250 ರೂಪಾಯಿ ನೀಡಿ, ಬೆಂಗಳೂರು ನೋಡಿ
ಬೆಂಗಳೂರು.ಮೇ.31: ನೀವು ಈಗ 250 ರೂ. ನೀಡಿ ಇಡೀ ಬೆಂಗಳೂರು ನಗರವನ್ನು ಐಷಾರಾಮಿ ವೋಲ್ವೋ ಬಸ್ಸಿನಲ್ಲಿ ಸುತ್ತು ಹಾಕಬಹುದು.
ಬೆಂಗಳೂರು ರೌಂಡ್ಸ್ ಮಾದರಿಯಲ್ಲಿ ಏಳು 'ಹಾಪ್ ಆನ್, ಹಾಪ್ ಆಫ್' ಬಸ್‌ಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಚಾಲನೆ ನೀಡಿದೆ. ಈ ಬಸ್‌ಗಳು ನಗರದ ಐತಿಹಾಸಿಕ, ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವವನ್ನು ಒಳಗೊಂಡ ನಗರದ 21 ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಲಿವೆ.
ಪ್ರತಿ ದಿನ ಬೆಳಿಗ್ಗೆ 8.30ಕ್ಕೆ ನಗರದ ವಿವಿಧ ಬಸ್ ನಿಲ್ದಾಣದಿಂದ ಹೊರಡುವ 7 ಹವಾನಿಯಂತ್ರಿತ ವೋಲ್ವೊ ಬಸ್‌ಗಳು ರಾತ್ರಿ 10 ಗಂಟೆಯವರೆಗೂ 30 ರಿಂದ 45 ನಿಮಿಷಗಳಿಗೆ ಒಂದರಂತೆ ನಿಗದಿತ ಮಾರ್ಗಗಳಲ್ಲಿ ಸಂಚರಿಸಲಿವೆ. ಒಂದು ದಿನದ ಬೆಂಗಳೂರು ರೌಂಡ್ಸ್ ಟಿಕೆಟ್ ಖರೀದಿಸಿದವರು ನಿಗದಿತ ಸ್ಥಳಗಳನ್ನು ವೀಕ್ಷಿಸಿ ಬೇರೊಂದು ಬೆಂಗಳೂರು ರೌಂಡ್ಸ್ ಬಸ್‌ನಲ್ಲಿ ನಗರ ದರ್ಶನ ಮುಂದುವರೆಸಬಹುದು.
ಈ ಟಿಕೆಟ್ ಖರೀದಿಸಿರುವವರು ವಾಯು ವಜ್ರ ಬಸ್‌ಗಳನ್ನು ಹೊರತುಪಡಿಸಿ ಬಿಎಂಟಿಸಿಯ ಎಲ್ಲಾ ಬಸ್‌ಗಳಲ್ಲೂ ಪ್ರಯಾಣಿಸಬಹುದು. ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನೂ ಈ ಸೇವೆ ಒಳಗೊಂಡಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಸೇವೆ ಆರಂಭವಾಗಲಿದೆ.
ದೊಡ್ಡವರಿಗೆ ಈ ಸೇವೆಗೆ 250 ರೂ. ಶುಲ್ಕ, 6 ರಿಂದ 12 ವರ್ಷದ ವರೆಗಿನ ಮಕ್ಕಳಿಗೆ 150. ರೂ. ಶುಲ್ಕವನ್ನು ಬಿಎಂಟಿಸಿ ನಿಗದಿ ಪಡಿಸಿದೆ.

ಭೇಟಿ ನೀಡುವ 21 ತಾಣಗಳು
ಕೆಂಪೇಗೌಡ ಬಸ್ ನಿಲ್ದಾಣ
ಟಿಪ್ಪು ಸುಲ್ತಾನ್ ಅರಮನೆ
ಬಸವನ ದೇವಸ್ಥಾನ
ಗವಿಗಂಗಾಧರೇಶ್ವರ ದೇವಸ್ಥಾನ
ಲಾಲ್‌ಬಾಗ್
ಸ್ವತಂತ್ರ ಉದ್ಯಾನ
ಜವಹರಲಾಲ್ ನೆಹರು ತಾರಾಲಯ
ವಿಧಾನಸೌಧ/ ಹೈ ಕೋರ್ಟ್
ಕಬ್ಬನ್ ಪಾರ್ಕ್/ ಯುಬಿ ಸಿಟಿ/ ಸರ್ ಎಂ. ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ/ ವೆಂಕಟಪ್ಪ ಚಿತ್ರಕಲಾ ಪ್ರದರ್ಶನ ಮಂದಿರ/ ಬಾಲಭವನ
ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ
ಬೆಂಗಳೂರು ಸೆಂಟ್ರಲ್ ಮಾಲ್
ಗರುಡ ಮಾಲ್
ಹಲಸೂರು ಗುರುದ್ವಾರ
ಹಲಸೂರು ಕೆರೆ
ಕಮರ್ಷಿಯಲ್ ಸ್ಟ್ರೀಟ್
ಸಂತ ಮೇರಿ ದೇವಾಲಯ
ಫನ್ ವರ್ಲ್ಡ್/ ಸ್ನೋ ಸಿಟಿ
ಲುಂಬಿನಿ ಉದ್ಯಾನ
ಇಸ್ಕಾನ್ ದೇವಸ್ಥಾನ
ಓರಿಯನ್ ಮಾಲ್
ಸ್ಯಾಂಕಿ ಟ್ಯಾಂಕ್
ಮಂತ್ರಿ ಸ್ಕ್ವೇರ್
ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಬಹುದು:www.mybmtc.com












Click it and Unblock the Notifications