ಬೆಳಗಾವಿಯಲ್ಲಿ ಆತಂಕ ಮೂಡಿಸಿದ್ದ 'ಜೀವಂತ ಮಾರ್ಟರ್'
ಬೆಳಗಾವಿ, ಮಾ.15: ತಾಲೂಕಿನ ಬೆಳಗುಂದಿ ಸಮೀಪದ ಸೊನೊಳಿ ಗ್ರಾಮದ ಜಮೀನಿನಲ್ಲಿ ಭಾನುವಾರ ಅನುಮಾನಾಸ್ಪದ ವಸ್ತು ಪತ್ತೆಯಾಗಿ ಗ್ರಾಮಸ್ಥರ ತಲೆಕೆಡಿಸಿತ್ತು. ಕೊನೆಗೆ ಇದು ಬಾಂಬ್ ಮಾದರಿಯ ವಸ್ತು ಇದನ್ನು ರಾಕೆಟ್ ಲಾಂಚರ್ ರೀತಿ ಇರೋ ಮಾರ್ಟರ್ ಎನ್ನುತ್ತಾರೆ ಎಂದು ತಿಳಿದು ಕೊಂಡ ಸ್ಥಳೀಯ ಪೊಲೀಸರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
ಅಶೋಕ ಪಾಟೀಲ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ನಿಗೂಢ ವಸ್ತು ಪತ್ತೆಯಾಗಿ ಹಲವು ಗಂಟೆಗಳು ಕಳೆದರೂ ಯಾರಿಗೂ ಇದು ಏನು ಎಂದು ತಿಳಿಯಲು ಸಾಧ್ಯವಾಗಿರಲಿಲ್ಲ. ಒಟ್ಟಾರೆ ಇದು ಸ್ಫೋಟಕದ ಕಚ್ಚಾವಸ್ತು ಇರಬಹುದು ಎಂಬ ಅನುಮಾನ ಗ್ರಾಮಸ್ಥರಲ್ಲಿ ಮೂಡಿತ್ತು.

ಕಳೆದ ರಾತ್ರಿ ಜಮೀನಿನಲ್ಲಿ ಈ ವಸ್ತು ನೋಡಿದೆ ಎಂದು ಕೆಲವರು ಹೇಳಿದ್ದರು. ಗಾಬರಿ, ಕುತೂಹಲದಿಂದ ಹಲವಾರು ಮಂದಿ ಮಾರ್ಟರ್ ನೋಡಲು ಜಯಾಯಿಸತೊಡಗಿದರು. ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ತಕ್ಷಣ ಗ್ರಾಮೀಣ ಪೊಲೀಸ್ ಠಾಣೆ ಸಿಬಂದಿ ಸ್ಥಳಕ್ಕೆ ದೌಡಾಯಿಸಿ, ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.
ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಕರೆಸಿಕೊಂಡು ಮಾರ್ಟರ್ ನಿಷ್ಕ್ರಿಯಗೊಳಿಸಲು ಸಮಯಾವಕಾಶ ಕಡಿಮೆ ಇತ್ತು.ಮರಾಠಾ ಲೈಟ್ ಇನ್ಫ್ರೆಂಟಿ ರಿಜಿಮೆಂಟಲ್ ಸೆಂಟರ್ ಹಾಗೂ ಸಿಆರ್ ಪಿಎಫ್ ಪೊಲೀಸ್ ನೆರವಿನಿಂದ ಬಾಂಬ್ ನಿಷ್ಕ್ರಿಯ ಗೊಳಿಸಲಾಯಿತು.
ಸಣ್ಣ ಪ್ರಮಾಣದ ಸ್ಫೋಟದ ಜೊತೆಗೆ ಯಾವುದೇ ಹಾನಿ ಇಲ್ಲದೆ ಪರಿಸ್ಥಿತಿ ತಿಳಿಗೊಂಡಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬೆಂಗಳೂರಿನಿಂದ ತಜ್ಞರನ್ನು ಕರೆಸಿಕೊಂಡು ತನಿಖೆ ಮುಂದುವರೆಸಲಾಗುವುದು ಎಂದು ಪೊಲೀಸ್ ಆಯುಕ್ತ ಎಸ್ ರವಿ ಹೇಳಿದ್ದಾರೆ.












Click it and Unblock the Notifications