಲನೆಯಲ್ಲಿದೆ. ಮುಂಬೈ ಮಾರ್ಗದಲ್ಲಿ 80 ಆಸನಗಳನ್ನು ಹೊಂದಿರುವ ಸ್ಟಾರ್‌ಏರ್‌ನ ಎಂಬ್ರೇರ್ 175 ವಿಮಾನವು ಕೇವಲ 50 ಆಸನಗಳನ್ನು ಹೊಂದಿದ್ದ ಎಂಬ್ರೇರ್ 145 ವಿಮಾನದ ಫ್ಲೀಟ್‌ಗೆ ಸೇರ್ಪಡೆಯಾಗಿದೆ. ಇದು ಕೂಡ ಪ್ರಯಾಣಿಕರ ದಟ್ಟಣೆಯ ಮತ್ತೊಂದು ಪ್ರಮುಖ ಕಾರಣವಾಗಿದೆ. ಮುಂಬರುವ ತಿಂಗಳುಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಲಿದೆ" ಎಂದು ಎಸ್ ತ್ಯಾಗರಾಜನ್ ಹೇಳಿದ್ದಾರೆ.
ಕಳೆದ ವರ್ಷ 1,42,995 ಕ್ಕೆ ಹೋಲಿಸಿದರೆ ಏಪ್ರಿಲ್‌ನಲ್ಲಿ 1,91,026 ಫ್ಲೈಯರ್‌ಗಳೊಂದಿಗೆ ಮಂಗಳೂರು ವಿಮಾನ ನಿಲ್ದಾಣ ಎರಡನೇ ಅತಿದೊಡ್ಡ ಬೆಳವಣಿಗೆಯನ್ನು ಕಂಡಿದೆ. ಒಂದು ವರ್ಷದಲ್ಲಿ 33.6 ರಷ್ಟು ಏರಿಕೆಯಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಸ್ಥಿರವಾದ ವೇಗವನ್ನು ಮುಂದುವರೆಸಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 32,06,356 ಕ್ಕೆ ಹೋಲಿಸಿದರೆ, ಈ ವರ್ಷದ ಏಪ್ರಿಲ್‌ನಲ್ಲಿ 34,21,997 ಪ್ರಯಾಣಿಕರೊಂದಿಗೆ 6.7% ಬೆಳವಣಿಗೆಯನ್ನು ದಾಖಲಿಸಿದೆ. ಬೆಂಗಳೂರಿನಿಂದ ಅಂತರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯು 23.7% ರಷ್ಟು ಹೆಚ್ಚಾಗಿದೆ, ಈ ವರ್ಷದ ಏಪ್ರಿಲ್‌ನಲ್ಲಿ 4,28,649 ಪ್ರಯಾಣಿಸಿದ್ದು, 2023 ರಲ್ಲಿ 3,46,467 ಮಂದಿ ಪ್ರಯಾಣಿಸಿದ್ದರು.












Click it and Unblock the Notifications